ಉಮೇಶ್ ಜಾಧವ್ ರಾಜೀನಾಮೆ: ತೀರ್ಪು ಕಾಯ್ದಿರಿಸಿದ ಸ್ಪೀಕರ್

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್​ ಜಾಧವ್ ಅವರು​ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಮತ್ತು ಅವರ ವಿರುದ್ಧ ಅನರ್ಹ ಪ್ರಕರಣದ...
ಉಮೇಶ್ ಜಾಧವ್ ವಿಚಾರಣೆ
ಉಮೇಶ್ ಜಾಧವ್ ವಿಚಾರಣೆ
ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್​ ಜಾಧವ್ ಅವರು​ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಮತ್ತು ಅವರ ವಿರುದ್ಧ ಅನರ್ಹ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್​ ರಮೇಶ್​ ಕುಮಾರ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಜಾಧವ್ ಅವರು ಇಂದು ವಿಧಾಸೌಧದ ಸ್ಪೀಕರ್ ಕೊಠಡಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ರಾಜೀನಾಮೆ ಅಂಗೀಕಾರ ಮತ್ತು ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಿದೆ. ನಾನು ತೀರ್ಪು ನೀಡಲು ಇನ್ನೂ ಕಾಲಾವಕಾಶ ಬೇಕಿದೆ ಎಂದರು.
ವಿಪ್ ಉಲ್ಲಂಘಿಸಿ ಅಶಿಸ್ತಿನ ವರ್ತನೆ ತೋರಿರುವ ಜಾಧವ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ವಿಧಾನಸಭೆ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್‍ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ''ಜಾಧವ್‌ ಅವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಬೆಂಬಲಿಸಿದ್ದೇವೆ.  ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ನಮ್ಮ ಪ್ರತಿನಿಧಿಯಾಗಿ ಕೆಲಸ  ಮಾಡಬೇಕಿತ್ತು. ಅದನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವರ್ತನೆಯನ್ನು ಖಂಡಿಸಿ ಜಾಧವ್‌ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಿಸ್ತು ಕ್ರಮ ಕೈಗೊಳ್ಳಬೇಕು,'' ಎಂದು ಚಿಂಚೋಳಿ  ಕ್ಷೇತ್ರದ ಕೆಲ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೆಲ ಮತದಾರರು ಸ್ಪೀಕರ್‌ ಅವರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದರು. 
ಈ ಸಂಬಂಧ ಜಮಜಾಯಿಷಿ ನೀಡುವಂತೆ ಸ್ಪೀಕರ್, ಜಾಧವ್‍ ಅವರಿಗೆ ನೊಟೀಸ್ ನೀಡಿದ್ದರು.  ಸಂಬಂಧಪಟ್ಟ  ದೂರುಗಳನ್ನು ಆಲಿಸಲು ಮಾರ್ಚ್ 25ರಂದು ದಿನಾಂಕ ನಿಗದಿಪಡಿಸಿದ್ದರು.
ಇಂದು ವಿಧಾನಸೌಧದ ಸಭಾಧ್ಯಕ್ಷರ ಕೊಠಡಿಯಲ್ಲಿ ಬಹಿರಂಗ ವಿಚಾರಣೆ ನಡೆಸಿದರು. 
ಕಾಂಗ್ರೆಸ್ ಪರವಾಗಿ  ವಕೀಲ ಶಶಿಕಿರಣ್ ವಾದ ಮಂಡಿಸಿ, ಕಾಂಗ್ರೆಸ್ ಶಾಸಕರಾಗಿರುವ ಜಾಧವ್ ಅವರು ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಬಿಜೆಪಿ ಸೇರುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ವಾದಿಸಿದರು.
ಇದಕ್ಕೆ ಪ್ರತಿಯಾಗಿ ಜಾಧವ್ ಪರ ವಕೀಲ ಸಂದೀಪ್ ಪಾಟೀಲ್, ಜಾಧವ್ ಅವರು ಮಾ.4 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮಾ.6 ರಂದು ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಯಾವುದೇ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ರಾಜೀನಾಮೆಯನ್ನು ಮೊದಲು ಅಂಗೀಕರಿಸಬೇಕು. ನಂತರ ಕಾಂಗ್ರೆಸ್ ಕೊಟ್ಟಿರುವ ಅನರ್ಹತೆ ವಿಚಾರಣೆ ಮುಂದುವರೆಸಬಹುದು ಎಂದು ಪ್ರತಿವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದಾರೆ.
ಡಾ. ಜಾಧವ್ ಸ್ಪರ್ಧೆಯ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದರ ಬಗ್ಗೆ ನಾನೂ ಏನನ್ನೂ ಹೇಳುವುದಿಲ್ಲ. ಮತದಾರರ ಅಭಿಪ್ರಾಯವನ್ನು ಚುನಾಯಿತ ಪ್ರತಿನಿಧಿಯಾಗಿ ರಾಜೀನಾಮೆ ಕೊಡುವಾಗ ಅವರು ಕೇಳಿದ್ದಾರೊ ಇಲ್ಲವೋ ಎಂಬುದನ್ನು ಆಲಿಸಿದ್ದೇನೆ. ಪ್ರಜಾಪ್ರತಿನಿಧಿ ಕಾಯ್ದೆಯ 10ನೇ ಪರಿಚ್ಛೇಧದ ಅಡಿ ಜಾಧವ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ವಿಚಾರಣೆ ಬಳಿಕ ಮಾತನಾಡಿರುವ ಉಮೇಶ ಜಾಧವ್ ಅವರು, ಸ್ಪೀಕರ್ ಮುಂದೆ ಹೇಳಿಕೆ ಮಂಡಿಸಿದ್ದೇನೆ.  ಈಗ ನಾನೇನೂ ಹೇಳಲ್ಲ. ಆರೇಳು ತಿಂಗಳಲ್ಲಿ ಏನೇನೂ ಆಗಿದೆ ಅಂತಾ ಎಲ್ಲರಿಗೂ ಗೊತ್ತಿದೆ. ‌ಸದ್ಯಕ್ಕೆ ಸ್ಪೀಕರ್​ಗೆ ರಾಜೀನಾಮೆ ನೀಡಿದ್ದೇನೆ.‌ ಕೂಡಲೇ ಅಂಗೀಕರಿಸುವಂತೆ ಮನವಿ ಮಾಡಿದ್ದೇನೆ. ಮುಂದೆ ನೋಡೋಣ ಏನಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com