ಭೂಮಿ ಬಾಯ್ಬಿಟ್ಟು ನಾವು ಒಳಗೆ ಹೋದೆವು ಎಂದು ಭಾವಿಸಿದ್ದೆ; ಕಟ್ಟಡ ದುರಂತದಲ್ಲಿ ಬದುಕುಳಿದ ಪ್ರೇಮಾ

ಆಸ್ಪತ್ರೆಯ ಕೋಣೆಯ ಬೆಡ್ ಮೇಲೆ ಕಣ್ಣರಳಿಸಿ ಮಲಗಿದ ಪ್ರೇಮ ಉಂಕಾಲ ಬಾಯಲ್ಲಿ ಗೊಣಗುತ್ತಿದ್ದ ಮಾತು...
ಬದುಕುಳಿದ ಪ್ರೇಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಬದುಕುಳಿದ ಪ್ರೇಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಧಾರವಾಡ: ಆಸ್ಪತ್ರೆಯ ಕೋಣೆಯ ಬೆಡ್ ಮೇಲೆ ಕಣ್ಣರಳಿಸಿ ಮಲಗಿದ ಪ್ರೇಮ ಉಂಕಾಲ ಬಾಯಲ್ಲಿ ಗೊಣಗುತ್ತಿದ್ದ ಮಾತು ಒಂದೇ ನಾನು ಇಲ್ಲಿಂದ ಹೋಗ್ಬೇಕು ಎಂದು, ಮೊನ್ನೆ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಪ್ರೇಮ ಮತ್ತು ಅವರ 8 ವರ್ಷದ ಮಗಳು ಅವಶೇಷಗಳಡಿಯಲ್ಲಿ ಸಿಲುಕಿ ಬದುಕಿ ಹೊರಬಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಅವರು ವಿವರಿಸಿದ್ದು ಹೀಗೆ:
''ಅವಶೇಷಗಳಡಿ ಸಿಕ್ಕಿಹಾಕಿಕೊಂಡಾಗ ನಾನು ಮಗಳಲ್ಲಿ ನಾವು ಹೊರಬರುತ್ತೇವೆ, ಹೋಗೋಣ ಇರು, ಹೋಗೋಣ ಇರು ಎಂದೇ ಹೇಳುತ್ತಿದ್ದೆ, ನಾವು ಹೋಗೋಣ ಅಮ್ಮ ಎಂದು ನನ್ನ ಮಗಳು ಕೂಡ ಹೇಳುತ್ತಿದ್ದಳು. ಅವಳಿಗೆ ನಾನು ಧೈರ್ಯ ತುಂಬುತ್ತಿದ್ದೆ. ನಾವು ಯಾವಾಗ ಮಾತನಾಡುವುದು ನಿಲ್ಲಿಸಿದೆವು, ತಾಯಿ-ಮಗಳು ಯಾವಾಗ ದೂರವಾದೆವು ಗೊತ್ತಿಲ್ಲ, ನನ್ನನ್ನು ಹೊರತಂದಾಗ ನನ್ನ ಮಗಳು ನನ್ನ ಜೊತೆಗಿರಲಿಲ್ಲ''.
''ಹೊರಪ್ರಪಂಚದಿಂದ ನಾವು ಸಂಪೂರ್ಣವಾಗಿ ದೂರವಾಗಿದ್ದೆವು, ಆಚೀಚೆ ಸರಿದಾಡಿ ನನ್ನ ಮಗಳತ್ತ ಹೋಗಲು ದಾರಿಯೇ ಇರಲಿಲ್ಲ. ನೀರು ಕೂಡ ಇರಲಿಲ್ಲ. ನನ್ನ ನಾಲಿಗೆ ಒದ್ದೆಯಾಗಲು ನನ್ನ ಬ್ಯಾಗನ್ನು ನಾಲಿಗೆಯಿಂದ ನೆಕ್ಕಿ ಒದ್ದೆ ಮಾಡಿಕೊಂಡು ಕಷ್ಟಪಟ್ಟು ಮಾತನಾಡಲು ಪ್ರಯತ್ನಿಸುತ್ತಿದ್ದೆ. ನಾನು ಎಷ್ಟು ಹೊತ್ತು ಅಲ್ಲಿ ಸಿಕ್ಕಿಹಾಕಿಕೊಂಡಿದ್ದೆ ಎಂದೇ ನನಗೆ ಗೊತ್ತಿಲ್ಲ, ಯಾರೋ ಬಂದು ನನ್ನ ತಲೆ ಮುಟ್ಟಿದಾಗ ನಮ್ಮನ್ನು ಬಚಾವ್ ಮಾಡಲು ಯಾರೋ ಬಂದಿದ್ದಾರೆ ಎಂದು ಗೊತ್ತಾಯಿತು. ನಾನು ಹೊರಗೆ ಬಂದು ನೋಡಿದಾಗ ನನ್ನ ಮಗ ಶ್ರೀಕಾಂತ್ ನಿಂತಿದ್ದ.
