ವಿದ್ಯುತ್ ದರ ಪ್ರತಿ ಯೂನಿಟ್ ಗೆ 33 ಪೈಸೆ ಏರಿಕೆ

ಬೇಸಿಗೆ ಮುಗಿಯುತ್ತಾ ಬಂದು ಮುಂಗಾರು ಕಾಲಿಡುವ ಹೊಸ್ತಿಲಿನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು,  ಪ್ರತಿ ಯೂನಿಟ್‍ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.

ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ. 14.14, ಮೆಸ್ಕಾಂ 20.49, ಚೆಸ್ಕಾಂ 15.02, ಹೆಸ್ಕಾಂ 24.67 ಹಾಗೂ ಜಸ್ಕಾಂ 18.89 ರಷ್ಟು ಏರಿಕೆ ಹೆಚ್ಚಿಸುವಂತೆ ಒಟ್ಟಾರೆ ಶೇ.17.37 ರಷ್ಟು ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದವು.

ವಿದ್ಯುತ್ ದರ ಹೆಚ್ಚಳ ಕುರಿತು ಹೊಸ ಉಷ್ಣ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಖರೀದಿ ದರದಲ್ಲಿನ ಏರಿಕೆ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಖರೀದಿಸುವ ವಿದ್ಯುತ್ ದರದಲ್ಲಿನ ಏರಿಕೆ ಹಾಗೂ ವಿದ್ಯುತ್ ಖರೀದಿ ವೆಚ್ಚದಲ್ಲಿ ಶೇ 16 ರಷ್ಟು ಏರಿಕೆಯಾಗಿರುತ್ತದೆ. ನೌಕರರ ವೇತನ ಪರಿಷ್ಕರಣೆಯಿಂದಾಗಿ ಕಾರ್ಯ ಮತ್ತು ನಿರ್ವಹಣೆ ವೆಚ್ಚದಲ್ಲಿ ಶೇ.20 ರಷ್ಟು ಹೆಚ್ಚಳ, ಬಡ್ಡಿ ಮತ್ತು ಹಣಕಾಸು ವೆಚ್ಚದಲ್ಲಿ ಶೇ.12 ರಷ್ಟು ಏರಿಕೆ, ಸವಕಳಿ ದರದಲ್ಲಿ ಶೇ.22 ರಷ್ಟು ದರ , 2017-18 ನೇ ಸಾಲಿನ ಕೊರತೆಯಾದ 2,192.33 ಕೋಟಿ ರೂಪಾಯಿಗಳ ಹೊಂದಾಣಿಕೆಗಾಗಿ ಹಾಗೂ ಬಂಡವಾಳ ಕಾಮಗಾರಿಗಳನ್ನು  ಸಾಲ ಮಾಡುವ ಮೂಲಕ ಮಾಡಬೇಕಿದೆ. ಇದಕ್ಕೆ ಬಡ್ಡಿ ಹಾಗೂ ಹಣಕಾಸು ಸವಕಳಿ ವೆಚ್ಚದಲ್ಲಿ ಏರಿಕೆಯಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅಧ್ಯಕ್ಷ ಶಂಭುದಯಾಳ್ ಮೀನಾ ಕಾರಣಗಳನ್ನು ನೀಡಿದ್ದಾರೆ.

ಗೃಹಬಳಕೆ ಗ್ರಾಹಕರಿಗೆ ಅನ್ವಯವಾಗುವ ದರ:
ಬೆಸ್ಕಾಂ ವ್ಯಾಪ್ತಿಯ ಹಾಗೂ ಇತರೆ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸ್ಥಾವರಗಳಿಗೆ ಪ್ರತಿ ಯೂನಿಟ್‍ಗೆ 25 ಪೈಸೆ ಒಟ್ಟಾರೆ ಹೆಚ್ಚಳವಾಗಿದೆ. 30 ಯೂನಿಟ್‍ಗಳವರೆಗೆ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪ್ರಸಕ್ತ ದರ 3.50 ರೂ.ನಿಂದ ರೂ. 3.75 ಕ್ಕೆ ಏರಿಸಲಾಗಿದೆ. 31-100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.4.95 ರಿಂದ ರೂ.5.20 ಕ್ಕೆ ಏರಿಕೆಯಾಗಿದೆ.

ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಡಿಯ ಗ್ರಾಮೀಣ ಪ್ರದೇಶದ ಗೃಹ ಬಳಕೆದಾರರಿಗೆ 1-30 ಯೂನಿಟ್‍ವರೆಗೆ ಮಾಸಿಕ ಬಳಕೆಗೆ ಪ್ರಸಕ್ತ ರೂ.3.40 ಇದ್ದು, ಇದು ರೂ.3.65 ಕ್ಕೆ ಹಾಗೂ 31-100 ಯೂನಿಟ್‍ಗೆ ರೂ.4.65 ರಿಂದ ರೂ.4.90 ಕ್ಕೆ ಹೆಚ್ಚಿಸಲಾಗಿದೆ. 101-200 ಯೂನಿಟ್‍ಗೆ ರೂ.6.20 ರಿಂದ ರೂ.6.45 ಕ್ಕೆ ಏರಿಕೆಯಾಗಿದೆ.

ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ 1-300 ಯೂನಿಟ್‍ಗಳವರೆಗೆ ಪ್ರತಿ ತಿಂಗಳಿಗೆ ರೂ.3.70, 200 ಯೂನಿಟ್‍ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.7.55- ರೂ.7.80 ಕ್ಕೆ ಏರಿಕೆಯಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿ ಗೃಹಬಳಕೆ ಗ್ರಾಹಕರಿಗೆ 1-30 ಯೂನಿಟ್‍ವರಗೆ ರೂ.36, 200 ಯೂನಿಟ್‍ ಮೇಲ್ಪಟ್ಟ ಬಳಕೆಗೆ ರೂ.7.05-7.30 ರಷ್ಟು ಹೆಚ್ಚಿಸಲಾಗಿದೆ.

ಕೈಗಾರಿಕಾ ಬಳಕೆದಾರರಿಗೆ ಪ್ರಸಕ್ತ ಪ್ರತಿ ಯೂನಿಟ್‍ಗೆ 15 ಪೈಸೆಯಿಂದ 20 ಪೈಸೆಯಿರುತ್ತದೆ. ಬೆಸ್ಕಾಂ ವ್ಯಾಪ್ತಿ, ಪುರಸಭೆ ಎಲ್‍.ಟಿ.ಕೈಗಾರಿಕಾ ಬಳಕೆದಾರರಿಗೆ, ಮೊದಲ 500 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.5.65 ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.6.95 ದರ ಹೆಚ್ಚಿಸಿದೆ. ಇತರ ಪ್ರದೇಶಗಳ ಬಳಕೆದಾರರಿಗೆ ಮೊದಲ 500 ಯೂನಿಟ್‍ಗಳಿಗೆ ರೂ.3.35, ಅದಕ್ಕೂ ಮೇಲ್ಪಟ್ಟ ಬಳಕೆಗೆ ರೂ.6.30 ಆಗಿದೆ.

ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ ರೂ.8 50, ಅದರ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.9 ಗ್ರಾಮಾಂತರ ಪ್ರದೇಶದಲ್ಲಿ ಇದು ಆರಂಭಿಕ ಯೂನಿಟ್ ಗೆ ರೂ.7.50 ಹಾಗೂ 50 ಯೂನಿಟ್ ಮೀರಿದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.50 ದರ ಹೆಚ್ಚಳ ಆಗುತ್ತದೆ.

ಬೆಸ್ಕಾಂ, ಬಿಬಿಎಂಪಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ ಹಾಗೂ ಇತರೆ ಪ್ರದೇಶಗಳ  ಹೆಚ್.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಏರಿಕೆಯಾಗಿದೆ.

ಇತರೆ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿನ ಹೆಚ್‍.ಟಿ.ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್‍ಚ್ಛಕ್ತಿ ದರಗಳಲ್ಲಿ ಪ್ರತಿ ಯೂನಿಟ್‍ಗೆ 20 ಪೈಸೆಗಳ ಏರಿಕೆಯಾಗಿರುತ್ತದೆ.

ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪ:
ಆಯೋಗ ಕುಡಿಯುವ ನೀರು ಸರಬರಾಜು ಮಾಡುವ ಎಲ್‍.ಟಿ.ಸ್ಥಾವರಗಳಲ್ಲಿ ಬಳಸಲಾಗುವ ವಿದ್ಯುಚ್ಛಕ್ತಿಗೆ ದರವನ್ನು ಪ್ರತಿ ಯೂನಿಟ್‍ಗೆ 20 ಪೈಸೆಯಷ್ಟು ಏರಿಕೆ ಮಾಡಿದೆ. ಹೆಚ್.ಟಿ.ಕುಡಿಯುವ ನೀರು ಸರಬರಾಜು ಸ್ಥಾವರಗಳಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಹೆಚ್ಚಳವಾಗಿದೆ.

