ಬ್ಯಾಂಕ್ ಗೆ ಸಾಲ ಹಿಂತಿರುಗಿಸದ ರೈತರಿಗೆ ಕೋರ್ಟ್ ನೊಟೀಸ್, ಕಂಗಾಲಾದ ರೈತರು

ಚಾಮರಾಜನಗರ ಜಿಲ್ಲೆಯ ಬರಗಾಲಪೀಡಿತ ಪ್ರದೇಶಗಳ ರೈತರು ತಮ್ಮ ಸಾಲಮನ್ನಾ ಆಗುತ್ತದೆ ಎಂದು ...

Published: 22nd May 2019 12:00 PM  |   Last Updated: 22nd May 2019 12:13 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಮೈಸೂರು: ಚಾಮರಾಜನಗರ ಜಿಲ್ಲೆಯ ಬರಗಾಲಪೀಡಿತ ಪ್ರದೇಶಗಳ ರೈತರು ತಮ್ಮ ಸಾಲಮನ್ನಾ ಆಗುತ್ತದೆ ಎಂದು ಸರ್ಕಾರದಿಂದ ಪತ್ರ ಬಂದಾಗ ಅತೀವ ಹರ್ಷಗೊಂಡಿದ್ದರು.
ಆದರೆ ನಿನ್ನೆ ಬಂದ ಮತ್ತೊಂದು ಪತ್ರ ಅವರನ್ನು ಆಕಾಶವೇ ಕಳಚಿ ಬಿದ್ದಂತೆ ಮಾಡಿದೆ. ಬ್ಯಾಂಕಿನಿಂದ ಪಡೆದ ಬೆಳೆಸಾಲ ಮರುಪಾವತಿ ಮಾಡದಿದ್ದದ್ದಕ್ಕೆ ಹೈಕೋರ್ಟ್ ನಿಂದ ಸಮ್ಮನ್ಸ್ ಜಾರಿಯಾಗಿದೆ.

ಸತತ ಬರಗಾಲದಿಂದ ಬೆಳೆ ಕೈಕೊಟ್ಟು ಕಂಗೆಟ್ಟು ಹೋಗಿರುವ ರೈತರು 2009ರಲ್ಲಿ ಪಡೆದುಕೊಂಡ ಬೆಳೆಸಾಲ 1.75 ಲಕ್ಷ ರೂಪಾಯಿಗೆ ಬಡ್ಡಿ ಸೇರಿಸಿ 3.5 ಲಕ್ಷ ರೂಪಾಯಿ ನೀಡಬೇಕೆಂದು ಕೋರ್ಟ್ ಸಮ್ಮನ್ಸ್ ಜಾರಿ ಮಾಡಿದೆ.

ರಾಜ್ಯದ 35 ಲಕ್ಷ ರೈತರ 45 ಸಾವಿರ ಕೋಟಿ ರೂಪಾಯಿ ಬೆಳೆಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಳೆದ ವರ್ಷ ಘೋಷಿಸಿದ್ದಾಗ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ತಾವು ಪಡೆದ ಸಾಲದ ವಿವರಗಳನ್ನು ಆಧಾರ್ ಕಾರ್ಡು, ಬ್ಯಾಂಕು ಖಾತೆ ವಿವರ ಮತ್ತು ಭೂಮಿಯ ಆರ್ ಟಿಸಿಯ ನಕಲು ಪ್ರತಿಯೊಂದಿಗೆ ನೀಡುವಂತೆ ರೈತರಿಗೆ ಸರ್ಕಾರದಿಂದ ಪತ್ರ ಕೂಡ ಬಂದಿತ್ತು.

ಬರಗಾಲದಿಂದ ನೀರಿಲ್ಲದೆ ಕಂಗೆಟ್ಟು ತಮ್ಮ ಎರಡು ಎಕರೆ ಬಾಳೆತೋಟವನ್ನು ರಕ್ಷಿಸಲು ನೋಡುತ್ತಿರುವ ರೈತ ವೀರತಪ್ಪ 1.75 ಲಕ್ಷ ಸಾಲ ಮರುಪಾವತಿ ಮಾಡದ್ದಕ್ಕೆ ಕೋರ್ಟ್ ನಿಂದ ಬಂದ ನೊಟೀಸ್ ನೋಡಿ ಆಘಾತಗೊಂಡಿದ್ದಾರೆ.

2009ರಲ್ಲಿ ವಿಜಯಾ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡಿದ್ದೆ. ಬೆಳೆ ಪರಿಹಾರ ನಿಧಿಯಿಂದ ಪಡೆದುಕೊಂಡ ಸಾಲದ ಮೊತ್ತವನ್ನು ಕೆಲ ವರ್ಷಗಳ ಹಿಂದೆಯೇ ಕಟ್ಟಬೇಕಾಗಿತ್ತು. ನನಗೆ ಈಗ ಬರಗಾಲದಿಂದಾಗಿ ಬೆಳೆ ಕೈಗೆ ಸಿಗದೆ ಕಟ್ಟಲಾಗುತ್ತಿಲ್ಲ ಎಂದು ಹೇಳಿದರು.

ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆಯಲ್ಲವೇ ಎಂದು ಬ್ಯಾಂಕಿಗೆ ಹೋಗಿ ಅಲ್ಲಿನ ಅಧಿಕಾರಿಗಳನ್ನು ಕೇಳಿದರೆ ಅವರಿಗೆ ಯಾವುದೇ ಸೂಚನೆ ಬಂದಿಲ್ಲ ಎನ್ನುತ್ತಾರೆ. ನಿಮಗೆ ನಾವು ಸಾಲ ಕೊಟ್ಟಿದ್ದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಲ್ಲ ಎನ್ನುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು ವೀರತಪ್ಪ.

ಬ್ಯಾಂಕಿನಿಂದ ಪಡೆದ ಮೂರೂವರೆ ಲಕ್ಷ ಸಾಲವನ್ನು ಹಿಂತಿರುಗಿಸದ್ದಕ್ಕೆ ವಿಧವೆ ಚಿನ್ನಮ್ಮಗೆ ಸಹ ಬ್ಯಾಂಕ್ ಲೀಗಲ್ ನೊಟೀಸ್ ಕಳುಹಿಸಿದೆ. ಕೋರ್ಟ್, ಕಾನೂನು ಕಟ್ಟಳೆ ಗೊತ್ತಿಲ್ಲದ ಚಿನ್ನಮ್ಮಗೆ ಇದು ಸಹಜವಾಗಿ ಭಯ ಹುಟ್ಟಿಸಿದೆ.

ಕೋರ್ಟ್ ಗೆ ಜೂನ್ 9ರೊಳಗೆ ಉತ್ತರಿಸಬೇಕಾಗಿದ್ದು ತಮ್ಮ ಜೊತೆ ಸರ್ಕಾರ ಕೂಡ ಕೋರ್ಟ್ ಗೆ ಉತ್ತರ ನೀಡಬೇಕು, ಏಕೆಂದರೆ ಸರ್ಕಾರ ನಮ್ಮ ಸಾಲವನ್ನು ಮನ್ನಾ ಮಾಡುತ್ತದೆ ಎಂದು ಭರವಸೆ ಕೊಟ್ಟಿದೆ ಎನ್ನುತ್ತಾರೆ ಮತ್ತೊಬ್ಬ ರೈತ ಮೂರ್ತಿ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp