ಕೊಳಕು ಶೌಚಾಲಯ, ಸಹ ಪ್ರಯಾಣಿಕರಿಂದ ಕಿರಿಕಿರಿ; ವಯೋವೃದ್ಧರಿಗೆ ಪರಿಹಾರ ನೀಡಲು ರೈಲ್ವೆ ಇಲಾಖೆಗೆ ಆದೇಶ!

ರೈಲಿನಲ್ಲಿ ಶೌಚಾಲಯಕ್ಕೆ ಹಿರಿಯ ವ್ಯಕ್ತಿಯೊಬ್ಬರು ಹೋಗಲು ಯತ್ನಿಸಿದಾಗ ಟಿಕೆಟ್ ಕಾಯ್ದಿರಿಸದೆ ಬೋಗಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರೈಲಿನಲ್ಲಿ ಶೌಚಾಲಯಕ್ಕೆ ಹಿರಿಯ ವ್ಯಕ್ತಿಯೊಬ್ಬರು ಹೋಗಲು ಯತ್ನಿಸಿದಾಗ ಟಿಕೆಟ್ ಕಾಯ್ದಿರಿಸದೆ ಬೋಗಿಯ ಬಾಗಿಲಿನಲ್ಲಿ ಮತ್ತು ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಕುಳಿತು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ಕಕ್ಕಾಗಿ ಹಿರಿಯ ವ್ಯಕ್ತಿಗೆ ಪರಿಹಾರ ನೀಡುವಂತೆ ಗ್ರಾಹಕ ವೇದಿಕೆ  ಭಾರತೀಯ ರೈಲ್ವೆಗೆ ಆದೇಶ ನೀಡಿದೆ.
ತಾವು ಆಂಧ್ರ ಪ್ರದೇಶದ ವಿಜಯವಾಡದಿಂದ ಕೇರಳದ ಕೋಜಿಕ್ಕೋಡ್ ಗೆ ಪ್ರಯಾಣಿಸುತ್ತಿದ್ದ ರೈಲಿನ ಶೌಚಾಲಯ ತೀವ್ರ ಕೊಳಕಾಗಿತ್ತು ಎಂದು ಕೂಡ ಆ ಹಿರಿಯ ವ್ಯಕ್ತಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ 20 ಸಾವಿರ ರೂಪಾಯಿ ಪರಿಹಾರ ಮತ್ತು 3 ಸಾವಿರ ರೂಪಾಯಿ ವ್ಯಾಜ್ಯ ಖರ್ಚು ನೀಡುವಂತೆ ದಕ್ಷಿಣ ಮಧ್ಯ ರೈಲ್ವೆ ಮತ್ತು ನೈರುತ್ಯ ರೈಲ್ವೆಗೆ ಜಂಟಿಯಾಗಿ ಗ್ರಾಹಕ ವೇದಿಕೆ ಆದೇಶಿಸಿದೆ.
ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಇತ್ಯರ್ಥ ವೇದಿಕೆಯ ಅಧ್ಯಕ್ಷ ಟಿ ಶೋಭಾದೇವಿ ಮತ್ತು ಸದಸ್ಯೆ ವಿ ಅನುರಾಧ ಆದೇಶ ನೀಡಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ರೈಲ್ವೆ ಇಲಾಖೆಯ ಜವಾಬ್ದಾರಿಯಾಗಿದ್ದು, ದೂರು ನೀಡಿದವರು ರೈಲ್ವೆ ಇಲಾಖೆಯ ಕಾರ್ಯವೈಖರಿಯಲ್ಲಿನ ನ್ಯೂನತೆಯನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ನಡೆದ ಘಟನೆಯೇನು?: ಕೇರಳದ ಕಲ್ಲಿಕೋಟೆಯ ಚೆವರಂಬಲಮ್ ಪೋಸ್ಟ್ ನ 68 ವರ್ಷದ ವೃದ್ಧ ಸಬಿ ಜೋಸೆಫ್ ಕೇರಳದ ಕೋಜಿಕ್ಕೋಡ್ ಗೆ ಆಂಧ್ರ ಪ್ರದೇಶದ ವಿಜಯವಾಡದಿಂದ ರೈಲಿನಲ್ಲಿ ಸಂಚರಿಸಬೇಕಾಗಿತ್ತು. ವಯಸ್ಸಾದ ಕಾರಣ ದೀರ್ಘ ಪ್ರಯಾಣ ಮಾಡಿದರೆ ಆಯಾಸವಾಗುತ್ತದೆ ಎಂದು ಬೆಂಗಳೂರಿನ ಯಶವಂತಪುರದಲ್ಲಿ ಇಳಿದು ಸ್ವಲ್ಪ ವಿರಾಮ ತೆಗೆದುಕೊಂಡು ನಂತರ ಬೇರೆ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದರು. ಹೀಗಾಗಿ ಸ್ಲೀಪರ್ ಕೋಚ್ ನಲ್ಲಿ ವಿಜಯವಾಡದಿಂದ ಯಶವಂತಪುರಕ್ಕೆ ರೈಲು ಸಂಖ್ಯೆ 15228ರಲ್ಲಿ ಟಿಕೆಟ್ ಬುಕ್ ಮಾಡಿ ಆಗಸ್ಟ್ 16, 2017ರಂದು ಕೋಝಿಕ್ಕೋಡ್ ಗೆ ರೈಲು ಸಂಖ್ಯೆ 16527ರಲ್ಲಿ ಬೇರೆ ಬೇರೆಯಾಗಿ ಟಿಕೆಟ್ ಕಾಯ್ದಿರಿಸಿದರು.
