ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 14 ಕಳ್ಳರ ಬಂಧನ, 1 ಕೆ.ಜಿ ಚಿನ್ನಾಭರಣ ವಶ

ಪಿಕ್ ಪಾಕೇಟ್, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳವು ಹಾಗೂ ಮನೆ ಕಳವು ಸೇರಿದಂತೆ 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ 14 ಕಳ್ಳರನ್ನು ಬಂಧಿಸುವಲ್ಲಿ...
ಕಳ್ಳರಿಂದ ಜಪ್ತಿ ಮಾಡಿದ ಚಿನ್ನಾಭರಣ
ಕಳ್ಳರಿಂದ ಜಪ್ತಿ ಮಾಡಿದ ಚಿನ್ನಾಭರಣ
ಬೆಂಗಳೂರು: ಪಿಕ್ ಪಾಕೇಟ್, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳವು ಹಾಗೂ ಮನೆ ಕಳವು ಸೇರಿದಂತೆ 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ 14 ಕಳ್ಳರನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹಾಗೂ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ.ಡಿ.ಚನ್ನಣ್ಣವರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬಂಧಿತರಿಂದ 60.95 ಲಕ್ಷ ರೂ. ಮೌಲ್ಯದ 1.622 ಕೆ.ಜಿ ತೂಕದ ಚಿನ್ನಾಭರಣ ಹಾಗೂ 17.800 ಕೆ.ಜಿ ತೂಕದ ಬೆಳ್ಳಿ ಸಾಮಾನು ಮತ್ತು 3.65 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚಿ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಅವರು ಘೋಷಿಸಿದರು.
ಐಷಾರಾಮಿ ಜೀವನಕ್ಕಾಗಿ ಹಾಡುಹಗಲೇ ಕಬ್ಬಿಣದ ರಾಡ್ ಮೂಲಕ ಮನೆ ಬೀಗ ಮುರಿದು ಕಳವು ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿ, 35 ಲಕ್ಷ ರೂ ಮೌಲ್ಯದ ಬೆಲೆಬಾಳುವ 1.199 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬಿಳಹಳ್ಳಿ ಮೂಲದ ಜಪಾನ್ ರಾಜ (40),  ಬನಶಂಕರಿ 3ನೇ ಹಂತದ ಗೋಪಿ(43) ಹಾಗೂ ಮಾಗಡಿ ರಸ್ತೆಯ ಡೇವಿಡ್ (34) ಎಂದು ಗುರುತಿಸಲಾಗಿದೆ. 
ಜಪಾನ್ ರಾಜ್ ಎಂಬ ಕುಖ್ಯಾತ ಕಳ್ಳ ಈ ಹಿಂದೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ 42 ಕಳವು ಹಾಗೂ 2 ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಆ ವೇಳೆ ಆತನಿಂದ 1 ಕೋಟಿ ರೂ. ಬೆಲೆ ಬಾಳುವ 4 ಕೆ.ಜಿ.77 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ಕೆ,ಜಿ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಜಪಾನ್ ರಾಜ್, ಕದ್ದ ಚಿನ್ನವನ್ನು ಹೆಂಡತಿಯರ ಮೂಲಕ ವಿಲೇವಾರಿ ಮಾಡುತ್ತಿದ್ದ. ಇತನಿಗೆ ಇಬ್ಬರೂ ಹೆಂಡತಿಯರಿದ್ದು, ಇವರ ಮೂಲಕ ಆತ ವಿಲೇಮಾರಿ ಮಾಡುತ್ತಿದ್ದನೆಂದು ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು. 
ಮಾಗಡಿ ರಸ್ತೆಯ ಅಶೋಕ್ ಕುಮಾರ್ ಎಂಬುವವರ ಸಿಲ್ವರ್ ಟೆಸ್ಟಿಂಗ್ ಲ್ಯಾಬ್ ಆ್ಯಂಡ್ ವರ್ಕ್ಸ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಸಹೋದರರು, ಅದೇ ಅಂಗಡಿಯಲ್ಲಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ವಿಶೇಷ ಪೊಲೀಸ್ ತಂಡದ ಮೂಲಕ ಮಂಜುನಾಥ್ ನಗರದ ಶ್ರೀಧರ್ (38) ಹಾಗೂ ಸೆಂದಿಲ್ (42) ಎಂಬ ಇಬ್ಬರೂ ಸಹೋದರನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿ, 7 ಲಕ್ಷ ಮೌಲ್ಯದ 17.700 ಗ್ರಾಂ ತೂಕದ ಅರಗು ಮಿಶ್ರಿತ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ಆರ್.ಟಿ/ಬಿ.ಎಂ.ಟಿ.ಸಿ ಬಸ್  ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್ ಹಾಗೂ ಚಿನ್ನಾಭರಣ ಕಳವು ಸೇರಿ 9 ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಮೂಲದ ಚಾಂದ್ ಭಾಷ್ (32) ಹಾಗೂ ಸೈಯದ್ ಅಕ್ರಂ (40) ಎಂಬುವವರನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ 15,10,000 ರೂ ಬೆಲೆ ಬಾಳುವ 503 ಗ್ರಾಂ ತೂಕದ ಚಿನ್ನಾಭರಣ ಹಾಗೂ 100 ಗ್ರಾಂ ತೂಕದ ಬೆಳ್ಳಿಯ ಕಾಲು ಗೆಜ್ಜೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಸಾಮಾನ್ಯ ಹಾಗೂ ಮನೆ ಕಳವು 4 ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ 1.82 ಲಕ್ಷ ರೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಹಾಸನ ಮೂಲದ ವಿಶ್ವನಾಥ್ (23), ತುಮಕೂರಿನ ಜಬೀವುಲ್ಲಾ (28) ಹಾಗೂ ಶಿವಮೊಗ್ಗದ ಶ್ರೀನಿವಾಸ್ (34), ಕುಮಾರ್ (34) ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ 1.83 ಲಕ್ಷ ರೂ ನಗದು ವಶಪಡಿಸಿಕೊಳ್ಳುವಲ್ಲಿ ಉಪ್ಪಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹೆಬ್ಬಗೋಡಿಯ ಹರೀಶ್ (29), ಮೈಸೂರಿನ ರಾಘವೇಂದ್ರ (39) ಹಾಗೂ ನಾಯಂಡಹಳ್ಳಿಯ ಅಸ್ಲಂಪಾಷ್ (39) ಎಂದು ಗುರುತಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದ ಸದಸ್ಯರಿಗೆ ಮರಳಿ ಅವರ ವಸ್ತುಗಳನ್ನು ವಾಪಸ್ವ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com