ಒಳ್ಳೆ ಸುದ್ದಿ: ರೈಲು ವಿಳಂಬದ ಎಡವಟ್ಟು, ರಾಜ್ಯದ ವಿದ್ಯಾರ್ಥಿಗಳಿಗೆ ಮೇ 20 ರಂದು ನೀಟ್ ಪರೀಕ್ಷೆ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ' (ನೀಟ್ ) ಬರೆಯಲು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೇ 20ರಂದು ಮತ್ತೊಂದು ಅವಕಾಶ ಕಲ್ಪಿಸಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ' (ನೀಟ್) ಬರೆಯಲು ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಭರವಸೆ ನೀಡಿದ್ದಾರೆ. 
ಈ ಸಂಬಂಧ  ಟ್ವೀಟ್ ಮಾಡಿರುವ ಜಾವ್ಡೇಕರ್ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕರ್ನಾಟಕದ  ವಿದ್ಯಾರ್ಥಿಗಳಿಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ  ಟ್ವೀಟರ್ ಮೂಲಕ ಭರವಸೆ ನೀಡಿದ್ದರು. 

ನೀಟ್ ಪರೀಕ್ಷೆ ಅವಕಾಶ ವಂಚಿತ ವಿದ್ಯಾರ್ಥಿಗಳು ಹಿಂದೆ ಪ್ರಕಟಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 20 ರಂದು ಕರ್ನಾಟಕದಲ್ಲಿ ಮರು ಪರೀಕ್ಷೆ ಹಾಗೂ ಒಡಿಶ್ಸಾ ರಾಜ್ಯದಲ್ಲಿ  ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ರೈಲು ತಡವಾಗಿ ಆಗಮಿಸಿದ ಹಿನ್ನಲೆಯಲ್ಲಿ ಪರೀಕ್ಷೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದರು.ಇನ್ನು ಒಡಿಶ್ಸಾ ರಾಜ್ಯದಲ್ಲಿ ಫೋನಿ ಚಂಡಮಾರುತ ಹಿನ್ನಲೆಯಲ್ಲಿ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿತ್ತು
ಇದಕ್ಕೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉನ್ನತ ಮಟ್ಟದ ಅಧಿಕಾರಗಳ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿ, ರೈಲು ತಡವಾಗಿ ಆಗಮಿಸಿದ ಹಿನ್ನಲೆಯಲ್ಲಿ ಪ್ರವೇಶ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಮನವಿ ಮಾಡುವಂತೆ ಸೂಚಿಸಿದ್ದರು.
ಮುಖ್ಯಮಂತ್ರಿ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಕೇಂದ್ರ ಸರ್ಕಾರದ ಸಚಿವಾಲಯದ ಅಧಿಕಾರಿಗಳಿಗೆ  ಮನವಿ ಸಲ್ಲಿಸಿದ್ದರು. ಅಂತೆಯೇ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಕೇಂದ್ರ ಸಚಿವ ಸದಾನಂದಗೌಡ ಈ ಬಗ್ಗೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದು ಕರ್ನಾಟಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಹಾಗೂ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವರು ,ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿರುವ ಪ್ರಕಾಶ್ ಜಾವ್ಡೇಕರ್ ಅವರು ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಸಂಬಂಧ ಪರೀಕ್ಷಾ ಪ್ರಾಧಿಕಾರ ಸೂಕ್ತ ದಿನಾಂಕ ಪ್ರಕಟಿಸಿ ಅರ್ಹತಾ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ದಿನಾಂಕ ಪ್ರಕಟಿಸುವುದಾಗಿ ತಮ್ಮ ಟ್ವೀಟರ್ ನಲ್ಲಿ ಪ್ರಕಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com