ಮೊಬೈಲ್ ಎತ್ತಿಕೊಂಡು ಒತ್ತಿ, ಮಾವಿನ ಹಣ್ಣು ಆರ್ಡರ್ ಮಾಡಿ; ಮೊಬೈಲ್ ಆಪ್ ಮೂಲಕ ಮಾವು ಖರೀದಿ!

ನೀವು ನಿಮಗೆ ಬೇಕಾದ ತಿಂಡಿ-ತಿನಿಸುಗಳನ್ನು, ಊಟವನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನೀವು ನಿಮಗೆ ಬೇಕಾದ ತಿಂಡಿ-ತಿನಿಸುಗಳನ್ನು, ಊಟವನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿ ತಿನ್ನುತ್ತೀರಿ. ಮನೆಯಲ್ಲಿ ಅಡುಗೆ ಮಾಡಿ ಬೇಸರವಾದರೆ, ಬೇರೆ ರುಚಿ ಸವಿಯಬೇಕೆನಿಸಿದರೆ ಟ್ರಾಫಿಕ್ ಮಧ್ಯೆ ವಾಹನ ಓಡಿಸಿಕೊಂಡು ಹೊಟೇಲ್ ಗೆ ಹೋಗಿ ತಿನ್ನುವುದು ಯಾರು ಎಂದು ಯೋಚನೆ ಮಾಡಿ ಕುಳಿತಲ್ಲಿಂದಲೇ ಆನ್ ಲೈನ್ ನಲ್ಲಿ ಬುಕ್ ಮಾಡಿ ತರಿಸಿಕೊಳ್ಳುತ್ತಾರೆ ನಗರ ಪ್ರದೇಶದ ಜನರು.
ಇನ್ನು ಮುಂದೆ ಮಾವಿನಹಣ್ಣನ್ನು ಕೂಡ ಇದೇ ರೀತಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಅಭಿವೃದ್ಧಿಪಡಿಸಿದ್ದು ಈ ಮೂಲಕ ರೈತರಿಂದ ಮಾವಿನ ಕಾಯಿ ಅಥವಾ ಹಣ್ಣನ್ನು ಬೇರೆ ಆಹಾರಗಳಂತೆ ಆರ್ಡರ್ ಮಾಡಿ ತರಿಸಿಕೊಳ್ಳಬಹುದು.
ಬಾದಾಮಿ, ಆಲ್ಫೋನ್ಸೊ, ನೀಲಮ್, ದಶೆಹರಿ, ಮಲ್ಲಿಕಾ, ಸಿಂಧೂರ, ಬೆನೆಶನ್, ಬಗಂಪಲ್ಲಿ ಹೀಗೆ 12 ವಿವಿಧ ಜಾತಿಯ ಮಾವಿನ ಕಾಯಿ ಅಥವಾ ಹಣ್ಣನ್ನು ಮೊಬೈಲ್ ಆಪ್ ಮೂಲಕ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಆನ್ ಲೈನ್ ನಲ್ಲಿ ಕನಿಷ್ಠ 3 ಕೆಜಿ ಆರ್ಡರ್ ಮಾಡಿರಬೇಕು. ಒಂದು ವೇಳೆ ಪಟ್ಟಿಯಲ್ಲಿಲ್ಲದ ತಮಗೆ ಇಷ್ಟವಾದ ಬೇರೆ ಜಾತಿಯ ಮಾವನ್ನು ಕೂಡ ಆರ್ಡರ್ ಮಾಡಿ ತರಿಸಿಕೊಳ್ಳಬಹುದು.
ಮಾವಿನ ವೈವಿಧ್ಯತೆಯನ್ನು ಸವಿಯಬೇಕೆಂದಿರುವ ಗ್ರಾಹಕರಿಗೆ ನಿಗಮ ಇದೇ 19ರಿಂದ ಮಾವು ಪ್ರವಾಸ ಆರಂಭಿಸಲಿದ್ದು 100 ರೂಪಾಯಿ ನೀಡಿ ಆನ್ ಲೈನ್ ನಲ್ಲಿ ದಾಖಲಾತಿ ಮಾಡಿಕೊಂಡರೆ  ಗ್ರಾಹಕರನ್ನು ರಾಮನಗರ ಮತ್ತು ತುಮಕೂರುಗಳಲ್ಲಿ ಮಾವು ಬೆಳೆಯುವ ರೈತರ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ತಮಗೆ ಬೇಕಾದ ಮಾವುಗಳನ್ನು ಖರೀದಿಸಬಹುದು.
ಸಾರ್ವಜನಿಕರಿಗೆ ಸದ್ಯದಲ್ಲಿಯೇ ಮೊಬೈಲ್ ಆಧಾರಿತ ಮಾವು ಖರೀದಿ ಲಭ್ಯವಾಗಲಿದೆ. ಆಹಾರ ಪೂರೈಸುವ ಆಪ್ ಆಧಾರಿತ ವ್ಯವಸ್ಥೆಗಳ ಜೊತೆ ನಾವು ಕೈ ಜೋಡಿಸಲಿದ್ದೇವೆ, ಜನರು ತಮಗೆ ಬೇಕಾದ ಮಾವುಗಳನ್ನು ಮನೆ ಬಾಗಿಲಿಗೆ ಮೊಬೈಲ್ ಆಪ್ ಆಧಾರದಲ್ಲಿ ಖರೀದಿ ಮಾಡಿಕೊಳ್ಳಬಹುದು ಎಂದರು ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್.
ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ ಮತ್ತು ರಾಮನಗರ ಸೇರಿದಂತೆ 16 ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಗಳಲ್ಲಿ ಮಾವು ಬೆಳೆಯಲಾಗುತ್ತದೆ. ವರ್ಷಕ್ಕೆ ಸುಮಾರು 10 ಲಕ್ಷ ಟನ್ ಮಾವು ಬೆಳೆಯಲಾಗುತ್ತದೆ. ಆದರೆ ಕಳೆದ ವರ್ಷ ಬರಗಾಲದಿಂದಾಗಿ ಮಾವು ಉತ್ಪಾದನೆ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com