ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೈ ಗ್ರೆನೇಡ್‌ ಪತ್ತೆ: ತೀವ್ರ ಕಟ್ಟೆಚ್ಚರ

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಒಂದರಲ್ಲಿ ಕೈ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ...
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಶಂಕಿತ ಗ್ರೆನೇಡ್ ಪತ್ತೆ, ತೀವ್ರ ತಪಾಸಣೆ
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಶಂಕಿತ ಗ್ರೆನೇಡ್ ಪತ್ತೆ, ತೀವ್ರ ತಪಾಸಣೆ

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಒಂದರಲ್ಲಿ ಕೈ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ರೈಲ್ವೆ ನಿಯಂತ್ರಣದ ಕೊಠಡಿಗೆ ಬೆಳಗ್ಗೆ 8.45ಕ್ಕೆ ರೈಲ್ವೆಯಲ್ಲಿ ಬಾಂಬ್ ಇದೆ ಎಂದು ಕರೆಯೊಂದು ಬಂದಿದೆ. ತಕ್ಷಣ ರೈಲ್ವೆ ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅದನ್ನು ವಶಪಡಿಸಿಕೊಂಡು ಆತಂಕ ದೂರ ಮಾಡಿದ್ದಾರೆ.

ಘಟನೆಯ ಹಿನ್ನೆಲೆ; ಬಿಹಾರಕ್ಕೆ ತೆರಳಬೇಕಿದ್ದ ಪ್ಲಾಟ್ ಫಾರ್ಮ್ ನ ಸಂಘಮಿತ್ರಾ ಪಾಟ್ನಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗ್ರೆನೇಡ್ ಬಾಂಬ್ ಇರುವುದಾಗಿ ಬೆಳಗ್ಗೆ 8.45ಕ್ಕೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಶೀಘ್ರವೇ ಹಿರಿಯ ಪೊಲೀಸ್ ಅಧಿಕಾರಿಗಳು, ವಿಭಾಗೀಯ ಆಳಿತಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪ್ರಯಾಣಿಕರನ್ನು ತೆರವುಗೊಳಿಸಿದರು. ಬಳಿಕ ರೈಲು ತಪಾಸಣೆ ಮಾಡಿ 9.55ಕ್ಕೆ ಒಂದನೇ ಪ್ಲಾಟ್ ಫಾರ್ಮ್‌, ಎಸ್ 1 ಬೋಗಿಯಲ್ಲಿ ದೇಶೀಯ ಕೈ ಗ್ರೆನೇಡ್‌ ವಶಪಡಿಸಿಕೊಂಡರು. ಬಳಿಕ ಅದನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

 ಈ ಕುರಿತು ರೈಲ್ವೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸುದ್ದಿಗಾರರಿಗೆ ಈ ಬಗ್ಗೆ ವಿವರ ನೀಡಿ, ಬಿಹಾರಕ್ಕೆ ತೆರಳಬೇಕಿದ್ದ ಸಂಘಮಿತ್ರಾ ಪಾಟ್ನಾ ಎಕ್ಸ್‌ಪ್ರೆಸ್‌ ರೈಲಿನ ಎಸ್‌ 1 ಬೋಗಿಯಲ್ಲಿ ಗ್ರೆನೇಡ್ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಪ್ರಯಾಣಿಕರನ್ನು ಕೆಳಕ್ಕಿಳಿಸಿ ತಪಾಸಣೆ ನಡೆಸಲಾಯಿತು ಎಂದರು.

ಸದ್ಯಕ್ಕೆ ಪತ್ತೆಯಾದ ಬಾಂಬ್ ನಿಂದ ಯಾವುದೇ ಅಪಾಯ ಇಲ್ಲ. ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ರೈಲುಗಳ ತಪಾಸಣೆ ಕೈಗೊಳ್ಳಲಾಗಿದೆ. ಸಿಆರ್‌ಪಿಎಫ್, ಆರ್ ಪಿ ಎಫ್, ರಾಜ್ಯ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿವೆ ಎಂದು ಅವರು ಹೇಳಿದ್ದಾರೆ.
 
ಸದ್ಯ 21 ಅಧಿಕಾರಿಗಳಿಂದ ಸಿಸಿ ಕ್ಯಾಮೆರಾ ತಪಾಸಣೆ ಮಾಡಲಾಗಿದೆ. ದೊರಕಿರುವ ಒಂದು ಬ್ಯಾಗ್ ನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆಸಿದ್ದು, ಬೆಂಗಳೂರು ಪೊಲೀಸರ ತಂಡದಿಂದ ತಪಾಸಣೆ ಕೈಗೊಳ್ಳಲಾಗಿದೆ ಎಂದರು.

ವಿಶೇಷ ತಂಡ ರಚನೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಎಡಿಜಿಪಿ ಅಲೋಕ್ ಮೊಹನ್ ಅವರ ನೇತೃತ್ವದಲ್ಲಿ ರೈಲ್ವೆ ಎಸ್ ಪಿ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಟ್ಟು ನೂರ ಐವತ್ತು ಪೊಲೀಸರ ಹತ್ತು ವಿಶೇಷ ತಂಡ ಹಾಗೂ ರೈಲ್ವೆ ಎಸ್ ಪಿ ಭೀಮಾ ಶಂಕರ್ ಗಳೇದ್ ಅವರ ನೇತೃತ್ವದಲ್ಲಿ ತನಿಖೆಗಾಗಿ ಐದು ರೈಲ್ವೆ ಪೊಲೀಸರ ತಂಡ ಮತ್ತು ಡಿಸಿಪಿ ರವಿ ಡಿ ಚನ್ನಣ್ಣನವರ್ ಮತ್ತು ಎಸಿಪಿ ಮಹಾಂತ್ ರೆಡ್ಡಿ ಅವರ ನೇತೃತ್ವದಲ್ಲಿ ಐದು ತನಿಖಾ ತಂಡಗಳನ್ನು ರಚಿಸಲಾಗಿದೆ.

ಈ ಸಂದರ್ಭದಲ್ಲಿ ರೈಲ್ವೆ ಎಸ್ ಪಿ ಭೀಮಾಶಂಕರ್ ಗಳೇದ್ ಮತ್ತು ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚನ್ನಣ್ಣನವರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
 
ಪಶ್ಚಿಮ ಬಂಗಾಳದಿಂದ ಸ್ಫೋಟಕ ವಸ್ತು ತಂದಿರುವ ಸಾಧ್ಯತೆ ಇದೆ. ಈ ವಸ್ತುಗಳು ನಿರ್ಜೀವ ಅಥವಾ ಕಚ್ಚಾ ಎಂದು ಹೇಳಬಹುದು. ಕೆಲವು ವ್ಯಕ್ತಿಗಳು ಗಣಿಗಾರಿಕೆ ಹಾಗೂ ಕಾಡಿನಲ್ಲಿ ಪ್ರಾಣಿಗಳ ಬೇಟೆಗೆ ಈ ಸ್ಫೋಟಕವನ್ನು ಉಪಯೋಗಿಸುತ್ತಾರೆ. ಪಶ್ಚಿಮ ಬಂಗಾಳ, ಬಾಂಗ್ಲಾ ಗಡಿ ಭಾಗದಲ್ಲಿ ಈ ರೀತಿ ಕಚ್ಚಾ ವಸ್ತುಗಳು ದೊರೆಯುತ್ತಿವೆ. ಮಧ್ಯಮ ಪ್ರಮಾಣದ ಸ್ಫೋಟವನ್ನು ಈ ವಸ್ತುಗಳಿಂದ ಮಾಡಬಹುದು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
 
ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಮತ್ತು ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶವನ್ನು ಪಶ್ಚಿಮ ವಿಭಾಗ ಪೊಲೀಸರು ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com