ಸಂಜೀವ್ ಕುಮಾರ್
ಸಂಜೀವ್ ಕುಮಾರ್

ರಾಜ್ಯಾದ್ಯಂತ ಮತ ಎಣಿಕೆಗೆ ಆಯೋಗ ಸಜ್ಜು, ಸಂಜೆ 6ರೊಳಗೆ ಫಲಿತಾಂಶ ಪ್ರಕಟ: ಸಂಜೀವ್ ಕುಮಾರ್

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೇ 23ರಂದು ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ವಿವಿಪ್ಯಾಟ್ ರಸೀತಿ ಎಣಿಕೆ....
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೇ 23ರಂದು ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ವಿವಿಪ್ಯಾಟ್ ರಸೀತಿ ಎಣಿಕೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ಸುಮಾರು ನಾಲ್ಕು ಗಂಟೆಗಳ ಕಾಲ ವಿಳಂಬವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 28 ಮತ ಎಣಿಕಾ ಕೇಂದ್ರಗಳಿದ್ದು, 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು ಸೇರಿ 11 ಸಾವಿರದಷ್ಟು ಚುನಾವಣಾ ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. 
28 ಮತ ಎಣಿಕೆ ಕೇಂದ್ರಗಳಲ್ಲಿ 3,223 ಎಣಿಕೆ ಟೇಬಲ್ ಗಳನ್ನು ಹಾಕಲಾಗಿದ್ದು, ಒಟ್ಟು 4,215 ಸುತ್ತಿನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ಸುತ್ತಿನ ಎಣಿಕೆಗೂ ಸರಾಸರಿ 20 ನಿಮಿಷದ ಅವಧಿ ಹಿಡಿಯುತ್ತದೆ. ಈ ಲೆಕ್ಕಾಚಾರದ ಅನುಸಾರ, ಮಧ್ಯಾಹ್ನ 12ರ ಸುಮಾರಿಗೆ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ನಂತರ, ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ 5 ವಿವಿಪ್ಯಾಟ್ ರಸೀತಿಯನ್ನು ಲೆಕ್ಕ ಹಾಕಬೇಕಿರುವುದರಿಂದ ಫಲಿತಾಂಶ ಪ್ರಕಟಣೆ ವಿಳಂಬವಾಗಲಿದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ. 
ಮತಗಟ್ಟೆಗಳಲ್ಲಿ ವಿವಿಪ್ಯಾಟ್ ರಸೀತಿ ಲೆಕ್ಕ ಹಾಕಲು ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲಿ ಒಂದು ವಿವಿಪ್ಯಾಟ್ ರಸೀತಿ ಎಣಿಕೆ ಪೂರ್ಣಗೊಂಡ ನಂತರವೇ ಇನ್ನೊಂದರ ಲೆಕ್ಕ ಹಾಕಲಾಗುತ್ತದೆ. ಒಂದು ಸುತ್ತಿನ ಎಣಿಕೆಗೆ 45 ನಿಮಿಷಗಳ ಅವಧಿ ಬೇಕಾಗುತ್ತದೆ. ಇದರಿಂದ ಪ್ರತಿ ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್ ರಸೀತಿ ಎಣಿಕೆಗೆ ಸುಮಾರು 4 ಗಂಟೆಗಳ ಕಾಲಾವಧಿ ಅಗತ್ಯವಿದೆ ಎಂದರು. 
ಆದರೆ, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಹೊಸ ವ್ಯವಸ್ಥೆಗೆ ಕೂಡ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಮಧ್ಯಾಹ್ನ 3ರಿಂದ ಸಂಜೆ 6ರೊಳಗೆ ಫಲಿತಾಂಶ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದರು. 
ರಾಜ್ಯದ 16 ಮತಗಟ್ಟೆಗಳ 31 ಇವಿಯಂ ಹಾಗೂ ವಿವಿಪ್ಯಾಟ್ ಗಳಲ್ಲಿ ಅಣಕು ಮತದಾನವನ್ನು ಅಳಿಸಿ ಹಾಕಿಲ್ಲ. ಇದರಿಂದ ಈ ಮತಗಟ್ಟೆಗಳಲ್ಲಿ ಕೇವಲ ವಿವಿಪ್ಯಾಟ್ ರಸೀತಿಗಳನ್ನಷ್ಟೇ ಎಣಿಕೆಗೆ ಆಯ್ಕೆ ಮಾಡಲಾಗುವುದು. ಬಳ್ಳಾರಿಯ 104ನೇ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ರಸೀತಿಯನ್ನು ಮಾತ್ರ ಎಣಿಕೆ ಮಾಡಲಾಗುವುದು. ಇವಿಎಂ ಮತಗಳು ಹಾಗೂ ವಿವಿಪ್ಯಾಟ್ ರಸೀತಿಗಳ ನಡುವೆ ವ್ಯತ್ಯಾಸ ಕಂಡುಬಂದಲ್ಲಿ, ವಿವಿಪ್ಯಾಟ್ ಎಣಿಕೆಯನ್ನೇ ಅಂತಿಮ ಎಂದು ಪರಿಗಣಿಸಲಾಗುವುದು ಎಂದರು. 
ಅಂಚೆ ಮತಗಳ ಕುರಿತು ಮಾಹಿತಿ ನೀಡಿದ ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್, ಮೇ 23ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ. ಮೊದಲ ಅರ್ಧ ಗಂಟೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ, ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ.  ವಿಶೇಷ ಮೆಸೆಂಜರ್ ವ್ಯವಸ್ಥೆ, ಅಂಚೆ ಮತದಾನದಿಂದ ಇಲ್ಲಿಯವರೆಗೆ ಒಟ್ಟು 98, 606 ಅಂಚೆ ಮತಗಳನ್ನು ಸ್ವೀಕರಿಸಲಾಗಿದ್ದು, ಮತಎಣಿಕೆ ಆರಂಭವಾಗುವರೆಗೂ ಅಂಚೆ ಮತಗಳನ್ನು ಸ್ವೀಕರಿಸಲು ಅವಕಾಶವಿದೆ ಎಂದರು. 
ರಾಜ್ಯದಲ್ಲಿ ಏ.18 ಹಾಗೂ ಏ.23ರಂದು ನಡೆದ ಎರಡು ಹಂತಗಳ ಚುನಾವಣೆಯಲ್ಲಿ ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 3,50,31,495 ಮಂದಿ ಚಲಾವಣೆ ಮಾಡಿದ್ದು, ಮಂಡ್ಯದಲ್ಲಿ ಅತಿ ಹೆಚ್ಚು ಶೇ.80.23, ದಕ್ಷಿಣ ಕನ್ನಡದಲ್ಲಿ ಶೇ. 77.90 ಹಾಗೂ ತುಮಕೂರು ಕ್ಷೇತ್ರದಲ್ಲಿ ಶೇ.77.90ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.47ರಷ್ಟು ಮತದಾನವಾಗಿದೆ. 
ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆಯ ಉಪ ಚುನಾವಣೆಗಳ ಮತ ಎಣಿಕೆಯೂ ಮೇ.23ರಂದೇ ನಡೆಯಲಿದೆ. ಕುಂದಗೋಳದ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಹಾಗೂ ಧಾರವಾಡದ ಎತ್ತಿನಗುಡ್ಡದ ಕೃಷಿ ವಿಜ್ಞಾನ ವಿವಿಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

Related Stories

No stories found.

Advertisement

X
Kannada Prabha
www.kannadaprabha.com