ಸಚಿವ ಶಿವಳ್ಳಿ ನಿಧನ: ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರ ಕಂಬನಿ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ....
ಸಚಿವ ಶಿವಳ್ಳಿ
ಸಚಿವ ಶಿವಳ್ಳಿ
ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ತೀವ್ರ ಸಂತಾಪ ವ್ಯಕ್ತಪಡಿಸಿ‍ದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶಿವಳ್ಳಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಕರ್ನಾಟಕ ಸಚಿವ  ಸಿ.ಎಸ್. ಶಿವಳ್ಳಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪವನ್ನು ತಿಳಿಸುತ್ತೇನೆ. ಕರ್ನಾಟಕಕ್ಕೆ ಶಿವಳ್ಳಿಯವರು ನೀಡಿರುವ ಸೇವೆಗಾಗಿ ಅವರನ್ನು ನೆನೆಯಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಮೋದಿ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಿವಳ್ಳಿ ಅವರ ನಿಧನಕ್ಕೆ  ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಕುಂದಗೋಳ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಜನಾನುರಾಗಿ ಶಿವಳ್ಳಿ ಅವರಿಗೆ ಸಮಾಜಮುಖಿ ಕೆಲಸಗಳು ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ಅವರ ಕುಟುಂಬ ವರ್ಗಕ್ಕೆ ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ. 
ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಳೆದ 2 ದಿನಗಳ ಹಿಂದಷ್ಟೇ ನನ್ನನ್ನು ಭೇಟಿಯಾಗಿ, ಚುನಾವಣಾ ತಯಾರಿ ಬಗ್ಗೆ ಮಾತುಕತೆ  ನಡೆಸಿದ್ದರು. ಈಗ ಶಿವಳ್ಳಿ ಅವರು ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.
ಬಡಕುಟುಂದಿಂದ ಬಂದಿದ್ದ  ಅವರು ಹೋರಾಟದ ಹಾದಿಯ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಶಿವಳ್ಳಿ ಅವರು ಸರಳ ಹಾಗೂ ಸಭ್ಯ ರಾಜಕಾರಣಿ. ಜನಪರ ಕಾಳಜಿಯಿಂದಾಗಿ 3 ಬಾರಿ ಶಾಸಕರಾಗಿದ್ದ ಅವರು ತಮಗೆ ಆತ್ಮೀಯ ಮಿತ್ರರಾಗಿದ್ದರು. ಇನ್ನೂ ಹಲವು ವರ್ಷಗಳ ಕಾಲ ಅವರ ಸೇವೆ ನಮಗೆ ಲಭ್ಯವಾಗಬೇಕಿತ್ತು, ಆದರೆ ಅವರ ಅಕಾಲಿಕ ಮರಣದಿಂದ  ವೈಯಕ್ತಿಕವಾಗಿ ತಮಗೆ ಸಾಕಷ್ಟು ನೋವಾಗಿದೆ. ಬಡಪರ  ಅಪಾರ ಕಾಳಜಿಯಿಟ್ಟುಕೊಂಡು, ಬಡ ಜನರ ಕಲ್ಯಾಣಕ್ಕೆ ಬದ್ಧವಾಗಿ ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಧಾರವಾಡ ಭಾಗಕ್ಕಷ್ಟೇ ಅಲ್ಲ ರಾಜ್ಯ ರಾಜಕಾರಣಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಚಿವರ ಸಾವಿನ ಸುದ್ದಿ ಆಘಾತ ತಂದಿದ್ದು, ಇದನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಶಿವಳ್ಳಿ ಅವರ ಕುಟುಂಬಕ್ಕೆ, ಬಂಧುಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸಜ್ಜನ ರಾಜಕಾರಣಿ ಶಿವಳ್ಳಿ ಅವರು, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ  ದಿ.ಎಸ್.ಬಂಗಾರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಮೃತರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಜಯಮಾಲಾ,  ಸರಳ ಸಜ್ಜನ ಸಚಿವರಾಗಿದ್ದ ಶಿವಳ್ಳಿಯವರು ತಮ್ಮ ಆತ್ಮೀಯ ಸಹೋದ್ಯೋಗಿಯಾಗಿದ್ದರು. ಅವರ ಅಕಾಲಿಕ ನಿಧನ ದಿಗ್ಭ್ರಾಂತಿ ಮೂಡಿಸಿದೆ. ಮಿತಭಾಷಿಯಾಗಿದ್ದ ಅವರು ಉತ್ತರ ಕರ್ನಾಟಕದ ಹಿರಿಯ ಜನಪ್ರತಿನಿಧಿ, ಪೌರಾಡಳಿತ ಸಚಿವರಾಗಿ ನಾಡಿನ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜನಸಾಮಾನ್ಯರ ದುಃಖ-ದುಮ್ಮಾನಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೂ ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ಅನುಭವಿ ಮತ್ತು ನಿಷ್ಠಾವಂತ ಮುಖಂಡರನ್ನು ಕಳೆದುಕೊಂಡಿರುವುದರಿಂದ ಸರ್ಕಾರಕ್ಕೆ, ಪಕ್ಷಕ್ಕೆ ಹಾಗೂ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ  ಆತ್ಮಕ್ಕೆ ಚಿರಶಾಂತಿ- ಸದ್ಗತಿ ಸಿಗುವಂತಾಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com