ದಲ್ಲಾಳಿಗಳ ಜೇಬಿಗೆ ಈರುಳ್ಳಿ ಲಾಭ

ರೈತರು ಕಷ್ಟ ಪಟ್ಟು ಬೆಳೆದ ಈರುಳ್ಳಿ ಬೆಲೆಯ ಲಾಭ ಅನಾಯಾಸಲಾಗಿ ದಲ್ಲಾಳಿಗಳ ಜೇಬು ಸೇರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ರೈತರು ಕಷ್ಟ ಪಟ್ಟು ಬೆಳೆದ ಈರುಳ್ಳಿ ಬೆಲೆಯ ಲಾಭ ಅನಾಯಾಸಲಾಗಿ ದಲ್ಲಾಳಿಗಳ ಜೇಬು ಸೇರುತ್ತಿದೆ.

ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿರಲಿಲ್ಲ ಎನ್ನುವಂತೆ ಈರುಳ್ಳಿ ಇದ್ದಾಗ ಬೆಲೆ ಇರೊಲ್ಲ, ಬೆಲೆ ಇದ್ದಾಗ ಈರುಳ್ಳಿ ಬೆಳೆಯಿಲ್ಲ ಎನ್ನುವ ಸ್ಥಿತಿಯುಂಟಾಗಿ ಜಿಲ್ಲೆಯ ನದಿ ತೀರದ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕಳೆದ ಆಗಸ್ಟ್ ನಿಂದ ಅಕ್ಟೋಬರ್‌ವರೆಗೆ ಸುರಿದ ಸತತ ಮಳೆ ಮತ್ತು ಪ್ರವಾಹ ಸ್ಥಿತಿಯಿಂದಾಗಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿನ ಮಲಪ್ರಭ, ಘಟಪ್ರಭ ಮತ್ತು ಕೃಷ್ಣ ನದಿಯಲ್ಲಿ ಮೂರು ಬಾರಿ ಉಂಟಾದ ನೆರೆ ಮತ್ತು ಸತತ ಮಳೆಯಿಂದ ಲಕ್ಷಾಂತರ ಎಕರೆ ಈರುಳ್ಳಿ ಬೆಳೆ ನೀರು ಪಾಲಾಗಿ ಹೋಗಿದೆ. 

ರೈತರು ಇಡೀ ಬದುಕನ್ನೇ ಕಳೆದುಕೊಂಡಿದ್ದರೂ ಕೆಲವರ  ಪಾಲಿಗೆ ಸಿಕ್ಕ ಪರಿಹಾರ ಕೇವಲ ೧೦ ಸಾವಿರ ಪರಿಹಾರ ಮಾತ್ರ, ಮಳೆ ಮತ್ತು ನೆರೆಯಲ್ಲಿ ಈರಳ್ಳಿ ಬೆಳೆ ಕೊಚ್ಚಿಕೊಂಡು ಹೋಗಿದ್ದರ ಮಧ್ಯೆ ಬೆಳೆದ ಅಷ್ಟಿಷ್ಟು ಬೆಳೆಗೆ ಮಾರುಕಟ್ಟೆಯಲ್ಲಿಂದು ಭಾರಿ ಬೇಡಿಕೆ ಉಂಟಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ೧೦೦ ರಿಂದ ೧೩೦ ರೂ.ಗೆ ಕೆಜಿ ಆಗಿದೆ. ಬೆಂಗಳೂರಿಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ಪೂರೈಕೆ ಆಗುವುದೇ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಂದ ಎನ್ನುವುದು ವಿಶೇಷ. ಆದರೆ ಪ್ರಸಕ್ತ ವರ್ಷ ನೆರೆ,ಮಳೆಯಿಂದ ಬೆಳೆದ ಬೆಳೆ ಕೈಗೆ ಸಿಗದ ಪರಿಣಾಮ ರೈತರು ಈರುಳ್ಳಿಗೆ ಬೆಲೆ ಇದ್ದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ.

ಇರುವ ಅಲ್ಪಸ್ವಲ್ಪ ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಈಗಾಗಲೇ ಕಳುಹಿಸಿಬಿಟ್ಟಿದ್ದಾರೆ. ಆಗ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಇದ್ದದ್ದು ೩ ಸಾವಿರದಿಂದ ೪ ಸಾವಿರ ರೂ. ಸ್ವಲ್ಪ ಮಟ್ಟಿಗೆ ಲಾಭ ಎನ್ನಿಸಿದರು. ಸದ್ಯದ ಮಾರುಕಟ್ಟೆ ದರ ಗಮನಿಸಿದಾಗ ಇನ್ನಷ್ಟು ದಿನ ಬಿಟ್ಟು ಮಾರಾಟ ಮಾಡಬೇಕಿತ್ತು. ಹೆಚ್ಚಿನ ಲಾಭ ಸಿಗುತ್ತಿತ್ತು. ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ನೂರರ ಗಡಿ ದಾಟಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ೫೦ ರಿಂದ ೮೦ ರೂ.ವರೆಗೆ ಇದೆ. ಆದರೆ ಮಧ್ಯವರ್ತಿಗಳ ಹಾವಳಿ ಪರಿಣಾಮ ರೈತರ ಕೈಗೆ ಇಷ್ಟೊಂದು ಬೆಲೆ ಸಿಕ್ಕುತ್ತಿಲ್ಲ. ಸಾಧಾರಣ ಗುಣಮಟ್ಟದ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದು ೪೦ ರಿಂದ ೫೦ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಗುಣಮಟ್ಟದ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ಸಿಕ್ಕುತ್ತಿರುವುದು  ೫ ರಿಂದ ೭ ಸಾವಿರ ರೂ. ಕಳೆದ ಎರಡು ಮೂರು ವರ್ಷಗಳಲ್ಲಿ ಈರುಳ್ಳಿಗೆ ಅಷ್ಟೊಂದು ಬೆಲೆ ಇರಲಿಲ್ಲ. 

ಈ ಬಾರಿ ಉತ್ತಮ ಬೆಲೆ ಬಂದಿದೆ ಆದರೆ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ರೈತರು ಬೆಲೆ ಎಷ್ಟಾದರೇನು ? ನಾವು ಬೆಳೆದ ಬೆಳೆ ಕೈಗೆಟುಕಲಿಲ್ಲವಲ್ಲ ಎಂದು ನದಿ ತೀರದ ರೈತರು ಹಳಹಳಿಸುತ್ತಿದ್ದರೆ, ಅನೇಕ ರೈತರು ಮೊದಲೇ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಬಾರದಿತ್ತು. ಸಂಗ್ರಹಿಸಿಟ್ಟಿದ್ದರೆ ಒಳ್ಳೆ ಬೆಲೆ ಕೈಗೆಟಕುತ್ತಿತ್ತು ಎನ್ನುತ್ತಿದ್ದಾರೆ. ಒಟ್ಟಾರೆ ರೈತ ಬಹುತೇಕ ಸಮೂಹಕ್ಕೆ ಈರುಳ್ಳಿ ಬೆಳೆದರೂ ನಿರೀಕ್ಷಿತ ಲಾಭ ಕೈ ಸೇರಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯ ಲಾಭ ದಲ್ಲಾಳಿ(ಮಧ್ಯವರ್ತಿಗಳು)ಗಳ ಕಿಸೆ ಸೇರತ್ತಿದೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com