ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಡಿ ಸಿ ತಮ್ಮಣ್ಣ

ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಪ್ರತಿಯೊಂದು ತಾಲ್ಲೂಕುಗಳಲ್ಲಿ ಇಂತಹ....
ಡಿಸಿ ತಮ್ಮಣ್ಣ
ಡಿಸಿ ತಮ್ಮಣ್ಣ
ಬೆಂಗಳೂರು: ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಪ್ರತಿಯೊಂದು ತಾಲ್ಲೂಕುಗಳಲ್ಲಿ ಇಂತಹ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಸೋಮವಾರ ಹೇಳಿದ್ದಾರೆ. 
ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಾರಂಭಿಕ ಹಂತದಲ್ಲಿ 50 ತಾಲ್ಲೂಕುಗಳಲ್ಲಿ ಜನ ಸಾಮಾನ್ಯರಿಗೆ ಅಗತ್ಯ ಸೌಕರ್ಯಗಳಿರುವ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 250 ಕೋಟಿ ರೂ. ಹಣ ನೀಡುವಂತೆ ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ಬರುವವರು ನೇರವಾಗಿ ಬಸ್ ಇಳಿದು ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು. 
ಕಟ್ಟಡ, ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪಾಸುಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಖಾಸಗಿ ಬಸ್ಸುಗಳಂತೆಯೇ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹೊಸ ಬಸ್ಸುಗಳನ್ನು ರಸ್ತೆ ಸಾರಿಗೆ ಸಂಸ್ಥೆಗೆ ಸೇರ್ಪಡೆ ಮಾಡಲಾಗುವುದು. ಸಾರಿಗೆ ಸಂಸ್ಥೆ ಶೀಘ್ರದಲ್ಲೇ ಹೊಸದಾಗಿ 3,500 ಬಸ್ಸುಗಳನ್ನು ಖರೀದಿಸಲಿದೆ ಎಂದರು.
ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರ ಏರಿಕೆಯಾಗುವುದು ಖಚಿತ. ದರ ಪರಿಷ್ಕರಿಸದಿದ್ದರೆ ಸಂಸ್ಥೆ ನಷ್ಟಕ್ಕೊಳಗಾಗುತ್ತದೆ. ಜತೆಗೆ ಸರ್ಕಾರದಿಂದ ಅನುದಾನ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಸಚಿವ ತಮ್ಮಣ್ಣ ಕಳವಳ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com