ವೈದ್ಯರಿಲ್ಲದೆ ಗರ್ಭಿಣಿಯರ ಸಾವು: ಸರ್ಕಾರಕ್ಕೆ ಹೈ ತರಾಟೆ

ರಾಜ್ಯದ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರು ಸಾವನ್ನಪ್ಪಿದರೆ ಅವರ ಕುಟುಂಬಗಳಿಗೆ ಸರ್ಕಾರವೇ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಈ ಕುರಿತು ನ.26ರಂದು ಆದೇಶ ಹೊರಡಿಸುವುದಾಗಿ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರು ಸಾವನ್ನಪ್ಪಿದರೆ ಅವರ ಕುಟುಂಬಗಳಿಗೆ ಸರ್ಕಾರವೇ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಈ ಕುರಿತು ನ.26ರಂದು ಆದೇಶ ಹೊರಡಿಸುವುದಾಗಿ ತಿಳಿಸಿದೆ. 

ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಗರ್ಭಿಣಿಯರು, ಬಾಣಂತಿಯರ ಸಾವು ಹೆಚ್ಚಳ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿನ್ನೆ ನ್ಯಾಯಾಲಯ ವಿಚಾರಣೆ ನಡೆಸಿತು. 

ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ಅರ್ಜಿ ವಿಚಾರಣೆಗೆ ಬಂದಿತ್ತು.
  
ವಿಚಾರಣೆ ವೇಳೆ ರಾಜ್ಯದ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ತಜ್ಞರು, ಮಕ್ಕಳ ವೈದ್ಯರು ಸೇರಿದಂತೆ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬಿಬಂದಿಯ ಕೊರತೆಯಿದೆ. ಆ ಹುದ್ದೆಗಳನ್ನು ಸರ್ಕಾರ ಸಮರ್ಕವಾಗಿ ಭರ್ತಿ ಮಾಡುತ್ತಿಲ್ಲ. ಯಾವಾಗ ಆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂಬ ಬಗ್ಗೆ ಅರ್ಜಿ ಸಂಬಂಧ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಸರ್ಕಾರ ವಿವರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಸರ್ಕಾರಿ ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯರಿಲ್ಲದೆ ಗರ್ಭಿಣಿಯರು ಸಾವನ್ನಪ್ಪಿದರೆ ಅವರ ಕುಟುಂಬದವರು ಪರಿಹಾರ ಕೇಳುವುದರಲ್ಲಿ ತಪ್ಪೇನಿಲ್ಲ. ಖಾಲಿಯಿರುವ ಹುದ್ದೆಗಳನ್ನುೋ ಭರ್ತಿ ಮಾಡದ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಕೇಳುವುದು ಸರಿಯಾಗಿದೆ. ಈಗಾಗಲೇ ಗರ್ಭಿಣಿಯರು ಮೃತಪಟ್ಟಿರುವ 49 ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ನ್ಯಾಯಪೀಠ, ಈ ಸಂಬಂಧ ಮುಂದಿನ ಮಂಗಳವಾರ ಆದೇಶ ಹೊರಡಿಸುವುದಾಗಿ ಹೇಳಿ ವಿಚಾರಣೆಯನ್ನು ನ.26ಕ್ಕೆ ಮುಂದೂಡಿತು. 
                 
ಅಲ್ಲದೆ, ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರ ಹಾಗೂ ನರ್ಸ್ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ನ್ಯಾಯಪೀಠ ಮೌಖಿಕವಾಗಿ ನಿರ್ದೇಶನ ನೀಡಿತು. ವಿಚಾರಣೆ ವೇಳೆ ಸರ್ಕಾರಿ ವಕೀಲರು ಉತ್ತರಿಸಿ, ಖಾಲಿಯಿರುವ ವೈದ್ಯರ ಹಾಗೂ ಸ್ಟಾಫ್ ನರ್ಸ್ ಗಳ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ತಜ್ಞ ವೈದ್ಯರ ನೇಮಕಾತಿಗೆ ಕರಡು ನಿಯಮಗಳನ್ನು ರೂಪಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸನ್ನದ್ಧವಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೇರೆ ರಾಜ್ಯಗಳ ಹೋಲಿಕೆ ಮಾಡಿದರೆ ಗರ್ಭಿಣಿಯರು, ಬಾಣಂತಿಯರ ಸಾವು, ತಾಯಿ-ಶಿಶು ಮರಣ ಪ್ರಮಾಣ ಕರ್ನಾಟಕದಲ್ಲಿಯೇ ಕಡಿಮೆಯಿದೆ ಎಂದು ವಿವರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com