ಅಕ್ರಮ ಕಟ್ಟಡ ನಿರ್ಮಾಣ: ಅಧಿಕಾರಿಗಳನ್ನು ಶಿಕ್ಷಿಸಲು ಹೊಸ ನಿಯಮ ಜಾರಿ

ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಪೌರ ನಿಯಮ ಕಾಯ್ದೆ-1976ರ ಸೆಕ್ಷನ್ 321 ಬಿ ಪ್ರಕಾರ ದಂಡ ಪ್ರಮಾಣ ನಿಗದಿಪಡಿಸಿ ಕರಡು ನಿಯಮ ರೂಪಿಸಲಾಗಿದೆ ಎಂದು ಹೈಕೋರ್ಟ್'ಗೆ ಸರ್ಕಾರ ಗುರುವಾರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಪೌರ ನಿಯಮ ಕಾಯ್ದೆ-1976ರ ಸೆಕ್ಷನ್ 321 ಬಿ ಪ್ರಕಾರ ದಂಡ ಪ್ರಮಾಣ ನಿಗದಿಪಡಿಸಿ ಕರಡು ನಿಯಮ ರೂಪಿಸಲಾಗಿದೆ ಎಂದು ಹೈಕೋರ್ಟ್'ಗೆ ಸರ್ಕಾರ ಗುರುವಾರ ಮಾಹಿತಿ ನೀಡಿದೆ. 

ಪ್ರಕರಣ ಸಂಬಂಧ ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರಿ ವಕೀಲ ಅಚ್ಚಪ್ಪ ಈ ಮಾಹಿತಿ ನೀಡಿದರು. 

ಜೊತೆಗೆ ಕರ್ನಾಟಕ ಪೌರ ನಿಗಮಗಳು ನಿಯಮಗಳು-2019ರ ಕರಡು ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 

ಹೈಕೋರ್ಟ್ ಆದೇಶದಂತೆ ಅ.3ರಂದು ಪರಿಷ್ಕೃತ ಕರಡು ನಿಯಮ ರೂಪಿಸಲಾಗಿದ್ದು, ಅ.4ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಕರಡು ನಿಯಮಗಳು ಬಿಬಿಎಂಪಿ ಸೇರಿದಂತೆ ಪಾಲಿಕೆಗಳಿಗೆ ಅನ್ವಯವಾಗಲಿದೆ. 

ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆ ಆಹ್ವಾನಿಸಲಾಗಿದೆ. ಅದಕ್ಕಾಗಿ 30 ದಿನ ಕಾಲಾವಕಾಶ ನೀಡಲಾಗಿದ್ದು, ನಂತರ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ನ.18ಕ್ಕೆ ಮುಂದೂಡಿತು. 

ಪುರಸಭೆ ಅಧಿಕಾರಿಗಳ ದಂಡ ಇಂತಿವೆ...
ಮೊದಲ ಬಾರಿಗೆ ತಪ್ಪು ಮಾಡಿದ ಅಧಿಕಾರಿಗಳಿಗೆ ರೂ.10,000ಕ್ಕಿಂತಲೂ ಕಡಿಮೆಯಿಲ್ಲ ಆದರೆ, ರೂ.25 ಸಾವಿರಕ್ಕಿಂತಲೂ ಹೆಚ್ಚಿಲ್ಲ. 
ಎರಡನೇ ಬಾರಿ ತಪ್ಪು ಮಾಡಿದ ಅಧಿಕಾರಿಗಳಿಗೆ ರೂ.25,000ಕ್ಕಿಂತಲೂ ಕಡಿಮೆಯಿಲ್ಲ ರೂ.50,000ಕ್ಕಿಂತಲೂ ಹೆಚ್ಚು ದಂಡವಿಲ್ಲ. 
ಮೂರನೇ ಬಾರಿಯೂ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ನಿಯಮಗಳ ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಸೆಕ್ಷನ್ 342ರ ಅಡಿಯಲ್ಲಿ ಮುಖ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. 

ನಿಗಮದ ಅಧಿಕಾರಿಗಳ ದಂಡ ಇಂತಿವೆ...
ಮೊದಲ ಬಾರಿಗೆ ತಪ್ಪು ಮಾಡಿದವರಿಗೆ ರೂ.25,000ಕ್ಕಿಂತಲೂ ಕಡಿಮೆಯಿಲ್ಲ 50,000ಕ್ಕಿಂತಲೂ ಹೆಚ್ಚು ದಂಡವಿಲ್ಲ. 
ಎರಡನೇ ಬಾರಿ ತಪ್ಪು ಮಾಡಿದವರಿಗೆ ರೂ.50,000ಕ್ಕಿಂತಲೂ ಕಡಿಮೆಯಿಲ್ಲ ರೂ.1 ಲಕ್ಷಕ್ಕಿಂತಲೂ ಹೆಚ್ಚು ದಂಡವಿಲ್ಲ. 
ಮೂರನೇ ಬಾರಿ ಮಾಡಿದರೆ, ನಿಯಮಗಳ ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಸೆಕ್ಷನ್ 90 ಕೆಎಂಸಿ ಕಾಯ್ದೆಯನ್ವಯ ಆಯುಕ್ತರು ಕ್ರಮ ಕೈಗೊಳ್ಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com