ಐದು ವರ್ಷಗಳಿಂದ ನಡೆಯದ ಉತ್ಸವ...! ಈ ಬಾರಿಯೂ ಚಾಲುಕ್ಯ ಉತ್ಸವ ನೆನೆಗುದಿಗೆ ಬೀಳುತ್ತಾ?

ನಾಡಿನ ಐತಿಹಾಸಿಕ ಪ್ರವಾಸಿ ತಾಣಗಳ ಪರಿಚಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಮಹದ್ದೇಶದೊಂದಿಗೆ ಎಂಭತ್ತರ ದಶಕದಲ್ಲಿ ಜನತಾ ಪರಿವಾರದ ಸರ್ಕಾರವಿದ್ದಾಗ ರಾಷ್ಟ್ರೀಯ ಚಾಲುಕ್ಯ ಉತ್ಸವ ಆಚರಣೆ ಆರಂಭಗೊಂಡಿತು.
ಬಾದಾಮಿ
ಬಾದಾಮಿ

ಬಾಗಲಕೋಟೆ: ನಾಡಿನ ಐತಿಹಾಸಿಕ ಪ್ರವಾಸಿ ತಾಣಗಳ ಪರಿಚಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಮಹದ್ದೇಶದೊಂದಿಗೆ ಎಂಬತ್ತರ ದಶಕದಲ್ಲಿ ಜನತಾ ಪರಿವಾರದ ಸರ್ಕಾರವಿದ್ದಾಗ ರಾಷ್ಟ್ರೀಯ ಚಾಲುಕ್ಯ ಉತ್ಸವ ಆಚರಣೆ ಆರಂಭಗೊಂಡಿತು. ಆರಂಭಿಕ ವರ್ಷಗಳಲ್ಲಿ ಉದ್ದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಉತ್ಸವ ಅದ್ಧೂರಿಯಾಗಿ ನಡೆದು ಜನಮನ ಸೆಳೆಯಿತು.

ಚಾಲುಕ್ಯ ಉತ್ಸವ ಮಾದರಿಯಲ್ಲೇ ಹಂಪಿಯಲ್ಲೂ ಹಂಪೆ ಉತ್ಸವ ಆರಂಭಗೊಂಡಿತು. ಬರಬರುತ್ತ ನಾನಾ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವಗಳು ಆರಂಭಗೊಂಡವು. ರಾಷ್ಟ್ರೀಯ ಚಾಲುಕ್ಯ ಉತ್ಸವವೂ ತನ್ನ ರಾಷ್ಟ್ರೀಯ ವೈಭವ ಕಳೆದುಕೊಂಡು ಜಿಲ್ಲಾ ಉತ್ಸವವಾಗಿ ಮಾರ್ಪಟ್ಟಿತು. ಕಳೆದ ಐದು ವರ್ಷಗಳಿಂದ ಬರ ಸೇರಿದಂತೆ ನಾನಾ ನೆಪಗಳ ಹಿನ್ನೆಲೆಯಲ್ಲಿ ಉತ್ಸವವೇ ನಡೆದಿಲ್ಲ. ಎಂಥಹ ನೆಪದಲ್ಲೂ ಹಂಪೆ ಉತ್ಸವ ಮಾತ್ರ ಪ್ರತಿವರ್ಷ  ಅದ್ಧೂರಿಯಿಂದ ನಡೆಯುತ್ತಲೇ ಇದೆ. 

