ಮಡಿಕೇರಿ: ಕಾಡಾನೆ ದಾಳಿಗೆ ರೈತ ಸಾವು, ಗ್ರಾಮಸ್ಥರಿಂದ ಪ್ರತಿಭಟನೆ

ಕಾಡಾನೆಯೊಂದರ ದಾಳಿಯಿಂದಾಗಿ ರೈತನೊಬ್ಬ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಡಿಕೇರಿ: ಕಾಡಾನೆಯೊಂದರ ದಾಳಿಯಿಂದಾಗಿ ರೈತನೊಬ್ಬ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ನಡೆದ ಘಟನೆಯಲ್ಲಿ ಶ್ರೀಮಂಗಳ ನಿವಾಸಿ ಸಿ.ಕೆ. ಸುಧಾ ಸಾವನ್ನಪ್ಪಿದ್ದಾರೆ. ಸುಧಾ  ಕೈಮಣಿ ಗ್ರಾಮದ ಸಮೀಪದ ಕಿರಾಣಿ ಅಂಗಡಿಯಿಂದ ಬೆಳಿಗ್ಗೆ ಏಳರ ಸುಮಾರಿಗೆ ಮನೆಗೆ ವಾಪಾಸಾಗುತ್ತಿದ್ದಾಗ ಕಾಡಾನೆ ಎದುರಾಗಿದೆ. ಆವೇಳೆ ಒಂಟಿ ಸಲಗ ಸುಧಾವರನ್ನು ಸೊಂಡಲಿನಿಂದೆತ್ತಿ 20 ಅಡಿ ದೂರದಲ್ಲಿ ಎಸೆದಿದೆ.
ಕುಟ್ಟ-ಶ್ರೀಮಂಗಳ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆಯನ್ನು ಇನ್ನೋರ್ವ ಗ್ರಾಮಸ್ಥ ವಿಶ್ವ ನೋಡಿದ್ದಾರೆ, ಅಲ್ಲದೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕ ಸಹ ನೋಡಿದ್ದಾರೆ. ಇಬ್ಬರೂ ಆನೆಯಿಂದ ಸುಧಾ ಅವರನ್ನು ಉಳಿಸಲು ಪ್ರಯತ್ನಿಸಿದ್ದಾರೆ.
ಆದರೆ ಆನೆಯು ಸುಧಾ ಅವರ ತಲೆಗೆ ಬಲವಾಗಿ ತುಳಿದು ಅವರನ್ನು ಸ್ಥಳದಲ್ಲೇ ಕೊಂದು ಹಾಕಿದೆ. ಬಳಿಕ ಆನೆಯು ಲಾರಿ ಮೇಲೆ ದಾಳಿ ಮಾಡಲು ಮುಂದಾದಾಗ ಲಾರಿ ಚಾಲಕ ಹೇಗೋ ತಪ್ಪಿಸಿಕೊಂಡಿದ್ದಾರೆ. 
ಸುಧಾ ಮೃತದೇಹವನ್ನು ಸಂಗ್ರಹಿಸಲು ಗ್ರಾಮಸ್ಥರು ಹೆದ್ದಾರಿಗೆ ಆಗಮಿಸಿದ್ದು ಸುಮಾರು 8.30 ರಿಂದ ಹೆದ್ದಾರಿ ತಡೆ ನಡೆಸಿದ್ದಾರೆ. ಆನೆ ದಾಳಿಗಳಿಂದ ತಮಗೆ ಶಾಸ್ವತ ಪರಿಹಾರ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
"ಪ್ರಾಣಿಗಳ ದಾಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೊಲ್ಲಲ್ಪಟ್ಟರೆ, ಸರ್ಕಾರವು ಒಂದು ಕೋಟಿ ರೂ. ನೀಡುತ್ತದೆ. ಆದರೆ ರೈತ ಕೊಲ್ಲಲ್ಪಟ್ಟರೆ, ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ  ಮಾತ್ರ ಸಿಗುತ್ತಿದೆ.ನಾವು ಆನೆಯ ದಾಳಿಯಿಂದ ಶಾಶ್ವತವಾದ ಪರಿಹಾರವನ್ನು ಬಯಸುತ್ತಿದ್ದೇವೆ""ಶ್ರೀಮಂಗಳ ರೈತಸಂಘದ ಮುಖ್ಯಸ್ಥ ನಂಜುಂಡ ಸ್ವಾಮಿ ಹೇಳಿದರು.
ಮಡಿಕೇರಿ ವನ್ಯಜೀವಿ ಎಸಿಎಫ್ ದಯಾನಂದ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅದೇ ವೇಳೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕಾಗಮಿಸಬೇಕು ಎಂದು ಗ್ರಾನಸ್ಥರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com