ಬೆಂಗಳೂರು: ಮೊದಲ ಸುತ್ತಿನ ನಂತರ ಶೇ.50ರಷ್ಟು ಖಾಲಿ ಉಳಿದ ಆರ್ ಟಿಇ ಸೀಟುಗಳು

2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಮೊದಲ ಸುತ್ತಿನ ಪ್ರವೇಶದಲ್ಲಿ ಶೇ.50ರಷ್ಟು ಸೀಟುಗಳು ಖಾಲಿ ಉಳಿದಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ)  ಮೊದಲ ಸುತ್ತಿನ ಪ್ರವೇಶದಲ್ಲಿ ಶೇ.50ರಷ್ಟು ಸೀಟುಗಳು ಖಾಲಿ ಉಳಿದಿವೆ ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತ ರೇಜು ಎಂಟಿ ಅವರು ಹೇಳಿದ್ದಾರೆ.
ಈ ವರ್ಷ ಆರ್ ಟಿಇ ಅಡಿ ಮೊದಲ ಸುತ್ತಿನಲ್ಲಿ 7,636 ಸೀಟುಗಳು ಲಭ್ಯವಿದ್ದವು. ಆದರೆ ಕೇವಲ 3,300 ಅರ್ಜಿಗಳು ಬಂದಿದ್ದು, ಅವರೆಲ್ಲರಿಗೂ ಪ್ರವೇಶಾತಿ ನೀಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಮೇ 6ರಂದು ಕಂಪ್ಯೂಟರ್ ಆಧಾರಿದ ಲಾಟರಿ ಮೂಲಕ ಸೀಟುಗಳನ್ನು ಹಂಚಲಾಗಿದೆ. ಮೇ 25ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಆರ್ ಟಿಇ ಕಾಯ್ದೆ 2012ಕ್ಕೆ ತಿದ್ದುಪಡಿ ತಂದಿದ್ದು, ಇದು ಜನಸ್ನೇಹಿಯಾಗಿಲ್ಲ ಎಂದು ಶಿಕ್ಷಣ ಹಕ್ಕು ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. 
ಸರ್ಕಾರ ತಿದ್ದುಪಡಿ ತಂದಿರುವುದರಿಂದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ನಿರ್ಬಂಧವಿದೆ. ಈ ಬಾರಿ ಆಯಾ ಪ್ರದೇಶಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೇರಿಸಲು ಆರ್ ಟಿಇ ಏಕೆ ಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಆರ್ ಟಿಇಯಡಿ 2.38 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈ ವರ್ಷ 16,563 ಅರ್ಜಿಗಳು ಮಾತ್ರ ಬಂದಿವೆ. ಪೋಷಕರು ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿಸಲು ಇಚ್ಛೆಯನ್ನು ಹೊಂದಿಲ್ಲದಿರುವುದರಿಂದ ಅರ್ಜಿ ಸಲ್ಲಿಕೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗಿದೆ.
ಆರ್ ಟಿಇ ವಿದ್ಯಾರ್ಥಿಗಳ ಪೋಷಕರ ಸಂಘಟನೆ ಈ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದು, ತೀರ್ಪು ಪೋಷಕರ ಪರವಾಗಿ ಬಂದರೆ ಆರ್ ಟಿಇ ಅರ್ಜಿ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ರೇಜು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com