ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ 10 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ!

ಇಂದು ಶಿಕ್ಷಕರಿಲ್ಲದ ಶಾಲೆಗಳಿವೆ ಎಂದು ಹೇಳಿದರೆ ಈ ಮಾತನ್ನು ನಂಬಲು ಕಷ್ಟವಾದರೂ ಸತ್ಯ...

Published: 22nd May 2019 12:00 PM  |   Last Updated: 22nd May 2019 09:34 AM   |  A+A-


Representational image

ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಚಿತ್ರದುರ್ಗ: ಇಂದು ಶಿಕ್ಷಕರಿಲ್ಲದ ಶಾಲೆಗಳಿವೆ ಎಂದು ಹೇಳಿದರೆ ಈ ಮಾತನ್ನು ನಂಬಲು ಕಷ್ಟವಾದರೂ ಸತ್ಯ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿರುವ 10 ಶಾಲೆಗಳಲ್ಲಿ ಒಬ್ಬರೇ ಒಬ್ಬರು ಅಧ್ಯಾಪಕರಿಲ್ಲ.

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಮೊಳಕಾಲ್ಮೂರು ತಾಲ್ಲೂಕಿನ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯಿಂದ ನಲುಗಿ ಹೋಗಿವೆ. ಈ ತಾಲ್ಲೂಕಿನಲ್ಲಿ ಯಾವುದೇ ಖಾಸಗಿ ಶಾಲೆಗಳಿಲ್ಲ. ಬಡ ಮತ್ತು ಮಧ್ಯಮ ವರ್ಗದ ಪೋಷಕರ ಮಕ್ಕಳು ಓದುತ್ತಿರುವುದು ಇದೇ ಸರ್ಕಾರಿ ಶಾಲೆಗಳಲ್ಲಿ. ಆದರೆ ಶಿಕ್ಷಕರಿಲ್ಲದೆ ಮಕ್ಕಳಿಗೆ ಸರಿಯಾದ ವಿಧ್ಯಾಭ್ಯಾಸ ದೊರಕುತ್ತಿಲ್ಲ.

ಈ ತಾಲ್ಲೂಕಿನ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ಕೂಡ ಪರಿಸ್ಥಿತಿ ಸುಧಾರಿಸಿಲ್ಲ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್ ಟಿ ನಾಗಿ ರೆಡ್ಡಿ, ಸರಿಯಾದ ಸಾರ್ವಜನಿಕ ಸಾರಿಗೆ ಕೊರತೆ, ಕುಡಿಯುವ ನೀರಿನ ಕೊರತೆ, ಮೂಲಭೂತ ಸೌಕರ್ಯಗಳಿಲ್ಲದಿರುವುದರಿಂದ ಮತ್ತು ಇಲ್ಲಿನ ಅತಿಯಾದ ಬಿಸಿಲಿನ ಹವಾಮಾನದಿಂದಾಗಿ ಶಿಕ್ಷಕರು ಇಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಸರ್ಕಾರ ಮೊಳಕಾಲ್ಮೂರಿಗೆ ವಿಶೇಷ ಪ್ರದೇಶ ಸ್ಥಿತಿಗತಿಯನ್ನು ಒದಗಿಸಿ ಶಿಕ್ಷಕರು ಇಲ್ಲಿ ಕೆಲಸ ಮಾಡಲು ಮುಂದಾಗಲು ವಿಶೇಷ ವೇತನ ವ್ಯವಸ್ಥೆ ಜಾರಿಗೆ ತರಬೇಕು ಎನ್ನುತ್ತಾರೆ. ಮೊಳಕಾಲ್ಮೂರಿನಿಂದ ಚಿತ್ರದುರ್ಗದ ಬೇರೆ ತಾಲ್ಲೂಕುಗಳಿಗೆ ಶಿಕ್ಷಕರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎನ್ನುತ್ತಾರೆ.

ತಮ್ಮ ಮಕ್ಕಳನ್ನು ಪಟ್ಟಣದ ಶಾಲೆಗಳಿಗೆ ಕಳುಹಿಸುವಷ್ಟು ಪೋಷಕರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಇನ್ನೇನು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವ ಹೊತ್ತಿನಲ್ಲಿ ಆದಷ್ಟು ಶೀಘ್ರವೇ ಶಿಕ್ಷಕರ ನೇಮಕಾತಿಯಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಟನಿ, ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ ಎನ್ನುತ್ತಾರೆ. ಈ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪದವಿ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ಈ ತಿಂಗಳ 25 ಮತ್ತು 26ರಂದು ನಡೆಯಲಿದ್ದು ಅದರಲ್ಲಿ ಖಾಲಿಯಿರುವ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp