ಕ್ರಿಕೆಟ್ ಬ್ಯಾಟ್ ಕೇಳಿದ್ದ ಗ್ರಾಹಕರಿಗೆ ಕಪ್ಪು ಕೋಟ್ ನೀಡಿದ ಫ್ಲಿಪ್‌ಕಾರ್ಟ್- ಗ್ರಾಹಕ ವೇದಿಕೆಯಿಂದ  1 ಲಕ್ಷ ರೂ ದಂಡ

ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ್ನ ಗ್ರಾಹಕರಿಗೆ ಸರಿಯಾದ ಉತ್ಪನ್ನವನ್ನು ತಲುಪಿಸುವಲ್ಲಿ ವಿಫಲವಾದ ಕಾರಣ ಮತ್ತು ಗ್ರಾಹಕರಿಗೆ ತಪ್ಪಾದ ಉತ್ಪನ್ನವನ್ನು ಬದಲಿಸಿ ಕೊಟ್ಟದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ್ನ ಗ್ರಾಹಕರಿಗೆ ಸರಿಯಾದ ಉತ್ಪನ್ನವನ್ನು ತಲುಪಿಸುವಲ್ಲಿ ವಿಫಲವಾದ ಕಾರಣ ಮತ್ತು ಗ್ರಾಹಕರಿಗೆ ತಪ್ಪಾದ ಉತ್ಪನ್ನವನ್ನು ಬದಲಿಸಿ ಕೊಟ್ಟದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಹಕ ವಿವಾದಗಳ ಪರಿಹಾರ ವೇದಿಕೆ ಫ್ಲಿಪ್ ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸಚಿನ್ ಬನ್ಸಾಲ್  ಅವರನ್ನುದ್ದೇಶಿಸಿ ಈ ಆದೇಶ ನೀಡಿದೆ.ಸೇವೆಯ ಕೊರತೆ ಮತ್ತು ಗ್ರಾಹಕರನ್ನು ಮೋಸಗೊಳಿಸಿದ ಆರೋಪವನ್ನು ಸಂಸ್ಥೆ ಎದುರಿಸುತ್ತಿದೆ.

ವಾದಿರಾಜ ರಾವ್ ಎಂಬ ಗ್ರಾಹಕರು 2017 ರಲ್ಲಿ ತಮ್ಮ ಮೊಬೈಲ್ ಫೋನ್‌ನಿಂದ ಎಸ್‌ಜಿ ಪ್ಲೇಯರ್ ಎಡಿಷನ್ ಇಂಗ್ಲಿಷ್ ವಿಲೋ ಕ್ರಿಕೆಟ್ ಬ್ಯಾಟ್‌ ಗಾಗಿ ಫ್ಲಿಪ್ ಕಾರ್ಟ್ ನಲ್ಲಿ ಬುಕ್ ಮಾಡಿದ್ದರು. ಆದರೆ ಸಂಸ್ಥೆಯ ಡೆಲಿವರಿ ಬಾಯ್  ಏಪ್ರಿಲ್ 10, 2017 ರಂದು 6,074 ರು. ಪಡೆದು ಪಾರ್ಸೆಲ್ ವಿತರಿಸಿದ್ದಾನೆ. ಆದರೆ ಪಾರ್ಸಲ್ ತೆರೆದು ನೋಡಲಾಗಿ  ಅದರಲ್ಲಿ ಕ್ರಿಕೆಟ್ ಬ್ಯಾಟ್‌ನ ಬದಲು ಕಪ್ಪು ಕೋಟ್ ಇತ್ತು. ಇದಕ್ಕಾಗಿ ವಾದಿರಾಜ ರಾವ್ ತಾವು ಉತ್ಪನ್ನವನ್ನು ಬದಲಿಸಿಕೊಡಬೇಕೆಂದು ಫ್ಲಿಪ್ ಕಾರ್ಟ್ ಗೆ ಕೇಳಿದ್ದಾರೆ. ಆದರೆ ಹಲವಾರು ಬಾರಿ ವಿನಂತಿಸಿದ  ನಂತರವೂ ಸಂಸ್ಥೆ ಉತ್ಪನ್ನವನ್ನು ಬದಲಿಸಿಕೊಡುವುದಕ್ಕೆ ವಿಫಲವಾಗಿದೆ.ರಾವ್ ಈ ವರ್ಷ ಮೇ 13 ರಂದು ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿ ಫ್ಲಿಪ್‌ಕಾರ್ಟ್‌ನಿಂದ ಪರಿಹಾರ ಕೋರಿ ಪ್ರಕರಣ ದಾಖಲಿಸಿದರು.

ಸಿ ಎಂ ಚಂಚಲಾ ಮತ್ತು ಮಂಜುಳಾ ಹೆಚ್ ಅವರನ್ನೊಳಗೊಂಡ ಪೀಠ ವಾದಗಳನ್ನು ಆಲಿಸಿ ಫ್ಲಿಪ್‌ಕಾರ್ಟ್‌ , ಅದರ ಸಹ-ಸಂಸ್ಥಾಪಕ ಮತ್ತು ಕೊರಿಯರ್ ಸೇವಾಕರ್ತರನ್ನು ತಪ್ಪಿತಸ್ಥ ಎಂದು ದಾಖಲಿಸಿದೆ.ಬುಧವಾರ ವೇದಿಕೆ ಈ ಸಂಬಂಧ ತೀರ್ಪು ನೀಡಿದೆ. ಆರು ವಾರಗಳಲ್ಲಿ ಅರ್ಜಿದಾರರಿಗೆ ಸರಿಯಾದ ಉತ್ಪನ್ನವನ್ನು ತಲುಪಿಸಲು ವೇದಿಕೆ ಫ್ಲಿಪ್‌ಕಾರ್ಟ್ ಅವರನ್ನು ಕೇಳಿದೆ.ಸೇವೆಯ ಕೊರತೆ, ಗ್ರಾಹಕರು ಅನುಭವಿಸಿದ ಮಾನಸಿಕ ಸಂಕಟ ಮತ್ತು ಗ್ರಾಹಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಾಡಿದ ಹಣದ ವೆಚ್ಚ  ಈ ಎಲ್ಲಕ್ಕಾಗಿ ಗ್ರಾಹಕರಿಗೆ 50,000 ರೂ.ಗಳ ಪರಿಹಾರವನ್ನು ಪಾವತಿಸುವಂತೆ ನಿರ್ದೇಶನ ನೀಡಿತು.ಫ್ಲಿಪ್‌ಕಾರ್ಟ್ ಈ ಪರಿಹಾರವನ್ನು ಪಾವತಿಸಲು ವಿಫಲವಾದರೆ, ಅವರು ಅದನ್ನು ಶೇಕಡಾ 10 ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.ಫ್ಲಿಪ್‌ಕಾರ್ಟ್ ಅನೇಕ ಬಾರಿ ಇಂತಹಾ ತಪ್ಪುಗಳನ್ನು ಎಸಗಿದೆ.ಮತ್ತು ಗ್ರಾಹಕರನ್ನು ಮೋಸ ಮಾಡಿದ್ದಾರೆ ಎಂದು ವೇದಿಕೆ ಆರೋಪಿಸಿದೆ. ಅದಕ್ಕಾಗಿ ಸಂಸ್ಥೆಯು ಇನ್ನೊಂದು ವಾರದ ಒಳಗೆ ಗ್ರಾಹಕ ವೇದಿಕೆ ಕಲ್ಯಾಣ ನಿಧಿಗೆ 50,000 ರೂ ನೀಡಬೇಕೆಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com