ತಿಂಗಳೊಳಗೆ ಮರಗಳ ಗಣತಿ ಕಾರ್ಯ ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ!

ಇನ್ನೂ 30 ದಿನಗಳೊಳಗೆ ರಾಜಧಾನಿ ಬೆಂಗಳೂರಿನಲ್ಲಿರುವ ಮರಗಳ ಗಣತಿ ಕಾರ್ಯ ಆರಂಭಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ. 
ಮರಗಳ ಗಣತಿ
ಮರಗಳ ಗಣತಿ

ಬೆಂಗಳೂರು: ಇನ್ನೂ 30 ದಿನಗಳೊಳಗೆ ರಾಜಧಾನಿ ಬೆಂಗಳೂರಿನಲ್ಲಿರುವ ಮರಗಳ ಗಣತಿ ಕಾರ್ಯ ಆರಂಭಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ. 

ಮರಗಳ ರಕ್ಷಣೆ ಸಂಬಂಧ ಬೆಂಗಳೂರು ಪರಿಸರ ಟ್ರಸ್ಟ್ ಹಾಗೂ ದತ್ತಾತ್ತ್ರೇಯ ಟಿ ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹಾಗೂ ನ್ಯಾಯಾಧೀಶರಾದ ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಪ್ರಕಟಿಸಿದೆ. 

ಇದಕ್ಕೂ ಮುನ್ನ ಮರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ತಿಂಗಳೊಳಗೆ ಮರಗಳ ಗಣತಿ ಕಾರ್ಯ ಆರಂಭಿಸುವುದಾಗಿ  ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೀಡಿರುವ ಕಾರ್ಯ ಆದೇಶವನ್ನು ಹಾಜರುಪಡಿಸುವಂತೆ ಮರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ ಹೈಕೋರ್ಟ್ ಸೂಚಿಸಿತು.

 ಮರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಗಣತಿ ಕಾರ್ಯ ಆರಂಭಿಸಲು ರಾಜ್ಯಸರ್ಕಾರದಿಂದ ವಿನಾಯಿತಿಯ ಅಗತ್ಯವಿದೆ ಎಂದು ಬಿಬಿಎಂಪಿ ವಕೀಲರು ತಿಳಿಸಿದರು. 

ಮರಗಳ ಗಣತಿ ಕಾರ್ಯ ಆರಂಭಿಸುವಂತೆ ಆಗಸ್ಟ್ 20 ರಂದೇ ಆದೇಶ ನೀಡಿದ್ದರೂ, ಇನ್ನೂ ಕಾರ್ಯ ಆರಂಭಿಸದ ಬಿಬಿಎಂಪಿಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು .

ಮರಗಳ ಹನನ ನಿಂತಿಲ್ಲ. ಈ ಸಂಬಂಧ ಆದೇಶ ನೀಡಿದ್ದರೂ ಏಕೆ ನಿರ್ಲಕ್ಷ್ಯ ತಾಳಿದ್ದೀರಿ? ಇದು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸೂಕ್ತವಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com