ಮಳೆ ನೀರು ಕೊಯ್ಲು ಅಳವಡಿಸಿಲ್ಲವೇ, ನಿಮ್ಮ ಮನೆಗೆ ನೀರಿನ ಸರಬರಾಜು ಕಡಿಮೆ- ಜಲಮಂಡಳಿ ಎಚ್ಚರಿಕೆ

ನಗರದಲ್ಲಿ ಮಳೆ ನೀರು ಕೊಯ್ಲು ಅವಶ್ಯವಾಗಿದ್ದರೂ, ಇಲ್ಲಿಯವರೆಗೆ ಅದನ್ನು ಅಳವಡಿಸದ ಮನೆಗಳಿಗೆ ಕಾವೇರಿ ನೀರಿನ ಸರಬರಾಜಿಗೆ ಮಿತಿ ಹೇರಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಮಳೆ ನೀರು ಕೊಯ್ಲು ಅವಶ್ಯವಾಗಿದ್ದರೂ, ಇಲ್ಲಿಯವರೆಗೆ ಅದನ್ನು ಅಳವಡಿಸದ ಮನೆಗಳಿಗೆ ಕಾವೇರಿ ನೀರಿನ ಸರಬರಾಜಿಗೆ ಮಿತಿ ಹೇರಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

ವಿಶ್ವ ಜಲದಿನದ ಅಂಗವಾಗಿ ಹೊಸ ನಿಯಮಗಳ ಅಧಿಸೂಚನೆ ಹೊರಡಿಸಿರುವ ಜಲಮಂಡಳಿ, ನಗರದಲ್ಲಿ ಮಳೆನೀರು ಕೊಯ್ಲು ಯೋಜನೆಯ ಯಶಸ್ವಿ ಜಾರಿಗೆ ಮುಂದಾಗಿದೆ. ಮಳೆನೀರು ಕೊಯ್ಲು ಅಳವಡಿಸಿಕೊಂಡಿರುವ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಆಯಾ ಪ್ರದೇಶದ ನಿವಾಸಿಗಳ ಕಲ್ಯಾಣ ಸಂಘಗಳಿಂದ ಮಾಹಿತಿ ಪಡೆಯಲಾಗುವುದು. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಸೂಚನೆ ತಿಳಿಸಿದೆ.

ನಿವಾಸಿಗಳ ಕಲ್ಯಾಣ ಸಂಘ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಗರದಲ್ಲಿರುವ ಎಲ್ಲ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ತಪಾಸಣೆ ನಡೆಸಿ, ಅಪಾರ್ಟ್ ಮೆಂಟ್‍ಗಳಲ್ಲಿ ನಿಯಮಾನುಸಾರ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲದಿರುವುದು ಕಂಡುಬಂದಲ್ಲಿ, ವಿದ್ಯುತ್ ಸರಬರಾಜು ಇಲಾಖೆಗೆ ದೂರು ನೀಡಲಾಗುವುದು ಹಾಗೂ ನೀರಿನ ಸರಬರಾಜು ಕಡಿಮೆ ಮಾಡಲಾಗುವುದು ಎಂದು ಅಧಿಸೂಚನೆ ಎಚ್ಚರಿಕೆ ನೀಡಿದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿರುವ ಅಪಾರ್ಟ್ ಮೆಂಟ್‍ ಗಳಲ್ಲಿ ಹೆಚ್ಚುವರಿ ನೀರು ಉಳಿದಲ್ಲಿ ಅದನ್ನು ಜೋಡಿ ಕೊಳವೆಯ ಮೂಲಕ ಜಲಮಂಡಳಿಯಿಂದ ಅನುಮತಿ ಪಡೆದಿರುವ ಇತರ ಅಪಾರ್ಟ್ ಮೆಂಟ್ ಹಾಗೂ ಮನೆಗಳಿಗೆ ಪೂರೈಕೆ ಮಾಡಬಹುದು.
ಬಹುಮಹಡಿ ಕಟ್ಟಡಗಳಲ್ಲಿ ಅತ್ಯಂತ ಕಡಿಮೆ ನೀರು ಬಳಸುವ ವ್ಯಕ್ತಿಗಳನ್ನು ಜಲಮಂಡಳಿಯ ತಜ್ಞರ ಸಮಿತಿಗೆ ಸೇರಿಸಿ ಅವರ ಸಲಹೆಗಳನ್ನು ಪಡೆಯಲಾಗುವುದು. 2011ರಿಂದ ಇಲ್ಲಿಯವರೆಗೆ ವಸತಿ ಪ್ರದೇಶಗಳಿಗೆ  ನೀಡಲಾಗಿರುವ 20 ಸಾವಿರ ಕೊಳವೆ ಬಾವಿಗಳ  ಮಾಹಿತಿ ಪಡೆದು, ಅದರ ದುರುಪಯೋಗ ಮಾಡಿಕೊಳ್ಳುತ್ತಿರುವ ಟ್ಯಾಂಕರ್ ಮಾಲೀಕರ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com