ಮಳೆ ಕೊರತೆ ಹಿನ್ನೆಲೆ, ಎರಡು ವಾರಗಳಲ್ಲಿ ಮೋಡ ಬಿತ್ತನೆಗೆ ಟೆಂಡರ್ : ಕೃಷ್ಣ ಭೈರೇಗೌಡ

ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ಕೊರೆತೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ...
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ
ಬೆಂಗಳೂರು:  ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ಕೊರೆತೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬರ ತಾಂಡವವಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಜೂನ್ ತಿಂಗಳೊಳಗೆ ಕೃತಕ ಮಳೆ ಸುರಿಸುವ ಮೋಡ ಬಿತ್ತನೆ ಮಾಡುವುದಾಗಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಪ್ರಸಕ್ತ ಕೃಷಿ ವರ್ಷವಷ್ಟೇ ಅಲ್ಲದೇ 2020 - 21 ನೇ ಸಾಲಿಗೆ ಸೇರಿ ಒಟ್ಟಿಗೆ ಟೆಂಡರ್ ಕರೆದಿದೆ. ಮಳೆ ಕೊರತೆಯಿಂದ ಉಂಟಾಬಹುದಾದ ಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಮೋಡ ಬಿತ್ತನೆ ಮಾಡುವುದು ಸೂಕ್ತ ಎನ್ನುವ ನಿಲುವಿಗೆ ಸರ್ಕಾರ ಬಂದಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. 
ರಾಜ್ಯದ ಬರ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓಗಳ ಜತೆ ನಡೆಸಿದ ಸಭೆಯ ನಂತರ ಸುದ್ದಿಗಾರಿಗೆ ಈ ಕುರಿತು ಮಾಹಿತಿ ನೀಡಿದರು. ಮೋಡ ಬಿತ್ತನೆ ಕಾರ್ಯಕ್ರಮವನ್ನು ಆರಂಭಿಸಲು ಈಗಾಗಲೇ ಅಗತ್ಯ ಟೆಂಡರ್ ಕರೆಯಲಾಗಿದ್ದು, ಇನ್ನೊಂದು ವಾರ ಇಲ್ಲವೆ ಹತ್ತು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
2 ವರ್ಷಗಳ ಅವಧಿಗೆ ಒಟ್ಟು 87 ಕೋಟಿ ರೂ ಮೊತ್ತದ ಟೆಂಡರ್ ಕರೆಯಲಾಗಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಎರಡೂ ಕೇಂದ್ರಗಳಲ್ಲಿ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮೋಡಗಳ ಲಭ್ಯತೆ ಹಾಗೂ ಮಳೆಯ ಕೊರತೆ ಈ ಎರಡನ್ನೂ ಮಾನದಂಡವನ್ನಾಗಿ ಇರಿಸಿಕೊಂಡು ಮೋಡ ಬಿತ್ತನೆ ಕಾರ್ಯಕ್ರಮ ಕೈಗೊಳ್ಳಲಾಗುವುದು. ತಜ್ಞರ ಸಮಿತಿ ಎರಡು ವರ್ಷಗಳಿಗೆ ಒಂದೇ ಬಾರಿಗೆ ಟೆಂಡರ್ ಕರೆಯುವಂತೆ ಶಿಫಾರಸ್ಸು ಮಾಡಿದ್ದು, ಇದನ್ನು ಒಪ್ಪಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. 
ಜೂನ್ ತಿಂಗಳ ಕೊನೆಯ ವಾರದಲ್ಲಿ ಮೋಡ ಬಿತ್ತನೆ ಆರಂಭಗೊಳ್ಳಲಿದೆ. ಈ ಹಿಂದೆ ಹಿಂದೆ ಆಗಸ್ಟ್ ತಿಂಗಳಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿತ್ತು. ಈ ವೇಳೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಒಣಗುತ್ತಿತ್ತು. ಇದನ್ನು ಮನಗಂಡು ಬೇಗನೇ ಮೋಡ ಬಿತ್ತನೆ ಮಾಡಲಾಗುತ್ತಿದೆ ಎಂದು ಕೃಷ್ಣ ಭೈರೇಗೌಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. 
ಉದ್ಯೋಗ ಖಾತ್ರಿ ಯೋಜನೆಯಡಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 30 ರಿಂದ 40 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗುತ್ತಿತ್ತು. ಆದರೆ ಈ ಬಾರಿ ದಾಖಲೆ ನಿರ್ಮಿಸಲಾಗಿದ್ದು, ಮೇ ಅಂತ್ಯದ ವೇಳೆಗೆ 1.80 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಯಾರೂ ಸಹ ಗುಳೆ ಹೋಗದಂತೆ ತಡೆಗಟ್ಟಲಾಗುತ್ತಿದೆ ಎಂದರು. 
ರಾಜ್ಯ ಸರ್ಕಾರಕ್ಕೆ ನರೇಗಾ ಯೋಜನೆಯಡಿ ಕೇಂದ್ರದಿಂದ ಬರಬೇಕಾಗಿದ್ದ ಬಾಕಿ 1697 ಕೋಟಿ ರೂ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಅದರಿಂದ ಯೋಜನೆಯ ಮೇಲಾಗುವ ಪರಿಣಾಮವನ್ನು ಮನಗಂಡು ರಾಜ್ಯ ಸರ್ಕಾರದಿಂದಲೇ ಕೂಲಿ ಹಣವನ್ನು ಭರಿಸಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಕುಡಿಯುವ ನೀರು ಪೂರೈಕೆ ಹಾಗೂ ಇತರ ಬರ ಪರಿಹಾರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದ 2999 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿಗೆ ತೊಂದರೆ ಇದ್ದು, ಅದರಲ್ಲಿ 1623   ಗ್ರಾಮಗಳಲ್ಲಿ 2322 ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗೆಯೇ 1362 ಗ್ರಾಮಗಳಲ್ಲಿ 1872 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಅವುಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.  
ನಗರ ಪ್ರದೇಶದ 6428 ವಾರ್ಡ್ ಗಳ ಪೈಕಿ 451 ವಾರ್ಡ್ ಗಳಲ್ಲಿ 271 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದು, ಸರ್ಕಾರ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.ಈಗಾಗಲೇ ಸರ್ಕಾರದಿಂದ 713 ಕೋಟಿ ರೂ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೃಷ್ಣ ಭೈರೇಗೌಡ ವಿವರಿಸಿದರು. 
ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಟಾಸ್ಕಪೋರ್ಸ್‌ಗಳಿಗೆ 200 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. 100 ತಾಲ್ಲೂಕುಗಳಿಗೆ ತಲಾ 1.5 ಕೋಟಿ ರೂ, 62 ತಾಲ್ಲೂಕುಗಳಿಗೆ ತಲಾ 1 ಕೋಟಿ ನೀಡಲಾಗಿದೆ. ಬರ ಘೋಷಣೆಯಾಗದ 14 ತಾಲ್ಲೂಕುಗಳಿಗೆ 35 ಲಕ್ಷ ಅನುದಾನ ಒದಗಿಸಲಾಗಿದೆ.  ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಇಂದು ತಿಳಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com