ರಾಜೀನಾಮೆ ಕೊಡಲು ಕುಮಾರಸ್ವಾಮಿ ನಿರ್ಧಾರ, ತಡೆದ ರಾಹುಲ್ ಗಾಂಧಿ

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.

Published: 24th May 2019 12:00 PM  |   Last Updated: 24th May 2019 06:50 AM   |  A+A-


CM HD Kumaraswamy decides to resign, but Rahul Gandhi stops

ರಾಜೀನಾಮೆ ಕೊಡಲು ಕುಮಾರಸ್ವಾಮಿ ನಿರ್ಧಾರ, ತಡೆದ ರಾಹುಲ್ ಗಾಂಧಿ

Posted By : SBV SBV
Source : UNI
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.

ರಾಜೀನಾಮೆ ಮಾಹಿತಿ ತಿಳಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಗೆ ತಕ್ಷಣವೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರವಾಣಿ ಕರೆಮಾಡಿ ಗೊಂದಲ ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲುವು ದಾಖಲಿಸಿ ಉಳಿದ 26 ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಂಡಿತ್ತು.ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು ಎನ್ನಲಾಗಿದೆ. ಮೈತ್ರಿ ಸರ್ಕಾರ ಜನರ ನಿರೀಕ್ಷೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಅಂತೆಯೇ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ದ ಜನ ಮತ ಚಲಾವಣೆ ಮಾಡಿದ್ದಾರೆ ಎಂದು ಭಾವಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕುಮಾರಸ್ವಾಮಿ ತೀರ್ಮಾನಿಸಿದ್ದರು ಎನ್ನಲಾಗಿದೆ. 

ಇದರ ಜೊತೆ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ, ಕಾಂಗ್ರೆಸ್ ಶಾಸಕರ ಹೇಳಿಕೆಗಳು, ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆ ಕೊರತೆ ,ಆಪರೇಷನ್ ಕಮಲ ,ಸರ್ಕಾರ ಆಡಳಿತ ನಡೆಸಲು ಕಾಂಗ್ರೆಸ್ ಶಾಸಕರ ಅಸಹಕಾರ. ಮೇ 23ರ ಫಲಿತಾಂಶದ ಬಳಿಕ ಸರ್ಕಾರ ಬದಲಾವಣೆ ವಿಚಾರಗಳನ್ನೆಲ್ಲಾ ಚರ್ಚಿಸಿ ತಾವು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸೂಕ್ತವಲ್ಲವೆಂಬ ನಿರ್ಣಯಕ್ಕೆ ಬಂದಿದ್ದರು. ರಾಹುಲ್ ಗಾಂಧಿ ಕುಮಾರಸ್ವಾಮಿ ಅವರಿಗೆ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ. ಸಂಕಷ್ಟದ ಪರಿಸ್ಥಿತಿಯಲ್ಲಿ ದಿಡೀರ್ ಬೆಳವಣಿಗೆ ನಡೆದರೆ ಬಿಜೆಪಿ ಅದರ ಲಾಭ ಪಡೆಯುವ ಸಂಚು ನಡೆಸಬಹುದು.ಇದರಿಂದ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರು , ಸಚಿವರು ತಮ್ಮ ಮೇಲೆ ವಿಶ್ವಾಸವಿರಿಸಿದ್ದಾರೆ ಎಂಬ ಸಂದೇಶ ರವಾನಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ರಾಹುಲ್ ಗಾಂಧಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಅಂತೆಯೇ ಕಾಂಗ್ರೆಸ್ ಸಚಿವರು ಪ್ರತ್ಯೇಕ ಸಭೆ ಸೇರಿ ಮುಖ್ಯಮಂತ್ರಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿತ್ತು. 

ಬೆಳಗ್ಗೆ ಪರಮೇಶ್ವರ್ ಮನೆಯಲ್ಲಿ ಉಪಹಾರ ಕೂಟದ ನೆಪದಲ್ಲಿ ಸಭೆ ಸೇರಿದ ಕಾಂಗ್ರೆಸ್ ಸಚಿವರು ಮುಖ್ಯಮಂತ್ರಿ ಮೇಲೆ ಪೂರ್ಣವಿಶ್ವಾಸವಿದೆ.ಮೈತ್ರಿ ಮುಂದುವರೆಸಲು ನಮ್ಮ ಆಕ್ಷೇಪವಿಲ್ಲ ಎಂಬ ಸಂದೇಶ ನೀಡಿದರು. ಇದರಿಂದಾಗಿ ಮುಖ್ಯಮಂತ್ರಿ ರಾಜೀನಾಮೆ ಗೊಂದಲಕ್ಕೆ ತೆರೆ ಬಿದ್ದಿತು. ಅಲ್ಲದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸಚಿವರುಗಳು ,ಶಾಸಕರು ,ಮೈತ್ರಿ ಸರ್ಕಾರದ ಮೇಲೆ ಅನಾವಶ್ಯಕ ಆರೋಪ , ದೂರು , ಮುಖ್ಯಮಂತ್ರಿ ಬದಲಾವಣೆಯಂತಹ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಅಂತೆಯೇ ಜೆಡಿಎಸ್ ಸಚಿವರು ,ಶಾಸಕರು ಸಹ ಇದೇ ನೀತಿಯನ್ನು ಅನುಸರಿಸಿ ಪಾಲಿಸುವಂತೆಯೂ ಸೂಚನೆ ನೀಡಿದ್ದಾರೆ. ಮಹತ್ವದ ಸಭೆ, ಪಕ್ಷ ಹಾಗೂ ಸರ್ಕಾರದ ಗೊಂದಲಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕೆ ಸದ್ಯಕ್ಕೆ ತಡೆಬಿದ್ದಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp