ನ. 18 ರಿಂದ 3 ದಿನ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ: ಡಿಸಿಎಂ ಅಶ್ವತ್ಥ ನಾರಾಯಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಶಯದಂತೆ ನವೀನ ಆವಿಷ್ಕಾರಗಳಿಗೆ ಕರ್ನಾಟಕ ಹೆಚ್ಚಿನ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನವೆಂಬರ್‌ 18 ರಿಂದ 3 ದಿನಗಳ ಕಾಲ...

Published: 12th November 2019 07:29 PM  |   Last Updated: 12th November 2019 07:29 PM   |  A+A-


Ashwath Narayana

ಅಶ್ವತ್ಥ ನಾರಾಯಣ

Posted By : Lingaraj Badiger
Source : UNI

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಶಯದಂತೆ ನವೀನ ಆವಿಷ್ಕಾರಗಳಿಗೆ ಕರ್ನಾಟಕ ಹೆಚ್ಚಿನ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನವೆಂಬರ್‌ 18 ರಿಂದ 3 ದಿನಗಳ ಕಾಲ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. 

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಕರ್ನಾಟಕ ಸರ್ಕಾರದ ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ. ಉದ್ಯಮದ ಹಿರಿಯ ನಾಯಕರನ್ನೊಳಗೊಂಡ ವಿಷನ್ ಗ್ರೂಪ್‌ ನಮ್ಮೊಂದಿಗಿದೆ. ಹಿಂದೆಂದಿಗಿಂತಲೂ ಈ ಶೃಂಗಸಭೆ ವಿಭಿನ್ನ ಹಾಗೂ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಐಟಿ-ಬಿಟಿ ಸೇರಿದಂತೆ ಹೊಸ ಮತ್ತು ನವೀನ ತಂತ್ರಜ್ಞಾನ, ಅನ್ವೇಷಣೆಗಳ ಕುರಿತ ಚರ್ಚೆಗೆ ಸೂಕ್ತ ವೇದಿಕೆಯಾಗಲಿದೆ. ಈ ಬಾರಿ 20 ರಾಷ್ಟ್ರಗಳ ಅತಿ ದೊಡ್ಡ ಅಂತಾರಾಷ್ಟ್ರೀಯ ಸಮೂಹ ಸಭೆಯಲ್ಲಿ ಭಾಗಿಯಾಗಲಿದೆ. ಸಭೆಯಲ್ಲಿ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಡುವ ನಿರೀಕ್ಷೆಯೂ ಇದೆ ಎಂದು ಡಿಸಿಎಂ ತಿಳಿಸಿದರು.

ಆರ್‌ 2-ರೋಬೊಟಿಕ್‌ ಪ್ರೀಮಿಯರ್‌ ಲೀಗ್‌ ಈ ವರ್ಷದ ಹೊಸ ಸೇರ್ಪಡೆ. ದೇಶದ ಅತಿ ದೊಡ್ಡ ರೊಬಾಟಿಕ್ಸ್‌ ಸ್ಫರ್ಧೆಯಲ್ಲಿ ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇತರ ವಿದ್ಯಾರ್ಥಿಗಳ ಜತೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದಲ್ಲದೇ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಉದ್ದಿಮೆಯ ಪರಿಣಿತರಿಂದ ಮಾರ್ಗ ದರ್ಶನ ಪಡೆಯಲು ಸಭೆ ಅಪೂರ್ವ ಅವಕಾಶ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

ಎಸ್‌ಟಿಪಿಐ ಐಟಿ ಎಕ್ಸ್‌ಪೋರ್ಟ್‌ ಅವಾರ್ಡ್‌ ಹಾಗೂ ಸ್ಮಾರ್ಟ್‌ ಬಯೋ ಅವಾರ್ಡ್‌ ಅಲ್ಲದೇ, ಉದ್ದಿಮೆ ಪ್ರಶಸ್ತಿ ವಿಭಾಗಕ್ಕೆ ಈ ಬಾರಿ ಹೊಸದಾಗಿ ಬೆಂಗಳೂರು ಇಂಪ್ಯಾ ಕ್ಟ್‌ ಅವಾರ್ಡ್‌ ಸೇರಲಿದೆ. ಉದ್ಯಮದಲ್ಲಿ ಯಶಸ್ಸು ಕಂಡಿರುವ ಸಾಧಕರು ಜಾಗತಿಕ ನಕ್ಷೆಯಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ತಂದುಕೊಟ್ಟಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಬೆಂಗಳೂರು ಇಂಪ್ಯಾಕ್ಟ್‌ ಅವಾರ್ಡ್‌' ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಹೆಚ್ಚಿಸುವಲ್ಲಿ ಜೈವಿಕ ತಂತ್ರಜ್ಞಾನದ ಪಾತ್ರ ದೊಡ್ಡದು. ಬೆಂಗಳೂರು ಟೆಕ್‌ ಶೃಂಗ ಸಭೆ ಇಂಡಿಯಾ ಬಯೋ-"ಸ್ಮಾರ್ಟ್‌ ಬಯೋ ಪಿಚ್‌ ಟೂನಿಂಗ್ ಸೆಷನ್‌ಗೆ ಸಾಕ್ಷಿ ಆಗಲಿದೆ. ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ಸ್ಟಾರ್ಟ್‌ ಅಪ್‌ಗಳಿಗೆ ಕ್ಷೇತ್ರದ ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಬಯೋ ಸ್ಟಾರ್ಟ್‌ ಅಪ್‌ಗಳಿ ಗಾಗಿ ಆಯೋಜಿಸಿರುವ ಮೊದಲ ಸಭೆ ಇದಾಗಿದ್ದು, 20ಕ್ಕೂ ಹೆಚ್ಚು ಬಯೋಟೆಕ್‌ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿವೆ. ಬಯೋಟೆಕ್‌, ಮೆಡ್‌ಟೆಕ್‌, ಅಗ್ರಿಟೆಕ್‌ ಹಾಗೂ ಡಯಾಗ್ನೆಸ್ಟಿಕ್‌ ವಲಯದ ನವೋದ್ಯಮಗಳಿಗೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಡಿಸಿಎಂ ತಿಳಿಸಿದರು.

ಸ್ಮಾರ್ಟ್‌ ಬಯೋಟೆಕ್ನಾಲಜಿ ಅದರಲ್ಲೂ ವಿಶೇಷವಾಗಿ ಕೈಗೆಟಕುವ ದರದ ಔಷಧ ಅಭಿವೃದ್ಧಿ, ಸಿಂಥಟೆಕ್‌ ಬಯಾಲಿಜಿ, ಬಯೋ ಎಂಜಿನಿಯರಿಂಗ್‌ ಮುಂತಾದ ಉದಯೋನ್ಮುಖ ವಲಯದ ಕುರಿತು ಜೈವಿಕ ತಂತ್ರ ಜ್ಞಾನ ಉದ್ಯಮದ ದಿಗ್ಗಜರು, ಜೈವಿಕ-ತಾಂತ್ರಿಕ ತಜ್ಞರು, ವಿಜ್ಞಾನಿಗಳು ಚರ್ಚಿಸಲು 'ಇಂಡಿಯಾ ಬಯೋ ಉತ್ತಮ ವೇದಿಕೆ ಆಗಲಿದೆ ಎಂದು ಅವರು ವಿವರಿಸಿದರು.

Stay up to date on all the latest ರಾಜ್ಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp