ಉಡುಪಿ: ಮೀನುಗಾರರ ಕುಟುಂಬದವರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ

ಕಳೆದ ಡಿಸೆಂಬರ್ ನಲ್ಲಿ ಮಲ್ಪೆಯಿಂದ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾದ ಹಿನ್ನೆಲೆ ಮೀನುಗಾರರ ಕುಟುಂಬದವರಿಂದು ಮುಖ್ಯಮಂತ್ರಿ ...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
ಉಡುಪಿ: ಕಳೆದ ಡಿಸೆಂಬರ್ ನಲ್ಲಿ ಮಲ್ಪೆಯಿಂದ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾದ ಹಿನ್ನೆಲೆ ಮೀನುಗಾರರ ಕುಟುಂಬದವರಿಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಗತ್ಯ ನೆರವು ಕೋರಿದರು. 
ಉಡುಪಿ ಜಿಲ್ಲೆಯ ಕಾಪುವಿನಲ್ಲಿ  ಭೇಟಿಯಾದ ಮೀನುಗಾರರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಡಿ. 13 ರಂದು ಸುವರ್ಣ ತ್ರಿಭುಜ ದೋಣಿಯಲ್ಲಿ ಮೀನುಗಾರಿಕೆಗಾಗಿ ಮಲ್ಪೆಯ ಇಬ್ಬರು ಹಾಗೂ ಉತ್ತರ ಕನ್ನಡ ಜಿಲ್ಲೆಯ 5 ಮಂದಿ  ಮಲ್ಪೆ ಬಂದರಿನಿಂದ ಕಡಲಿಗಿಳಿದಿದ್ದು, ಡಿ. 14 ರಂದು ಮಹಾರಾಷ್ಟ್ರದ ಮಾಲ್ವಾನ್ ಸಮೀಪ ಅನ್ಯ ದೋಣಿಗಳ ಜೊತೆ ಸಂಪರ್ಕ ಕಳೆದುಕೊಂಡಿತ್ತು.  ಡಿ.15 ರಂದು ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ಸಮೀಪ ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು.
ಕೋಸ್ಟ್ ಗಾರ್ಡ್, ಮೀನುಗಾರರು, ನೌಕಾ ಪಡೆ ಹುಡುಕಿದರೂ ಮೀನುಗಾರರು ಪತ್ತೆಯಾಗಿರಲಿಲ್ಲ. ಈ ಸಂಬಂಧ ಕಾರವಾರ, ಮಲ್ಪೆ, ಉಡುಪಿಯಲ್ಲಿ ಮೀನುಗಾರರು ಡಿಸೆಂಬರ್ ತಿಂಗಳಿನಲ್ಲಿ ಪ್ರತಿಭಟನೆ ನಡೆಸಿದ್ದರು. 
ಪೊಲೀಸ್, ಕರಾವಳಿ ಕಾವಲು ಪಡೆ ಹಾಗೂ ನೌಕಾಸೇನೆಯಿಂದ ಸಾಕಷ್ಟು ಶೋಧ ನಡೆಸಲಾಗಿದ್ದು, ಬೋಟು ಯಾವುದೋ ಅವಘಡಕ್ಕೀಡಾಗಿ ಸಮುದ್ರದಲ್ಲಿ ಮುಳುಗಿರಬೇಕೆಂಬ ಅಭಿಪ್ರಾಯಕ್ಕೆ ನೌಕಾಸೇನೆ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಮಾಲ್ವಾನ್ ಬಂದರಿನ ದಡದಲ್ಲಿ ಸುವರ್ಣ ತ್ರಿಭುಜ ಬೋಟ್‍ನಲ್ಲಿದ್ದ ಬುಟ್ಟಿಗಳು ದೊರೆತಿದ್ದವು. 
ಬಳಿಕ ಐಎನ್‍ಎಸ್ ನಿರೀಕ್ಷಕ್ ಎಂಬ ಜಲಾಂತರ್ಗಾಮಿ ಯುದ್ಧನೌಕೆ ಸಹಾಯದಿಂದ ಸೋನಾರ್ ತಂತ್ರಜ್ಞಾನ ಬಳಸಿ ಸಿಂಧುದುರ್ಗಾ ಸಾಗರತಳದಲ್ಲಿ  ಡಿಸೆಂಬರ್ ತಿಂಗಳಿನಿಂದ ಶೋಧನೆ ನಡೆಸಲಾಗುತ್ತಿತ್ತು. ಕೆಲ ತಿಂಗಳ ಹಿಂದೆ ಐಎನ್ಎಸ್ ನಿರೀಕ್ಷಕ್ ಯುದ್ಧನೌಕೆ  ಸುಮಾರು 60-70 ಮೀಟರ್ ಆಳದಲ್ಲಿ ಬೋಟ್‍ನ ವಿವಿಧ ಬಗೆಯ ಚಿಕ್ಕದೊಡ್ಡ ಅವಶೇಷಗಳನ್ನು ಪತ್ತೆ ಮಾಡಿತ್ತು. ಅದರಲ್ಲಿ ಸುಮಾರು 75-78 ಅಡಿ ಉದ್ದದ ಬೋಟಿನ ಭಗ್ನ ಅವಶೇಷಗಳು ದೊರೆತಿದ್ದು, ಇದು ಮೀನುಗಾರಿಕಾ ಬೋಟ್ ಇರಬಹುದೆಂಬ ನಿರ್ಧಾರಕ್ಕೆ ತಜ್ಞರು ಈ ಹಿಂದೆಯೇ ಬಂದಿದ್ದರು. 
ಐಎನ್‍ಎಸ್‍ ನಿರೀಕ್ಷಕ್‍ಗೆ ದೊರೆತಿರುವ ಅವಶೇಷಗಳು ಸುವರ್ಣ ತ್ರಿಭುಜ ಬೋಟ್‍ನದ್ದೇ ಎಂದು ನೌಕಾಸೇನೆಯ ಮುಳುಗು ತಜ್ಞರು ದೃಢೀಕರಿಸಿದ್ದನ್ನು ನೌಕಾಸೇನೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದ ಮಾಲ್ವಾನ್ ಸಮುದ್ರದಿಂದ 33 ಕಿ.ಮೀ ದೂರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ತಜ್ಞರು ಮುಳುಗಿ ಇದನ್ನು ದೃಢೀಕರಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com