ದೇವಸ್ಥಾನದಲ್ಲಿ ಮೇಲ್ಜಾತಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ: ಬೆಳ್ತಂಗಡಿಯ ಚಂದಕೂರು ಗ್ರಾಮದ ದಲಿತರಿಂದ ಉತ್ಸವಕ್ಕೆ ಬಹಿಷ್ಕಾರ!

21ನೇ ಶತಮಾನದ ಈ ಆಧುನಿಕ ಯುಗದಲ್ಲಿ ನಾವಿಂದು ಇದ್ದರೂ ಕೂಡ ಸಮಾಜದ ಕೆಲವು ಕಡೆಯಲ್ಲಿ ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಮಂಗಳೂರು: 21ನೇ ಶತಮಾನದ ಈ ಆಧುನಿಕ ಯುಗದಲ್ಲಿ ನಾವಿಂದು ಇದ್ದರೂ ಕೂಡ ಸಮಾಜದ ಕೆಲವು ಕಡೆಯಲ್ಲಿ ಇನ್ನೂ ಕೂಡ ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೆಯೇ ಉಳಿದುಕೊಂಡಿದೆ.
ಬೆಳ್ತಂಗಡಿಯ ಚಂದಕೂರು ಎಂಬಲ್ಲಿ ಶತಮಾನಗಳಷ್ಟು ಹಳೆಯ ದೇವಸ್ಥಾನದಲ್ಲಿ ನಡೆದ ಆರು ದಿನಗಳ ಉತ್ಸವದಲ್ಲಿ ಮೇಲ್ಜಾತಿಯವರಿಗೆ ಮತ್ತು ಕೆಳಜಾತಿಯವರಿಗೆ ಭೋಜನದ ವೇಳೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ ವಿಚಾರದಲ್ಲಿ ಅಸಮಾಧಾನವುಂಟಾಗಿ ಹಲವು ದಲಿತರು ಮತ್ತು ಹಿಂದುಳಿದ ವರ್ಗದವರು ಉತ್ಸವಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಚಂದಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ 6 ದಿನಗಳ ಬ್ರಹ್ಮಕಲಶೋತ್ಸವ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಸಾರ್ವಜನಿಕ ಭೋಜನದವರೆಗೆ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿತ್ತು. ಭೋಜನ ಸಂದರ್ಭದಲ್ಲಿ ಕುಳಿತುಕೊಳ್ಳಲು ಕಾರ್ಯಕರ್ತರು ಮೇಲ್ಜಾತಿಯವರಿಗೆ ಬೇರೆ ನಿಗದಿತ ವಿಭಾಗಕ್ಕೆ ಕಳುಹಿಸುತ್ತಿದ್ದರು. ಮೇಲ್ಜಾತಿ ಎಂದು ಗುರುತು ಸಿಗಲು ಬಹುತೇಕ ಪುರುಷರು ಶರ್ಟ್ ಧರಿಸದೆ ಹೋಗಿದ್ದರು. ಇನ್ನು ಕೆಲವು ಸ್ಥಳೀಯ ಮೇಲ್ಜಾತಿಯವರನ್ನು ಕಾರ್ಯಕರ್ತರಿಗೆ ಪರಿಚಯವಿತ್ತು. ಈ ಪಂಕ್ತಿಬೇಧ ಪದ್ಧತಿಯನ್ನು ನಾವು ಪ್ರಶ್ನಿಸಿದೆವು ಎನ್ನುತ್ತಾರೆ ದಲಿತ ಕಾರ್ಯಕರ್ತ ಶೇಖರ್.
ಮೇಲು-ಕೀಳು ಜಾತಿಯ ಬೇಧದಿಂದ ನೊಂದ ಕೆಲವು ದಲಿತರು ಮತ್ತು ಹಿಂದುಳಿದ ವರ್ಗದವರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳ ಗಮನಕ್ಕೆ ತಂದರು. ಸಮಿತಿಯ ಉಸ್ತುವಾರಿ ಶಾಸಕ ಹರೀಶ್ ಪೂಂಜಾ. ಆದರೆ ಈ ಹಂತದಲ್ಲಿ ಮಾತನಾಡಿದರೆ ಗಲಾಟೆಯಾಗುತ್ತದೆ,ಇಡೀ ಕಾರ್ಯಕ್ರಮ ಕೆಟ್ಟುಹೋಗುತ್ತದೆ, ಸುಮ್ಮನಿರಿ ಎಂದು ಪದಾಧಿಕಾರಿಗಳು ಹೇಳಿದರು ಎನ್ನುತ್ತಾರೆ ಶೇಖರ್.
ಆದರೆ ಎಲ್ಲರೂ ಸುಮ್ಮನೆ ಕೂರಲಿಲ್ಲ. ಚಂದಕೂರು ಗ್ರಾಮದ ಓರ್ವ ದಲಿತ ಕಾರ್ಯಕರ್ತ ಈ ಪದ್ಧತಿಯಿಂದ ನಾವು ತೀವ್ರ ನೊಂದಿದ್ದೇವೆ. ದೇವಸ್ಥಾನದ ಕೆಲಸಗಳಲ್ಲಿ, ಬ್ರಹ್ಮಕಲಶೋತ್ಸವ ತಯಾರಿಯಲ್ಲಿ ಕೆಲಸ ಮಾಡಲು ದಲಿತರು, ಹಿಂದುಳಿದ ವರ್ಗದವರು ಬೇಕು, ಊಟದ ವಿಷಯದಲ್ಲಿ ಬೇಧವೇಕೆ ಎಂದು ಪ್ರಶ್ನಿಸಿದರು.
ಬ್ರಹ್ಮಕಲಶೋತ್ಸವ ಉಸ್ತುವಾರಿ ನೋಡಿಕೊಳ್ಳಲು ವಿವಿಧ ಉಪ ಸಮಿತಿಯನ್ನು ರಚಿಸಲಾಗಿತ್ತು. ಇಲ್ಲಿ ಜಾತಿಪದ್ಧತಿ ಬಲವಾಗಿ ಬೇರೂರಿತ್ತು. ಮೇಲ್ಜಾತಿಯವನ್ನು ಪ್ಲಮ್ ಕಮಿಟಿಯ ಸದಸ್ಯರನ್ನಾಗಿ ಮಾಡಲಾಗಿದ್ದು ಅವರು ದೇವಸ್ಥಾನ ನವೀಕರಣ ಮತ್ತು ಹಣಕಾಸಿನ ಉಸ್ತುವಾರಿ ನೋಡಿಕೊಂಡರು.ಇನ್ನು ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಅಲಂಕಾರ, ವಾಹನ ಪಾರ್ಕಿಂಗ್, ದೇವರಿಗೆ ದಾನ-ಧರ್ಮ ಸಂಗ್ರಹಣೆ ಮತ್ತು ಸ್ವಚ್ಛತೆಯ ಮೇಲ್ವಿಚಾರಣೆ ವಹಿಸಲಾಗಿತ್ತು. ಈ ಭೇದ ಭಾವವನ್ನು ನೋಡಿಯೂ ನಾವು ಸುಮ್ಮನಿದ್ದೆವು ಎಂದರು ಶೇಖರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com