ಮಳೆಗಾಗಿ ದೇವರ ಮೊರೆ ಹೋದ ಸರ್ಕಾರ: ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ ನಡೆಸಲು ಆದೇಶ

ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿರುವ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ , ಹೋಮ, ವಿಶೇಷ ಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವಾಲಯ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.

Published: 31st May 2019 12:00 PM  |   Last Updated: 31st May 2019 07:03 AM   |  A+A-


CM HDkumaraswamy

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

Posted By : ABN ABN
Source : UNI
ಬೆಂಗಳೂರು: ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ  ದೇವರ ಮೊರೆ ಹೋಗಿರುವ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ , ಹೋಮ, ವಿಶೇಷ ಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವಾಲಯ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.

ಉತ್ತಮ ಮಳೆ ,ಬೆಳೆಗಾಗಿ ಹಿಂದಿನಿಂದಲೂ ಪೂಜೆ , ಅಭಿಷೇಕ ,ಜಪ ತಪ, ಪೂಜೆ ಅನುಷ್ಟಾನ ಮಾಡಿಕೊಂಡು ಬಂದಿರುವ ಸಂಪ್ರದಾಯವಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಎದುರಿಸುತ್ತಿರುವ ಬರಗಾಲ ಸಂಕಷ್ಟದಿಂದ ಪಾರಾಗಲು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ವಿಶೇಷ ಪೂಜೆ , ಹೋಮ ನಡೆಸುವುದು ಅವಶ್ಯಕವೆಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ದೇವಾಲಯಗಳಲ್ಲಿ ಪೂಜೆ ನಡೆಸುವಂತೆ ಅದೇಶಿಸಿದೆ.

ದೇವಾಲಯಗಳಲ್ಲಿ ಜೂನ್ 6 ರ ಗುರುವಾರದಂದು ಬ್ರಾಹ್ಮೀ ಮುಹೂರ್ತದಿಂದ ಈ ವಿಶೇಷ ಪೂಜಾ ಅಭಿಯಾನ ಆರಂಭಿಸಿ ನಿರಂತರವಾಗಿ ವಿಶೇಷ ಪೂಜೆ, ಅಭಿಷೇಕ, ಹೋಮ,ಹಾಗೂ ಪರ್ಜನ್ಯ ಜಪಗಳನ್ನು ಅನುಷ್ಟಾನಗೊಳಿಸುವಂತೆ ಸೂಚಿಸಲಾಗಿದೆ.ವಿಶೇಷ ಪೂಜೆ ಗೆ ಗರಿಷ್ಟ 10,001 ರೂ ಖರ್ಚು ಮಾಡಲು ಹಾಗೂ ಆರ್ಥಿಕವಾಗಿ ಶಕ್ತಿಯುಳ್ಳ ದೇವಾಲಯಗಳಲ್ಲಿ ದೇವಸ್ಥಾನದ ನಿಧಿಯಿಂದ ಬಳಸುವಂತೆಯೂ ನಿರ್ದೇಶನ ನೀಡಿದೆ.

ಮುಂಗಾರು ಹಂಗಾಮು ರಾಜ್ಯಕ್ಕೆ ಆಗಮಿಸುವುದು ಇನ್ನಷ್ಟು ವಿಳಂಬವಾಗುವ ಮುನ್ಸೂಚನೆ ಹಿನ್ನಲೆಯಲ್ಲಿ  ಪರ್ಜನ್ಯ ಜಪ, ಹೋಮ ನಡೆಸುವ ಮೂಲಕ ವರ್ಷಸೃಷ್ಟಿ ಆಗುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಒಂದೆಡೆ ಮುಂಗಾರು ಹಂಗಾಮು ರಾಜ್ಯದ ಹಲವೆಡೆ ಆರಂಭವಾಗಿದ್ದು ಉತ್ತಮ ಮಳೆಯಾಗುತ್ತಿದೆ. ಮತ್ತೊಂದೆಡೆ ಮಳೆ ಕೊರತೆ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ಮೋಡ ಬಿತ್ತನೆಗೆ ಸರ್ಕಾರ 90 ಕೋಟಿ ರೂ ಮೊತ್ತದಲ್ಲಿ ಟೆಂಡರ್ ನೀಡಿದೆ.ಇತ್ತ ಮುಂಗಾರು ರಾಜ್ಯಕ್ಕೆ ತಡವಾಗಿ ಆಗಮಿಸುವ ಸಾಧ್ಯತೆ ಇದೆ ಎಂಬ ಗೊಂದಲಕಾರಿ ಮಾಹಿತಿಗಳನ್ನು ರಾ‍ಜ್ಯ ಸರ್ಕಾರವೇ ನೀಡುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಲಹೆಯಂತೆ ಮುಹೂರ್ತ, ಘಳಿಗೆ, ದಿನವನ್ನು ನಿಗದಿ ಮಾಡಿ ಸರ್ಕಾರಿ ಆದೇಶದಲ್ಲಿ ಸೂಚಿಸಿರುವುದು ಆಶ್ಚರ್ಯ ತರಿಸಿದೆ. ಕಳೆದ ವರ್ಷವೂ ಬರ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಪೂಜೆ ಫಲಿಸಲಿಲ್ಲ. ಜೊತೆಗೆ ಮೋಡ ಬಿತ್ತನೆಯನ್ನೂ ನಡೆಸಲಾಗಿತ್ತು.

ಈ ಬಾರಿಯೂ ಪೂಜೆ, ಹವನ ಹೋಮ, ಜಪ ತಪ ಜೊತೆಗೆ ಮೋಡ ಬಿತ್ತನೆಯೂ ನಡೆಸುತ್ತಿರುವುದು ಆಡಳಿತಾರೂಢ ಮೈತ್ರಿ ನಾಯಕರ ಗೊಂದಲಕಾರಿ ಮನಸ್ಥಿತಿಯನ್ನು ಇದು ಪ್ರದರ್ಶಿಸಿದೆ.

ಮತ್ತೊಂದೆಡೆ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಶ್ರೀಗಳು ರಾಜ್ಯದ ಜನರು ತಮ್ಮ ಮನೆಗಳಲ್ಲಿ ಪ್ರತೀ ದಿನ ರಾತ್ರಿ ತುಪ್ಪದ ದೀಪವನ್ನು ದೇವರ ಮುಂದು ಒಂದು ವಾರಗಳ ಕಾಲ ಹೆಚ್ಚುವಂತೆ ಕರೆ ನೀಡಿದ್ದಾರೆ. ಅಲ್ಲದೆ ಉತ್ತಮ ಮಳೆ ಬೆಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸುವಂತೆಯೂ ಅವರು ಸೂಚಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp