34 ವರ್ಷಗಳ ನಂತರ ಕೆಆರ್ ಎಸ್ ನಲ್ಲಿ ದಾಖಲೆಯ 166.8. ಮಿ.ಮೀ. ಮಳೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.
ಕೃಷ್ಣರಾಜಸಾಗರ
ಕೃಷ್ಣರಾಜಸಾಗರ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.

ಕಳೆದ ನವೆಂಬರ್ 8 ರ ರಾತ್ರಿ 7 ಗಂಟೆಯಿಂದ ಮರುದಿನ ನವೆಂಬರ್ 9 ರ ಬೆಳಗ್ಗೆ 7 ಗಂಟೆಯವರೆಗೆ 12 ಗಂಟೆಗಳ ಅವಧಿಯಲ್ಲಿ 166.8 ಮಿ.ಮೀ. ಮಳೆಯಾಗಿದ್ದು, ಇದು 34 ವರ್ಷಗಳಲ್ಲೇ ಅತಿ ಹೆಚ್ಚು.

12 ಗಂಟೆಗಳಲ್ಲಿ 166.8 ಮಿ.ಮೀ. ಮಳೆಯಾಗಿರುವ ಬಗ್ಗೆ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿಯ ಮಳೆ ಮಾಪಕ ಯಂತ್ರದಲ್ಲಿ ದಾಖಲಾಗಿದೆ. 

1985ರಲ್ಲಿ ಇಲ್ಲಿ ಮಳೆ ಮಾಪಕ ಯಂತ್ರವನ್ನು ಅಳವಡಿಸಲಾಗಿದ್ದು, 2000ರಲ್ಲಿ 140 ಮಿ.ಮೀ., 2012ರಲ್ಲಿ 144 ಮಿ.ಮೀ. ಮಳೆಯಾಗಿತ್ತು ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ರಾಜು ತಿಳಿಸಿದ್ದಾರೆ.

ಈ ಮಧ್ಯೆ, ಕೆಆರ್ ಎಸ್ ಅಣೆಕಟ್ಟೆಯು 84 ದಿನಗಳಿಂದ ಗರಿಷ್ಠ ಮಟ್ಟ 124.80 ಅಡಿ ತಲುಪಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಒಳಹರಿವು ಹೆಚ್ಚಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಅಣೆಕಟ್ಟೆಯಿಂದ ನಾಲೆಗಳು ಮತ್ತು ನದಿ ಪಾತ್ರಕ್ಕೆ 10,555 ಕ್ಯೂಸೆಕ್ ನೀರು ಹರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com