ದುರ್ಘಟನೆ ನಡೆದಾಗ ಭೂಮಿ ಬಾಯ್ಬಿಟ್ಟು ನಾನು ಭೂಮಿಯೊಳಗೆ ಹೋದೆ ಎಂದೇ ಭಾವಿಸಿದ್ದೆ. ಕಟ್ಟಡ ನಮ್ಮ ಮೇಲೆ ಬಿತ್ತು ಎಂದು ಗೊತ್ತಾಗಲು ಕೆಲ ಸಮಯವೇ ಹಿಡಿಯಿತು. ಪಕ್ಕದ ಬ್ಲಾಕ್ ನವರು ಹೆಲ್ಪ್ ಮಾಡಿ, ಹೆಲ್ಪ್ ಮಾಡಿ ಎಂದು ಜೋರಾಗಿ ಕಿರುಚಿಕೊಳ್ಳುತ್ತಿದ್ದುದು ಕೇಳಿಸಿತು, ನೀರು ಬೇಕು, ನೀರು ಬೇಕು ಎಂದು ಕೂಗುತ್ತಿದ್ದರು. ಕೆಲ ಹೊತ್ತು ಕಳೆದ ನಂತರ ದೇವರನ್ನು ಬೇಡಿಕೊಳ್ಳುತ್ತಾ ಕ್ಷಮಿಸಿಬಿಡು ದೇವರೇ ಎಂದು ಬೇಡಿಕೊಳ್ಳುತ್ತಿದ್ದರು. ಸುತ್ತಲೂ ಕತ್ತಲು, ಸಿಮೆಂಟ್ ಪುಡಿ ನಮ್ಮ ಮೇಲೆ ಬೀಳುತ್ತಿತ್ತು. ಹೀಗಾಗಿ ಅದು ರಾತ್ರಿಯೇ ಹಗಲೇ ಎಂದು ಕೂಡ ನಮಗೆ ಗೊತ್ತಾಗುತ್ತಿರಲಿಲ್ಲ ಎನ್ನುತ್ತಾರೆ ಪ್ರೇಮಾ.
ಪ್ರೇಮಾ ತಮ್ಮ ಮಗಳು ಮತ್ತು ಸ್ನೇಹಿತೆಯೊಂದಿಗೆ ಏನೋ ವಸ್ತು ಖರೀದಿಸಲೆಂದು ಕಾಂಪ್ಲೆಕ್ಸ್ ಗೆ ಹೋಗಿದ್ದರು. ಕಾಂಪ್ಲೆಕ್ಸ್ ನಿಂದ ಹೊರಬರುತ್ತಿರುವಾಗ ಕಟ್ಟಡ ಕುಸಿದುಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ದಿವ್ಯಾ ಅಳಲು ಆರಂಭಿಸಿದಳು. ನಾವು ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡೆವು. ಅಷ್ಟು ಹೊತ್ತಿಗೆ ಕಡ್ಡಡದ ಭಾಗಗಳು ನಮ್ಮ ಸುತ್ತ ಸುತ್ತುವರಿದು ಕತ್ತಲು ಆವರಿಸಿತ್ತು ಎಂದು ಘಟನೆಯನ್ನು ನೆನಪು ಮಾಡಿಕೊಂಡರು ಪ್ರೇಮಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com