ಎಲ್‍ಇಡಿ, ಇಂಡಕ್ಷನ್ ಬೀದಿ ದೀಪಗಳಿಗೆ ರಿಯಾಯಿತಿ ವಿದ್ಯುತ್ ದರ:
ಬೀದಿದೀಪ ಸ್ಥಾವರಗಳಿಗೆ ಮಿತ ವಿದ್ಯುತ್ ಬಳಸುವ ಎಲ್‍.ಇ.ಡಿ ಅಳವಡಿಸಿರುವ ಬಿಬಿಎಂಪಿ ಪಾಲಿಕೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಯೂನಿಟ್‍ಗೆ ರೂ.1 ರಷ್ಟು ರಿಯಾಯಿತಿ ನೀಡಲಾಗಿದೆ. ಅಂದರೆ ಈಗಿರುವ ಪ್ರೋತ್ಸಾಹ ದರವನ್ನು ರೂ.5.10 ರಿಂದ 5.30 ಕ್ಕೆ ಉಳಿದ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೂ.5.25 ರಷ್ಟು ಪರಿಷ್ಕೃತ ದರ ನಿಗದಿಪಡಿಸಿದೆ. ಇತರೆ ಬೀದಿ ದೀಪ ಸ್ಥಾವರಗಳಿಗೆ ಅನ್ವಯವಾಗುವ ಪರಿಷ್ಕೃತ ದರ ಪ್ರತಿ ಯೂನಿಟ್‍ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ರೂ. 6.30 ಹಾಗೂ ಉಳಿದ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‍ಗೆ ರೂ.6.25 ಆಗುತ್ತದೆ.

ವಿದ್ಯಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು:
ಎಲ್.ಟಿ.ಪ್ರವರ್ಗದಡಿ ಬರುವ ಖಾಸಗಿ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆಗಳ ವಿದ್ಯುತ್ ದರ ಪ್ರತಿ ಯೂನಿಟ್‍ಗೆ  20 ಪೈಸೆಗಳವರೆಗೆ ಹೆಚ್ಚಿಸಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ , ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಮೊದಲ 200 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪರಿಷ್ಕೃತ ದರ ರೂ.6.95 ನಿಗದಿಯಾಗಿದೆ.

ಇತರೆ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯ ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿನ ಎಲ್‍.ಟಿ.ಪ್ರವರ್ಗಕ್ಕೆ ಮೊದಲ 200 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪರಿಷ್ಕೃತ ದರ ರೂ.6.90 ಹೆಚ್ಚಳವಾಗಿದೆ.

ಹೆಚ್.ಟಿ.ಪ್ರವರ್ಗದಲ್ಲಿ ವಿದ್ಯುತ್ ಪಡೆಯುವ ಬೆಸ್ಕಾಂ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಧರ್ಮಾರ್ಥ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಅನುದಾನಿತ ವಿದ್ಯಾ ಸಂಸ್ಥೆಗಳ ಮೊದಲ 1 ಲಕ್ಷ ಯೂನಿಟ್‍ ವಿದ್ಯುತ್ ಮಾಸಿಕ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್ ಗೆ ರೂ.6.85 ಆಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿನ ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೊದಲ ಒಂದು ಲಕ್ಷ ಯೂನಿಟ್‍ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್‍ಗೆ ರೂ.7.85 ಆಗಲಿದೆ. ಇತರ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿ ಪ್ರದೇಶಗಳಲ್ಲಿ ಮೊದಲ ಒಂದು ಲಕ್ಷ ಯೂನಿಟ್‍ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಯೂನಿಟ್‍ಗೆ ರೂ.7.80  ಹಾಗೂ ಒಂದು ಲಕ್ಷ ಯೂನಿಟ್‍ಗಳ ನಂತರದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.20 ಆಗುತ್ತದೆ.

ಹಸಿರು ದರ:
ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ಮತ್ತು ಉಪಯೋಗವನ್ನು ಉತ್ತೇಜಿಸಲು ಹೆಚ್.ಟಿ.ಕೈಗಾರಿಕೆ ಮತ್ತು ಹೆಚ್.ಟಿ.ವಾಣಿಜ್ಯ ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್‍ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಮುಂದುವರೆಸಿರುವದಾಗಿ ಆಯೋಗ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com