ಕೋಡಿ ಒಡೆದ ಹುಳಿಮಾವು ಕೆರೆ: ಬಿಬಿಎಂಪಿಯಿಂದ ತೀವ್ರ ಕಾರ್ಯಾಚರಣೆ  

ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿ ಸುಮಾರು 800 ಮನೆಗಳು ಮತ್ತು ಅಪಾರ್ಟ್ ಮೆಂಟ್ ಗಳು ಜಲಾವೃತವಾಗಿವೆ.
ಕೆರೆ ಕಟ್ಟೆ ಒಡೆದು ಜಲಾವೃತವಾಗಿರುವುದು
ಕೆರೆ ಕಟ್ಟೆ ಒಡೆದು ಜಲಾವೃತವಾಗಿರುವುದು

ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿ ಸುಮಾರು 800 ಮನೆಗಳು ಮತ್ತು ಅಪಾರ್ಟ್ ಮೆಂಟ್ ಗಳು ಜಲಾವೃತವಾಗಿವೆ.


ಬಿಬಿಎಂಪಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಗಳ ನೆರವಿನಿಂದ ರಾತ್ರಿ 8 ಗಂಟೆ ಹೊತ್ತಿಗೆ ತುಂಬಿ ಹೋಗಿದ್ದ ನೀರಿನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ) ಆಯುಕ್ತ ಎಚ್. ಅನಿಲ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಆರ್.ಆರ್.ಲೇಔಟ್, ಕೃಷ್ಣ ಲೇಔಟ್, ಅವನಿ ಶೃಂಗೇರಿ ಬಡಾವಣೆ, ರಾಯಲ್ ರೆಸಿಡೆನ್ಸಿ ಮುಂತಾದ ಪ್ರದೇಶದಲ್ಲಿ ಸುಮಾರು 2-4 ಅಡಿ ವರೆಗೂ ನೀರು ಹರಿದು ಎಲ್ಲಾ ಮನೆಗಳು ಜಲಾವೃತವಾಗಿ ಮನೆ ಬಳಕೆಯ ಎಲ್ಲಾ ವಸ್ತುಗಳು ಹಾಳಾಗಿವೆ. ಸುಮಾರು 800 ಮನೆಗಳು ನೀರಿನಲ್ಲಿ ಮುಳುಗಿರುವ ಅಂದಾಜಿಸಲಾಗಿದೆ. ವಾಹನ ಸೇರಿದಂತೆ ಇತರ ವಸ್ತುಗಳ ಹಾನಿಯ ಕುರಿತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಕಂದಾಯ ವಿಭಾಗದ ಅಧಿಕಾರಿಗಳೂ ಮಹಜರ್ ನಡೆಸಿ ವರದಿ ನೀಡಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.


ಹುಳಿಮಾವು ಕೆರೆಯ ಕೋಡಿ ಒಡೆದು ಹೋಗಿದ್ದರಿಂದ ಅಪಾಯದಲ್ಲಿ ಸಿಲುಕಿದ್ದ 193 ಮಂದಿಯನ್ನು ರಕ್ಷಣೆ ಮಾಡಲಾಯಿತು. 130 ಮಂದಿಯನ್ನು ಹಗ್ಗದ ಸಹಾಯದಿಂದ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಯಿತು, 63 ಮಂದಿಯನ್ನು ದೋಣಿಯಲ್ಲಿ ಸ್ಥಳಾಂತರಿಸಲಾಯಿತು. ಇವರಲ್ಲಿ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು, ಶಿಶುಗಳು ಸೇರಿದ್ದಾರೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಕ್ಷಣಾ ಇಲಾಖೆ ಸಿಬ್ಬಂದಿ, ಸಿಆರ್ ಪಿಎಫ್, ಕೆಎಸ್ಆರ್ ಪಿ, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಗಳು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಗಳನ್ನು ಬಿಟಿಎಂ ಲೇ ಔಟ್, ಆರ್ ಆರ್ ಲೇ ಔಟ್, ಬಿಳೆಕಹಳ್ಳಿ, ಕೃಷ್ಣಾ ಲೇ ಔಟ್, ರಾಯಲ್ ರೆಸಿಡೆನ್ಸಿ ಮತ್ತು ಅವನಿ ಶೃಂಗೇರಿ ನಗರಗಳಿಗೆ ಕಳುಹಿಸಲಾಗಿತ್ತು.


ನಾಗರಿಕರ ರಕ್ಷಣೆಗೆ ಫ್ಲೋಟಿಂಗ್ ಪಂಪ್ ಗಳು, ಜೀವರಕ್ಷಕ ಜಾಕೆಟ್ ಗಳು, ಫ್ಲೋಟಿಂಗ್ ಸ್ಟ್ರೆಚರ್ಸ್, ಹಗ್ಗಗಳು, ಶೊವೆಲ್ಸ್, ಪ್ರಮಥ ಚಿಕಿತ್ಸಾ ಕಿಟ್ ಗಳು ಮತ್ತು ಸರ್ಚ್ ಲೈಟ್ ಗಳನ್ನು ಬಳಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com