ರಾಜಕಾರಣಕ್ಕಿಂತಲೂ ಮಾಧ್ಯಮವೇ ಹೆಚ್ಚು ಭ್ರಷ್ಟ: ಸ್ಪೀಕರ್ ರಮೇಶ್ ಕುಮಾರ್

ರಾಜಕೀಯ ಪಕ್ಷ ಸೇರಿದಂತೆ ಮಾಧ್ಯಮಗಳಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಸಭಾಧ್ಯಕ್ಷ ಕೆ.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಭ‍್ರಷ್ಟಾಚಾರ ಎನ್ನುವುದು ರಾಜಕೀಯ ಕ್ಷೇತ್ರವನ್ನೂ ಮೀರಿ ಮಾಧ್ಯಮ ಕ್ಷೇತ್ರಕ್ಕೂ ಕಾಲಿರಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿಯೇ ಹೆಚ್ಚು ಶ್ರೀಮಂತರಿದ್ದಾರೆ. ರಾಜಕೀಯ ಪಕ್ಷ ಸೇರಿದಂತೆ ಮಾಧ್ಯಮಗಳಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಸಭಾಧ್ಯಕ್ಷ ಕೆ.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ ಸಿ.ಎಂ. ರಾಮಚಂದ್ರ ಅವರ 'ಕಾಕ್‍ಪಿಟ್ ಆಫ್ ಇಂಡಿಯಾಸ್ ಪೊಲಿಟಿಕಲ್ ಬ್ಯಾಟಲ್ಸ್'' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಬಳಿಕ ಅವರು ಮಾತನಾಡಿದರು.

ಒಂದೆಡೆ ಹೊಗಳುಭಟ್ಟರು, ಮತ್ತೊಂದೆಡೆ ಭ್ರಷ್ಟರು, ಹೀಗೆ ಎಲ್ಲರೂ ನಾಯಕರನ್ನು ಓಲೈಸಿಕೊಳ್ಳಲು ಮುಂದಾಗಿರುವುದು ಹಾಗೂ ಎಲ್ಲದಕ್ಕೂ ಸೈ ಎನ್ನುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದರಿಂದ ಪ್ರಜಾಪ್ರಭುತ್ವಕ್ಕೆ ಸಂಚಕಾರ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು
ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯವರೆಗಿನ ಎಲ್ಲಾ ಪರವಾನಿಗೆಗಳು ತನಗೇ ಬೇಕು, ತನ್ನವರಿಗೆ ಬೇಕು ಎಂಬ ಮನೋಧರ್ಮದ ರಾಜಕಾರಣಿಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ  ಎಂದರು.
ಕುಟುಂಬ ರಾಜಕಾರಣ, ಕುಟುಂಬದ ಸದಸ್ಯರಿಗೆ ಚುನಾವಣೆಯಲ್ಲಿ ಟಿಕೆಟ್ ಹಂಚುವುದಾದರೆ ಸಮಾಜದಲ್ಲಿರುವ ಇತರ ವರ್ಗದವರ ಪಾಡೇನು ? ಈ ಬಗ್ಗೆಯೂ ಮಾಧ್ಯಮದವರು ಪ್ರಶ್ನಿಸುವುದನ್ನು ಮರೆತು ಬಿಟ್ಟಿದ್ದಾರೆ ಎಂದು ಮಾಧ್ಯಮದವರ ಜವಾಬ್ದಾರಿ ಕುರಿತು ಅವರು ಪ್ರಶ್ನಿಸಿದರು.
 ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ ಅವರನ್ನು ಬೆಂಬಲಿಸದೇ, ಆತ್ಮಸಾಕ್ಷಿಗೆ ಮತ ನೀಡಿ ಎನ್ನುವ ಮೂಲಕ ಪಕ್ಷೇತರ ಅಭ್ಯರ್ಥಿ ವರಾಹಗಿರಿ ವೆಂಕಟಗಿರಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಎಸ್‍.ನಿಜಲಿಂಗಪ್ಪ ಇಂದಿರಾ ಗಾಂಧಿ ಅವರನ್ನು ಉಚ್ಚಾಟಿಸಿದರು ಎಂದು ರಮೇಶ್ ಕುಮಾರ್ ಹಳೆಯ ಘಟನೆಯನ್ನು ಸ್ಮರಿಸಿದರು.
ಗ್ರಾಮೀಣ ಪ್ರದೇಶದ ಅನಕ್ಷರಸ್ಥರಲ್ಲಿನ ಕಳಕಳಿ ಮತ್ತು ಕಾಳಜಿ ನಗರದ ಜನರಲ್ಲಿ ಇಲ್ಲ. ಮತದಾನ ಮಾಡದೇ ಅಭಿಪ್ರಾಯ ಪ್ರಕಟಿಸುವ ನೈತಿಕತೆಯಿಲ್ಲ ಇಂತಹವರು ನಿಜವಾಗಲೂ ವಿಶ್ವಾಸ ಘಾತುಕರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಪಡೆದವರೇ ಹೆಚ್ಚು ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಐಎಎಸ್ ಅಧಿಕಾರಿಗಳು ಸಹ ಭ್ರಷ್ಟರಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿರುವುದು ಸಮಾಜದಲ್ಲಿ ತಲೆ ತಗ್ಗಿಸುವ ಸಂಗತಿ ಎಂದು ರಮೇಶ್ ಕುಮಾರ್ ತಿಳಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಫಲಿತಾಂಶದ ಹಿಂದೆ ಅಪರಾಧಿಕ ಸಂಚು ಇದೆ ಎನ್ನುವ ಮೂಲಕ ಕಾಂಗ್ರೆಸ್ ಹೀನಾಯ ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದು ಅವರು ಪರೋಕ್ಷವಾಗಿ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com