ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ: ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ

ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಹಾಗೂ ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಹಾಗೂ ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಅಧಿಕಾರ ನೀಡಿರುವ ಅರ್ಹತಾ ಮೊತ್ತದ ಮಿತಿಯನ್ನು 2 ಲಕ್ಷ ರೂಗಳಿಂದ 3 ಲಕ್ಷ ರೂಗೆ ಹೆಚ್ಚಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ವೈದ್ಯಕೀಯ ಚಿಕಿತ್ಸಾ ವೆಚ್ಚ ದುಬಾರಿಯಾಗಿದೆ. ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅರ್ಹತಾ ಮೊತ್ತ 2 ಲಕ್ಷ ರೂ.ಗಳನ್ನು ಮೀರಿದ ಮರುಪಾವತಿ ಪ್ರಕರಣಗಳು ನಿಯಮ ಸಡಿಲಿಕೆಗಾಗಿ, ಆಡಳಿತ ಇಲಾಖೆಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಬರುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ವೈದ್ಯಕೀಯ ವೆಚ್ಚದ ಮರುಪಾವತಿಯು ವಿಳಂಬವಾಗಿ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ನೀಡಿರುವ 2 ಲಕ್ಷ ರೂ.ಗಳವರೆಗಿನ ಅಧಿಕಾರ ಮಿತಿಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶ ಹೊರಡಿಸಿದ ದಿನಾಂಕದ ನಂತರ ಚಿಕಿತ್ಸೆ ಪಡೆದಿರುವ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಅರ್ಹತಾ ಮೊತ್ತ 3 ಲಕ್ಷ ರೂ.ಗಳನ್ನು ಮೀರಿದ ಹಾಗೂ 5 ಲಕ್ಷ ರೂ.ವರೆಗಿನ ಮರುಪಾವತಿ ಪ್ರಕರಣಗಳನ್ನು ಇಲಾಖಾ ಮುಖ್ಯಸ್ಥರು, ತಮ್ಮ ನಿರ್ದಿಷ್ಟ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಗಳನ್ನು ನೇರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸದೆ ಸಂಬಂಧಪಟ್ಟ ಸಚಿವಾಲಯದ ಇಲಾಖಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ಮೂಲಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು. ನಂತರ ಆಡಳಿತ ಇಲಾಖೆ ಈ ಪ್ರಸ್ತಾವನೆಗಳನ್ನು ಯಾಂತ್ರಿಕವಾಗಿ ಪರಿಗಣಿಸದೇ ಅಪವಾದಾತ್ಮಕವಾದ ಸಂದರ್ಭವೆಂದು ದೃಢಪಟ್ಟಲ್ಲಿ ಮಾತ್ರ ನಿರ್ದಿಷ್ಟ ಶಿಫಾರಸುಗಳೊಂದಿಗೆ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಬೇಕು. ಇದೇ ರೀತಿ 5 ಲಕ್ಷ ರೂ.ಮೀರಿದ ಹಾಗೂ ಇನ್ನಿತರ ನಿಯಮಗಳ ಸಡಿಲಿಕೆ ಪ್ರಕರಣಗಳನ್ನು ಪರಿಶೀಲಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಕ ಮುಖ್ಯಮಂತ್ರಿ ಅವರ ಆದೇಶಕ್ಕಾಗಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com