ಚುನಾವಣೆ, ಹಬ್ಬದ ನೆಪದಲ್ಲಿ ಬಸ್ ದರ ಏರಿಕೆ ಮಾಡಿದರೆ ದಂಡ: ಖಾಸಗಿ ಬಸ್‍ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಏಕಾಏಕಿ ಟಿಕೆಟ್ ದರ ಏರಿಕೆ...

Published: 28th March 2019 12:00 PM  |   Last Updated: 28th March 2019 04:50 AM   |  A+A-


Transport department warns private bus owners over spiking ticket price during festivals

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಏಕಾಏಕಿ ಟಿಕೆಟ್ ದರ ಏರಿಕೆ ಮಾಡುವ ಖಾಸಗಿ ಬಸ್‍ ಗಳ ಮೇಲೆ ಈ ಬಾರಿ ರಾಜ್ಯ ಸಾರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗ ಕಣ್ಣಿಡಲಿದೆ.

ಚುನಾವಣಾ ಸಂದರ್ಭದಲ್ಲಿ ಬಸ್‍ಗಳ ದರ ಏರಿಕೆ ಕುರಿತು ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಜ್ಯ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ ಹಾಗೂ ಕೆಎಸ್‍ಆರ್ ಟಿಸಿ ಅಧಿಕಾರಿಗಳೊಂದಿಗೆ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಸಭೆ ನಡೆಸಿ,  ನಿಯಮ ಉಲ್ಲಂಘಿಸಿ ಪ್ರಯಾಣ ದರ ಹೆಚ್ಚಳ ಮಾಡುವವರಿಗೆ ಭಾರಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬ ಹರಿದಿನಗಳು, ದೀರ್ಘಾವಧಿ ರಜೆಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಖಾಸಗಿ ಬಸ್‍ಗಳು ಏಕಾಏಕಿ ಪ್ರಯಾಣದ ದರವನ್ನು ಮನಸ್ಸೋ ಇಚ್ಚೆ ಹೆಚ್ಚಿಸುವ ಕುರಿತು ಹಲವು ದೂರುಗಳು ಬಂದಿವೆ. ಈ ಬಾರಿ ಚುನಾವಣೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್ ದರಗಳ ಮೇಲೆ ತೀವ್ರ ನಿಗಾ ಇರಿಸಲಾಗುವುದು. ಚುನಾವಣಾ ಆಯೋಗ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು. 

ಕೆಎಸ್‍ಆರ್ ಟಿಸಿ ಬಸ್‍ಗಳಿಗೆ ವಿಶೇಷ ಸಂದರ್ಭದಲ್ಲಿ ಪ್ರಯಾಣ ದರವನ್ನು ಶೇ.10ರಿಂದ 20ರಷ್ಟು ಹೆಚ್ಚಿಸಲು ಅವಕಾಶವಿದೆ. ಖಾಸಗಿ ಬಸ್‍ಗಳು ಅಲ್ಪಸ್ವಲ್ಪ ದರ ಹೆಚ್ಚಳ ಮಾಡಿದರೆ ಅನುಮತಿ ನೀಡಬಹುದು. ಆದರೆ, ಅವರು ಅನಿಯಮಿತವಾಗಿ ದರ ಹೆಚ್ಚಳ ಮಾಡುತ್ತಾರೆ. ಇದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

59 ಪರ್ಮಿಟ್ ರದ್ದು
ಸಾರಿಗೆ ಬಸ್‍ಗಳ ಅನಿಯಮಿತ ದರ ಹೆಚ್ಚಳ, ಕಾನೂನುಬಾಹಿರ ಚಾಲನೆ, ದಾಖಲೆರಹಿತ  ವಾಹನ ಚಲಾವಣೆ ಸೇರಿ ಹಲವು ದೂರುಗಳಿಗೆ ಸಂಬಂಧಿಸಿದಂತೆ 2018ರ ನವೆಂಬರ್ ನಿಂದ 2019ರ ಫೆಬ್ರವರಿವರೆಗೆ 59 ಬಸ್‍ಗಳ ಪರ್ಮಿಟ್ ರದ್ದು ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. 

ಈ ಅವಧಿಯಲ್ಲಿ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ 842 ತನಿಖಾ ವರದಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 249 ವರದಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಹಿಂದಿರುಗಿಸಲಾಗಿದೆ. 593 ತನಿಖಾ ವರದಿ ಸಂಬಂಧ ಆರೋಪಿಗಳಿಗೆ ನೋಟಿಸ್‍ ಜಾರಿ ಮಾಡಲಾಗಿದೆ. ರೂಢಿಗತವಾಗಿ ಅಪರಾಧವೆಸಗುತ್ತಿದ್ದ  584 ಬಸ್ ಗಳ ರಹದಾರಿ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಸೂಚನೆ ಮೇರೆಗೆ 1989ರ ಮೋಟಾರು ವಾಹನ ನಿಯಮಗಳ ಉಪನಿಯಮ 81(ಎ) ಅನುಸಾರ 368 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿದ್ದು, ಒಟ್ಟು 1.35 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ದರ ಹೆಚ್ಚಳದ ಪ್ರಸ್ತಾವನೆ ಸರ್ಕಾರಕ್ಕೆ 
2014ರ ನಂತರ ರಾಜ್ಯ ಸರ್ಕಾರ ಸಾರಿಗೆ ಬಸ್‍ಗಳ ಪ್ರಯಾಣದ ದರ ಹೆಚ್ಚಳ ಮಾಡಿಲ್ಲ. ಇದರಿಂದ ಬಸ್‍ಗಳ ಕಾರ್ಯಾಚರಣೆಗೆ ಆರ್ಥಿಕ ಕೊರತೆ ಉಂಟಾಗಿದೆ. ಆದ್ದರಿಂದ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಸರ್ಕಾರಿ ಹಾಗೂ ಖಾಸಗಿ ಬಸ್‍ ಮಾಲೀಕರು ಮನವಿ ಸಲ್ಲಿಸಿದ್ದಾರೆ. ಶೇ.18ರಷ್ಟು ಪ್ರಯಾಣ ದರ ಏರಿಕೆ ಮಾಡುವಂತೆ ಖಾಸಗಿ ಬಸ್‍ ಮಾಲೀಕರ ಸಂಘ ಮನವಿ ಮಾಡಿದೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಮೂರ್ನಾಲ್ಕು ತಿಂಗಳ ಹಿಂದೆಯೇ ಕಳುಹಿಸಲಾಗಿದೆ. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆಯ ನಂತರ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ . ಇದರೊಂದಿಗೆ ಅಂತಾರಾಜ್ಯ ಬಸ್‍ಗಳ ದರವನ್ನು ಕೂಡ ನಿಗದಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp