ಟರ್ಫ್'ಕ್ಲಬ್'ನಲ್ಲಿ ಚಳಿಗಾಲದ ಮೊದಲ ರೇಸ್: ಮುಗ್ಗರಿಸಿ ಬಿದ್ದು ಕುದುರೆ ಕಾಲು ಮುರಿತ, ಹಣ ವಾಪಸ್'ಗೆ ಬಾಜಿದಾರರ ಒತ್ತಾಯ

ನಗರದ ಟರ್ಫ್'ಕ್ಲಬ್'ನಲ್ಲಿ ಚಳಿಗಾಲದ ಮೊದಲ ರೇಸ್ ಆರಂಭಗೊಂಡಿದ್ದು, ರೇಸ್ ವೇಳೆ ಆಕಸ್ಮಿಕವಾಗಿ ಕುದುರೆ ಬಿದ್ದ ಪರಿಣಾಮ ಕಾಲು ಮುರಿದು ಬಿದ್ದಿದ್ದು, ಸೋತ ಪರಿಣಾಮ  ರೊಚ್ಚಿಗೆದ್ದ ಬಾಜಿದಾರರು ಹಣ ಮರಳಿಸುವಂತೆ ಒತ್ತಾಯಿಸಿ ದಾಂಧಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಟರ್ಫ್'ಕ್ಲಬ್'ನಲ್ಲಿ ಚಳಿಗಾಲದ ಮೊದಲ ರೇಸ್ ಆರಂಭಗೊಂಡಿದ್ದು, ರೇಸ್ ವೇಳೆ ಆಕಸ್ಮಿಕವಾಗಿ ಕುದುರೆ ಬಿದ್ದ ಪರಿಣಾಮ ಕಾಲು ಮುರಿದು ಬಿದ್ದಿದ್ದು, ಸೋತ ಪರಿಣಾಮ  ರೊಚ್ಚಿಗೆದ್ದ ಬಾಜಿದಾರರು ಹಣ ಮರಳಿಸುವಂತೆ ಒತ್ತಾಯಿಸಿ ದಾಂಧಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
 
ವಿಲ್ ಟು ವಿನ್ ಹೆಸರಿನ ಕುದುರೆ ಕಾಲು ಮುರಿದುಕೊಂಡಿದ್ದು, ಕುದುರೆ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ಮೂವರು ಜಾಕಿಗಳಿಗೂ ಕೂಡ ಗಾಯಗಳಾಗಿವೆ. ಆ ಪೈಕಿ ಶ್ರೀನಿವಾಸ್ ಎಂಬುವವರಿಗೆ ತೀವ್ರವಾಗಿ ಪೆಟ್ಟಾಗಿದೆ ಎಂದು ಟರ್ಫ್ ಕ್ಲಬ್ ಅಧಿಕಾರಿಗಳು ಹೇಳಿದ್ದಾರೆ. 

ತನ್ನ ಪ್ರತಿಸ್ಪರ್ಧಿ ಕುದುರೆಗಳನ್ನು ಹಿಂದಿಕ್ಕಿ ವಿಲ್ ಟು ವಿನ್ ಶರವೇಗದಲ್ಲಿ ಓಡುತ್ತಿದ್ದ ವೇಳೆ ಏಕಾಏಕಿ ಮುಗ್ಗರಿಸಿ ಪಕ್ಕದಲ್ಲಿ ಸಾಗುತ್ತಿದ್ದ ಮತ್ತೊಂದು ಕುದುರೆಗೆ ಡಿಕ್ಕಿ ಹೊಡೆದಿದೆ. ಆಗ ಗಾಬರಿಗೊಳಗಾದ ಆ ಕುದುರೆ ಮತ್ತೊಂದಕ್ಕೆ ಗುದ್ದಿದೆ. ಇದರಿಂದ ಮೂರು ಕುದುರೆಗಳ ಜಾಕಿಗಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ವಿಲ್ ಟು ವಿನ್ ಕುದುರೆಯ ಸಂಪೂರ್ಣ ಮುಂಗಾಲು ಮುರಿದಿದೆ. ರೇಸ್ ನಲ್ಲಿ ನಯಾಬ್ ಹೆಸರಿನ ಕುದರೆ ಗೆಲುವು ಸಾಧಿಸಿದೆ ಎಂದು ಅಧಿಕಾರಿಗಳಉ ತಿಳಿಸಿದ್ದಾರೆ. 

ಇದರಿಂದ ಕೆರಳಿದ ವಿಲ್ ಟು ವಿನ್ ಕುದುರೆಯ ಬಾಜಿದಾರರು, ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಹಣ ಮರಳಿಸಲು ಕ್ಲಬ್ ಸಿಬ್ಬಂದಿ ನಿರಾಕರಿಸಿದ್ದಾರೆ. ಈ ವೇಳೆ ಅಕ್ರೋಶಗೊಂಡಿರುವ ಬಾಜಿದಾರರು, ಕೌಂಟರ್ ನಲ್ಲಿದ್ದ ಮೇಜು-ಕುರ್ಚಿಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ಗಲಾಟೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರತಿಭಟನಾನಿರತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com