ಟಿಕೆಟ್ ಬುಕ್ಕಿಂಗ್ ಮಾಡಿದ್ದಕ್ಕೆ ವಿಜಯವಾಡ ಮೂಲದ ರೈಲಿನಲ್ಲಿ ಕೆಳಗಿನ ಸೀಟು ಸಿಕ್ಕಿತು. ಆದರೆ ಈ ಹಿರಿಯ ವ್ಯಕ್ತಿಗೆ ತಾನು ಟಿಕೆಟ್ ಕಾಯ್ದಿರಿಸಿದ ಬೋಗಿಗೆ ಹತ್ತಿ ಸೀಟು ಪಡೆಯಲು ಕಷ್ಟವಾಯಿತು. ಬೋಗಿಯ ಬಾಗಿಲಿನ ದಾರಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡದೆ ಹತ್ತಿದ ಪ್ರಯಾಣಿಕರು ತುಂಬಿದ್ದರು. ವೈಟಿಂಗ್ ಲಿಸ್ಟ್ ನಲ್ಲಿದ್ದ ಪ್ರಯಾಣಿಕರು ಈ ಬೋಗಿಯಲ್ಲಿ ಹತ್ತಿ ಕೆಳಗೆ ಕುಳಿತು ಕಾರ್ಡ್ ಆಡುತ್ತಿದ್ದರು.
ರೈಲಿನ ಟಿಟಿಇ ಗಮನಕ್ಕೆ ತಂದಾಗ ಅವರನ್ನು ಬೈದು ಅವರ ಟಿಕೆಟ್ ಗಳನ್ನು ಕಾಯ್ದಿರಿಸಿದ ಟಿಕೆಟ್ ಗಳೆಂದು ಮಾಡಿದರು ಎಂದು ಈ ಹಿರಿಯ ವ್ಯಕ್ತಿ ಜೋಸೆಫ್ ಹೇಳಿದ್ದರು. ಅಲ್ಲದೆ ರೈಲಿನ ಶೌಚಾಲಯ ಪ್ರಯಾಣಿಕರು ಬಳಸಲು ಸಾಧ್ಯವಾಗದಷ್ಟು ಗಲೀಜಾಗಿ ಹೋಗಿತ್ತು ಎಂದು ಕೂಡ ದೂರಿನಲ್ಲಿ ಹೇಳಿದ್ದರು.
ರೈಲಿನ ನಿರ್ದಿಷ್ಟ ಸಂಖ್ಯೆಗೆ ದೂರನ್ನು ನೀಡಿದರು. ಆದರೆ ಆ ದಿನ ಇಡೀ ರಾತ್ರಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಯಾಣಿಕರೆಲ್ಲ ಕೆಳಗೆ ಮಲಗಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಓಡಾಡಲು ಸಾಧ್ಯವಾಗದಷ್ಟು ಕಷ್ಟವಾಯಿತು ಎಂದು ಜೋಸೆಫ್ ದೂರಿನಲ್ಲಿ ಹೇಳಿದ್ದರು.
ಆದರೆ ರೈಲ್ವೆ ಅಧಿಕಾರಿಗಳು ಜೋಸೆಫ್ ಅವರ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪ್ರಯಾಣಿಕರು ಕಾರ್ಡ್ಸ್ ಆಡುತ್ತಿರಲಿಲ್ಲ. ಈ ವೃದ್ಧರು ಗ್ರಾಹಕ ವೇದಿಕೆಯ ಅನುಕಂಪ ಗಿಟ್ಟಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ ಎಂದರು. ವಿಜಯವಾಡದಲ್ಲಿ ಬೇರೆ ರೈಲಿನ ಅವಧಿ ಜೊತೆ ಈ ರೈಲಿನ ಅವಧಿ ಹೊಂದಿಕೆಯಾಗದ್ದರಿಂದ ಅಲ್ಲಿ ಶೌಚಾಲಯವನ್ನು ಸ್ವಚ್ಛ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಬೇರೆ ಪ್ರಯಾಣಿಕರ್ಯಾರೂ ದೂರು ನೀಡಲಿಲ್ಲ ಎಂಬುದು ರೈಲ್ವೆ ಅಧಿಕಾರಿಗಳ ವಾದವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com