ಸವದಿ ಕಾಲಿಗೆ ಬಿದ್ದು ಗೋಳು ತೋಡಿಕೊಂಡ ರೈತ, ಪ್ರಚಾರ ಬೇಕೊ, ಪರಿಹಾರ ಬೇಕೊ ಎಂದ ಡಿಸಿಎಂ

ರೈತನೊಬ್ಬ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ, ಕಣ್ಣೀರಿಡುತ್ತಲೇ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾಲಿಗೆ ಬಿದ್ದು ಗೋಳು ತೋಡಿಕೊಂಡ ಘಟನೆ ಶುಕ್ರವಾರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.
ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ

ಕೊಪ್ಪಳ: ರೈತನೊಬ್ಬ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ, ಕಣ್ಣೀರಿಡುತ್ತಲೇ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾಲಿಗೆ ಬಿದ್ದು ಗೋಳು ತೋಡಿಕೊಂಡ ಘಟನೆ ಶುಕ್ರವಾರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.

ರೈತನ ದಿಢೀರ್ ವರ್ತನೆಯಿಂದ ಕಕ್ಕಾಬಿಕ್ಕಿಯಾದ ಲಕ್ಷ್ಮಣ ಸವದಿ, ರೈತನಿಗೆ ಸಮಾಧಾನ ಹೇಳಿ, ನಿನಗೆ ಪ್ರಚಾರ ಬೇಕೊ, ಪರಿಹಾರ ಬೇಕೋ ಎನ್ನುತ್ತಲೇ, ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಕುಷ್ಟಗಿ ತಾಲೂಕಿನ ಮನ್ನಾಪುರ ಗ್ರಾಮದ‌ ರೈತ ಮಂಜುನಾಥ ಪುರದ ಅವರು ಡಿಸಿಎಂ ಕಾಲಿಗೆ ಬಿದ್ದು, 1985ರಲ್ಲೇ  ಹುಲಿಯಾಪುರ ಕೆರೆಗೆ ಜಮೀನು‌ ನೀಡಿದ್ದು, ಕೆರೆಯ ನೀರಿನಿಂದ ಸಾಕಷ್ಟು ಪ್ರಮಾಣದ ಬೆಳೆ ನಷ್ಟವಾಗಿದೆ. 35 ವರ್ಷ ಕಳೆದರೂ ಅದಕ್ಕೆ ಇನ್ನೂ ಪರಿಹಾರ ಬಂದಿಲ್ಲ ಎಂದು ಗೋಳು ತೋಡಿಕೊಂಡರು. ಈ ವೇಳೆ ಪೊಲೀಸರು ಡಿಸಿಎಂ ಕಾಲಿಗೆ ಬಿದ್ದ ರೈತನನ್ನು ದೂರ ತಳ್ಳಲು ಯತ್ನಿಸಿದರು.

ಸಮಾಧಾನಗೊಂಡ ಡಿಸಿಎಂ ರೈತನನ್ನ ಹತ್ತಿರ ಕರೆದು ಅಹವಾಲು ಆಲಿಸಿದರು. ಈ ವೇಳೆ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಿದರೂ ರೈತರಿಗೆ ಹಣ ನೀಡದ ಉಪ ವಿಭಾಗಾಧಿಕಾರಿ, ಸಣ್ಣ ಪುಟ್ಟ ತಾಂತ್ರಿಕ ತೊಂದರೆ ನೆಪ ಹೇಳಿ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಧಾರವಾಡ ಹೈಕೋರ್ಟ್ ಬೆಳೆ ನಷ್ಟ ಪರಿಹಾರ ವಿತರಿಸಲು ಆದೇಶಿಸಿದೆ. ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ವಿತರಿಸುತ್ತಿಲ್ಲ. ಬೆಳೆ ನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು‌ ಮಂಜುನಾಥ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com