ಕೊಡಗು ಜಿಲ್ಲೆಯ ಜನತೆಗೆ ದುಸ್ವಃಪ್ನದಂತೆ ಕಾಡುವ ಪ್ರವಾಹ; ಸರ್ಕಾರದಿಂದ ಇನ್ನೂ ಆಗಿಲ್ಲ ದುರಸ್ತಿ ಕಾರ್ಯ!

ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಹಲವರ ಮನೆ, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿ, ಜೀವಹಾನಿಯಾಗಿ ಸರಿಸುಮಾರು ...
ಕಳೆದ ಆಗಸ್ಟ್ ನಲ್ಲಿ ಭೂಕುಸಿತಕ್ಕೆ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಹಾನಿಗೀಡಾದ ಮನೆಗಳು
ಕಳೆದ ಆಗಸ್ಟ್ ನಲ್ಲಿ ಭೂಕುಸಿತಕ್ಕೆ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಹಾನಿಗೀಡಾದ ಮನೆಗಳು
ಮಡಿಕೇರಿ: ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಹಲವರ ಮನೆ, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿ, ಜೀವಹಾನಿಯಾಗಿ ಸರಿಸುಮಾರು ಒಂದು ವರ್ಷವಾಗುತ್ತಾ ಬಂದಿದೆ. ಇನ್ನು ಮುಂದಿನ ತಿಂಗಳು ಮುಂಗಾರು ಕಾಲಿಡಲಿದೆ. ಆದರೆ ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ನಾವಿನ್ನೂ ಸಹಜ ಸ್ಥಿತಿಗೆ ಬಂದಿಲ್ಲ ಎನ್ನುತ್ತಾರೆ ಜಿಲ್ಲೆಯ ನಿವಾಸಿಗಳು.
ಕಳೆದ ವರ್ಷ ಪ್ರವಾಹದಲ್ಲಿ ಆದ ಹಾನಿಯನ್ನು ಇನ್ನೂ ಸರ್ಕಾರದಿಂದ ದುರಸ್ತಿಯಾಗಿಲ್ಲ. ಪ್ರತಿದಿನ ಬೆಳಗ್ಗೆ ಏಳುವಾಗ ಕಳೆದ ವರ್ಷದ ಸಂಕಷ್ಟ ಧುತ್ತನೆ ಕಣ್ಣ ಮುಂದೆ ಬರುತ್ತದೆ. ಎಲ್ಲವೂ ಸರಿಯಾಗುತ್ತಿದೆ ಎಂದು ಜಿಲ್ಲಾಡಳಿತ, ಅಧಿಕಾರಿಗಳು ಹೇಳಿದರೂ ಕೂಡ ನನಗೆ ಮನೆಯಲ್ಲಿ ವಾಸಿಸಲು ಧೈರ್ಯ ಬರುವುದಿಲ್ಲ. ಮಡಿಕೇರಿಯಲ್ಲಿ ಮನೆ ಗೊತ್ತು ಮಾಡಿದ್ದು ಅಲ್ಲಿಗೆ ಇನ್ನು 15 ದಿನಗಳಲ್ಲಿ ಹೋಗುತ್ತೇವೆ ಎನ್ನುತ್ತಾರೆ ಕಳೆದ ವರ್ಷ ಪ್ರವಾಹದಲ್ಲಿ ಹಾನಿಗೊಳಗಾದ ಮನೆಯ ಒಡತಿ ಸ್ವರ್ಣರಾಣಿ.
ಭೂ ಕುಸಿತವುಂಟಾಗಿ ಮನೆ, ಆಸ್ತಿಪಾಸ್ತಿ ನಷ್ಟವಾದ ಕಡೆಗಳಲ್ಲಿ ಜನರಿಗೆ ಈ ಮಳೆಗಾಲದಲ್ಲಿ ವಾಸಿಸಲು ಭಯವಾಗುತ್ತಿದೆ. ಅಂತವರು ಮಡಿಕೇರಿಯಲ್ಲಿ ತಾತ್ಕಾಲಿಕ ಮನೆಗಳನ್ನು ಹುಡುಕಿಕೊಂಡು ಹೊರಟಿದ್ದಾರೆ.
ಮಂಗಳಾದೇವಿ ನಗರದಲ್ಲಿರುವ ನಮ್ಮ ಮನೆ ಕಳೆದ ವರ್ಷ ಆಗಸ್ಟ್ ನಲ್ಲಿ ಭಾಗಶಃ ಹಾನಿಗೀಡಾಗಿತ್ತು, ಈ ಪ್ರದೇಶದಲ್ಲಿ ಯಾವುದೇ ದುರಸ್ತಿ ಮತ್ತು ರಿಪೇರಿ ಕಾರ್ಯವನ್ನು ಸರ್ಕಾರ ಕೈಗೊಂಡಿಲ್ಲ. ನಮ್ಮ ಕುಟುಂಬದಲ್ಲಿ 9 ಜನ ಇದ್ದಾರೆ. ಕಳೆದ ವರ್ಷ ಪ್ರವಾಹಕ್ಕೆ ನಮ್ಮ ವಸ್ತುಗಳಲ್ಲಿ ಅರ್ಧದಷ್ಟು ಕೊಚ್ಚಿ ಹೋಗಿದೆ. ಬಾಡಿಗೆ ಮನೆಯಲ್ಲಿರೋಣವೆಂದರೆ ಬಾಡಿಗೆ ಕಟ್ಟಲು ಹಣ ಎಲ್ಲಿಂದ ಎಂದು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ ರಂಜಿತ್. ಮಂಗಳಾದೇವಿ ನಗರದಲ್ಲಿ ಸುಮಾರು 15 ಮನೆಗಳಿಗೆ ಅಧಿಕಾರಿಗಳ ಕಡೆಯಿಂದ ಇನ್ನೂ ಪರಿಹಾರ ಸಿಕ್ಕಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಅನ್ನಿ ಕೆ ಜೊಯ್, ವಾಸಸ್ಥಾನ ಸ್ಥಳಾಂತರ ಮಾಡುವಂತೆ ಇದುವರೆಗೆ ನೊಟೀಸ್ ಜಾರಿ ಮಾಡಿಲ್ಲ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.ಜೂನ್ ನಿಂದ ಆಗಸ್ಟ್ ವರೆಗೆ ಮಾನ್ಸೂನ್ ನಲ್ಲಿ ಅಧಿಕಾರಿಗಳು ಜನರ ಸಹಾಯಕ್ಕೆ ಯಾವುದೇ ಕ್ಷಣದಲ್ಲಿಯಾದರೂ ಲಭ್ಯವಿರುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಈ ಸಮಯದಲ್ಲಿ ರಜೆಗಳಿರುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com