ಏತನ್ಮಧ್ಯೆ ರಾಜ್ಯ ಪ್ರವಾಸೋದ್ಯಮ ಸಚಿವರು ಹಂಪಿ ಉತ್ಸವ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುವ ಕುರಿತು ಚಿಂತನೆ ಆರಂಭಿಸಿದ್ದಾರೆ. ಚಾಲುಕ್ಯ ಉತ್ಸವದ ಬಗ್ಗೆ ಅನಾದರ ಮುಂದುವರಿದಿದೆ. ಕಳೆದ ಐದು ವರ್ಷಗಳಿಂದ ಬರದ ನೆಪದಲ್ಲಿ ರದ್ದಾದ ಚಾಲುಕ್ಯ ಉತ್ಸವ ಈ ಬಾರಿಯೂ ಜಿಲ್ಲೆಯಲ್ಲಿ ಉಂಟಾದ ನೆರೆಯ ನೆಪದಲ್ಲಿ ರದ್ದಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಹಂಪಿ ಉತ್ಸವವನ್ನು ಮಾತ್ರ ಯಾವುದೇ ನೆಪಗಳನ್ನು ಮುಂದೆ ಮಾಡಿದ ಉದಾಹರಣೆಗಳಿಲ್ಲ. ಆದರೆ ರಾಷ್ಟ್ರೀಯ ಉತ್ಸವವಾಗಿ ಆರಂಭಗೊಂಡಿರುವ ಚಾಲುಕ್ಯ ಉತ್ಸವಕ್ಕೆ ಮಾತ್ರ ಏಕೆ ನೆಪಗಳನ್ನು ಮುಂದು ಮಾಡಲಾಗುತ್ತಿದೆ ಎನ್ನುವುದು ಮಾತ್ರ ಇಂದಿಗೂ ಯಕ್ಷ ಪ್ರಶ್ನೆಯಾಗಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷö್ಯ ಭಾವ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಜನಪ್ರತಿನಿಧಿಗಳ ಉದಾಸೀನತೆಯಿಂದಾಗಿ ರಾಷ್ಟ್ರೀಯ ಚಾಲುಕ್ಯ ಉತ್ಸವಕ್ಕೆ ಕೆಲ ವರ್ಷ ನೆಪಕ್ಕೆ ಎನ್ನುವಂತೆ ನಡೆಯಿತು. ಕಳೆದ ಐದು ವರ್ಷಗಳಿಂದ ಉತ್ಸವ ಆಚರಣೆಗೆ ಮಂಕು ಬಡಿದಿದೆ. ಉತ್ಸವ ಆಚರಣೆಯ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ. ಪರಿಣಾಮವಾಗಿ ಎಂಭತ್ತರ ದಶಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಇಲ್ಲಿನ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಪ್ರವಾಸಿ ತಾಣಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ಐತಿಹಾಸಿ ಸ್ಮಾರಕಗಳು, ಕಲೆ ಮತ್ತು ವಾಸ್ತುಶಿಲ್ಪ ಅಮೋಘವಾಗಿದೆ. ಇಲ್ಲಿ ಸಂಶೋಧನೆ ನಡೆಸಿದಷ್ಟು ಹೊಸ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ. ಸ್ಮಾರಕಗಳ ಅಧ್ಯಯನ, ಸಂಶೋಧನೆ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಎಂಥಹ ಸಂಕಷ್ಟ ಸನ್ನಿವೇಶ ಎದುರಾದರೂ ಸರ್ಕಾರ ಉತ್ಸವವನ್ನು ಆಚರಿಸಬೇಕು. ಆ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ.

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ಕೊಡುವ ಮೂಲಕ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಿದೆ. ಹಾಗಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಕುರಿತ ಚಿಂತನೆ ಜತೆಗೆ ಕಳೆಗುಂದಿರುವ ಚಾಲುಕ್ಯ ಉತ್ಸವಕ್ಕೆ ಮತ್ತೆ ರಾಷ್ಟ್ರೀಯ ಉತ್ಸವದ ಮೆರಗನ್ನು ತರುವ ಕೆಲಸ ಮಾಡಬೇಕಿದೆ. 

ಸರ್ಕಾರದಲ್ಲಿ ಜಿಲ್ಲೆಯವರೆ ಆಗಿರುವ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಜತೆಗೆ ಪ್ರತಿಪಕ್ಷ ನಾಯಕ ಹುದ್ದೆಗಳಲ್ಲೂ ಜಿಲ್ಲೆಯವರೇ ಆಗಿರುವ ಬಾದಾಮಿ ಶಾಸಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್ಸಾರ್ ಪಾಟೀಲ ಒತ್ತಡ ತಂದು ಚಾಲುಕ್ಯ ಉತ್ಸವ ಆಚರಣೆ ನಿಟ್ಟಿನಲ್ಲಿ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಬೇಕಿದೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸರ್ಕಾರ ಚಾಲುಕ್ಯ ಉತ್ಸವಕ್ಕೆ ಗತವೈಭವದ ಮೆರಗನ್ನು ತಂದು ಕೊಡಬೇಕಿದೆ.

ವರದಿ: ವಿಠ್ಠಲ ಆರ್.ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com