ಶತದಿನಗಳ ಆಡಳಿತ ತೃಪ್ತಿ ನೀಡಿದೆ, ಕರ್ನಾಟಕ ಜನತೆ ಸರ್ಕಾರದ ಕೆಲಸದ ಬಗ್ಗೆ ಹೇಳಬೇಕು: ಸಿಎಂ ಯಡಿಯೂರಪ್ಪ 

ಕರ್ನಾಟಕದ ಜನತೆ ನಮ್ಮ ಕೆಲಸಗಳನ್ನು ಅಳೆಯಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದ ಜನತೆ ನಮ್ಮ ಕೆಲಸಗಳನ್ನು ಅಳೆಯಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.


ನವೆಂಬರ್ 2ಕ್ಕೆ ಯಡಿಯೂರಪ್ಪ ಸರ್ಕಾರ ಶತದಿನಗಳನ್ನು ಪೂರೈಸಿದ್ದು, ಈ 100 ದಿನಗಳು ಕಷ್ಟವಾಗಿದ್ದರೂ ಕೂಡ ರಾಜಕೀಯವಾಗಿ ಶಾಂತಿ ಕಂಡುಕೊಂಡಿದ್ದೆ ಎಂದಿದ್ದಾರೆ. ಸರ್ಕಾರ 100 ದಿನ ಪೂರೈಸಿದ ಹಿನ್ನಲೆಯಲ್ಲಿ ಪುಸ್ತಕ ಹೊರತರಲಾಗಿದ್ದು ಅದರಲ್ಲಿ ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಾಡಿರುವ ಕೆಲಸಗಳು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ, ಸಾಲ ಮನ್ನಾ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.


ಮುಂದಿನ 100 ದಿನಗಳಲ್ಲಿ ನಾವು ಮಾಡಬೇಕಾದ ಕೆಲಸಗಳು ಮತ್ತು ಸಾಧನೆಗಳು ಸಾಕಷ್ಟಿವೆ ಎಂದರು. ನಿಮ್ಮ 100 ದಿನಗಳ ಆಡಳಿತಕ್ಕೆ ಎಷ್ಟು ಅಂಕಗಳನ್ನು ಕೊಟ್ಟುಕೊಳ್ಳುತ್ತೀರಿ ಎಂದು ಕೇಳಿದಾಗ ರಾಜ್ಯದ ಜನತೆ ಹೇಳಬೇಕು ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೂನ್ಯ ಅಂಕ ಕೊಟ್ಟಿದ್ದಾರಲ್ಲಾ ಎಂದು ಸುದ್ದಿಗಾರರು ಕೇಳಿದಾಗ ಅವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದರು.


ತಮ್ಮ ಮೊದಲ 100 ದಿನಗಳ ಆಡಳಿತ ಸವಾಲಿನದ್ದಾಗಿತ್ತು ಎಂದ ಯಡಿಯೂರಪ್ಪ, ರಾಜ್ಯದಲ್ಲಿ ಆರಂಭದಲ್ಲಿ ತೀವ್ರ ಬರಗಾಲ ನಂತರ ವ್ಯಾಪಕ ಪ್ರವಾಹ ಕಂಡುಬಂತು. ಸದ್ಯ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಸಮಯವಿದು ಎಂದರು.


ತಮ್ಮ ಸಾಧನೆ, ಕೆಲಸಗಳ ಬಗ್ಗೆ ತೃಪ್ತಿ ಇದೆಯೇ ಎಂದು ಕೇಳಿದ್ದಕ್ಕೆ ಇಲ್ಲ ಎಂದುತ್ತರಿಸಿದರು. ರಾಜ್ಯದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ಮುಖ್ಯಮಂತ್ರಿಯಾಗಿ ಹಲವು ಜಿಲ್ಲೆಗಳ ಜನರು ಪ್ರವಾಹ ಪರಿಸ್ಥಿತಿಯಿಂದ ನಲುಗಿ ಹೋಗಿರುವ ಸಂದರ್ಭದಲ್ಲಿ ಖುಷಿಯಾಗಿರಲು ಹೇಗೆ ಸಾಧ್ಯ? ಕಳೆದ 100 ದಿನಗಳಲ್ಲಿ ನನ್ನ ವೈಯಕ್ತಿಕ ಕೆಲಸಗಳಿಗೆಂದು ನಾನು ಒಂದು ದಿನವೂ ವಿರಾಮ ತೆಗೆದುಕೊಳ್ಳಲಿಲ್ಲ. ನಮ್ಮ ಸರ್ಕಾರದ ಸಾಧನೆ ಬಗ್ಗೆ ನನಗೆ ತೃಪ್ತಿಯಿದೆ ಎಂದರು.


ಉತ್ತಮ ಬೆಂಗಳೂರಿನ ಭರವಸೆ: ಮುಂದಿನ ವಾರ ಬೆಂಗಳೂರು ನಗರ ಪ್ರದಕ್ಷಿಣೆಯನ್ನು ಮತ್ತೆ ಆರಂಭಿಸುತ್ತೇನೆ. ನನ್ನ ಸಹೋದ್ಯೋಗಿಗಳು ಪರಾಮರ್ಶೆ ಸಭೆ ನಡೆಸುತ್ತಿದ್ದಾರೆ. ಇಂದು ತಜ್ಞರ ಸಮಿತಿ ಸಭೆ ನಡೆಯುತ್ತಿದೆ ಅದರ ಬಳಿಕ ಹಣ ಬಿಡುಗಡೆ ಮಾಡಲಾಗುತ್ತದೆ. ಮುಂದಿನ 100 ದಿನಗಳಲ್ಲಿ ಉತ್ತಮ ಬೆಂಗಳೂರು ನೀಡುವುದಾಗಿ ಭರವಸೆ ಕೊಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com