ದ.ಕ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ಪೋರ್ಟಲ್ ಆರಂಭ

ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ.
ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್ ಶಶಿಕಾಂತ್ ಸೆಂತಿಲ್ ಅವರ ಕನಸಿನ ಕೂಸಾಗಿರುವ ಆನ್ ಲೈನ್ ಪೋರ್ಟಲ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಮರಳು ಮಾಫಿಯಾ ದಂಧೆಯಿಂದ ಬಚಾವ್ ಮಾಡಲಿದೆ ಎಂಬ ನಂಬಿಕೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ವ್ಯಾಪಕವಾಗಿತ್ತು. ಮರಳಿನ ಕೊರತೆಯನ್ನು ಸೃಷ್ಟಿಸಿ ಜನರಿಗೆ ಹೆಚ್ಚಿನ ದರದಲ್ಲಿ ಮರಳನ್ನು ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ವೆಬ್ ಸೈಟ್ ಆರಂಭದಿಂದ ದಂಧೆಗೆ ಕಡಿವಾಣ ಹಾಕಲಿದೆ.
ಹೊಸ ಆನ್ ಲೈನ್ ವ್ಯವಸ್ಥೆಯಿಂದಾಗಿ ಮರಳು ಖರೀದಿಯಲ್ಲಿ ಇಷ್ಟು ದಿನ ನಡೆಯುತ್ತಿದ್ದ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಿ ನಿಯಂತ್ರಿತ ದರಕ್ಕೆ ಮರಳು ಸಿಗಲಿದೆ. ಮರಳು ಮಾರಾಟಕ್ಕೆ ಅನುಮತಿ ಪಡೆದಿರುವವರ ವಿವರ, ದರ, ಸಾಗಾಟದ ವೆಚ್ಚ ಮತ್ತು ಪಾರದರ್ಶಕವಾಗಿ ಮರಳನ್ನು ಸಾಗಾಟ ಮಾಡುವ ಬಗ್ಗೆ ವೆಬ್ ಸೈಟ್ ನಲ್ಲಿ ವಿವರವಿರುತ್ತದೆ. ಗ್ರಾಹಕರು ಮರಳಿಗೆ ಆರ್ಡರ್ ಕೊಟ್ಟ ಕೂಡಲೇ ಹತ್ತಿರದ ಪರ್ಮಿಟ್ ದಾರರು ಮತ್ತು ಟ್ರಕ್ ಮಾಲೀಕರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಆಗ ಸಂಬಂಧಪಟ್ಟ ಗ್ರಾಹಕರಿಗೆ ಮರಳು ಪೂರೈಕೆಯಾಗಿದೆ ಎಂದರ್ಥ.
ಗಣಿ ಮತ್ತು ಭೂಗರ್ಭ ಇಲಾಖೆಯಿಂದ ಮರಳು ಮಾರಾಟ ಅನುಮತಿ ಹೊಂದಿರುವವರು ವೆಬ್ ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳದ ಬೇರೆಯವರಿಗೂ ಮರಳು ಮಾರಾಟ ಮಾಡಬಹುದು. ಆದರೆ ತಮ್ಮಲ್ಲಿರುವ ಮರಳಿನ ಪ್ರಮಾಣದ ಬಗ್ಗೆ ಗಣಿ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com