ಐಟಿ ದಾಳಿಯಲ್ಲಿ ನೂರಾರು ಕೋಟಿ ರೂ ಸಿಕ್ಕಿದೆ ಎಂಬ ವರದಿ ಸರಿಯಲ್ಲ: ಡಾ.ಜಿ. ಪರಮೇಶ್ವರ್

ಐಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ಅಂದು ಅವರ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ಹಾಗೂ ದಾಖಲೆ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಪರಮೇಶ್ವರ್
ಪರಮೇಶ್ವರ್

ಬೆಂಗಳೂರು: ಐಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ಅಂದು ಅವರ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ಹಾಗೂ ದಾಖಲೆ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮದಲ್ಲಿ 3,500 ಕೋಟಿ ರು ಕಿಕ್‌ ಬ್ಯಾಕ್‌ ತೆಗೆದುಕೊಂಡಿದ್ದಾರೆ ಹಾಗೂ 400 ಕೋಟಿ ರು. ನಗದು ಸಿಕ್ಕಿದೆ ಎಂದು ವರದಿ ಪ್ರಸಾರ ಮಾಡಿದ್ದಾರೆ. ಆದರೆ ಇದು ಸಂಪೂರ್ಣ ಆಧಾರ ರಹಿತವಾದದ್ದು . ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಅರಿತು ಮಾಡಲಿ ಎಂದರು.
ಐಟಿ ಅಧಿಕಾರಿಗಳು ಮನೆ ಸೇರಿದಂತೆ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಸೂಕ್ತ ದಾಖಲಾತಿ ನೀಡಿದ್ದೇನೆ. ಬಳಿಕ ಕೆಲ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಅಂತೆಯೇ ಸಮರ್ಪಕ ಉತ್ತರ ನೀಡಿದ್ದೇನೆ ಎಂದು ಹೇಳಿದರು. 

ವೈದ್ಯಕೀಯ ಸೀಟು ಹಂಚಿಕೆ ನೀಟ್‌ ಮೂಲಕ ಆಗಲಿದೆ. ನಾನು ಮೂವತ್ತು ವರ್ಷ ಕಾಲೇಜು ಮಂಡಳಿಯಲ್ಲಿ ಸದಸ್ಯನಿದ್ದರೂ ಹೆಚ್ಚಾಗಿ ಕಾಲೇಜು ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ನನ್ನ ಸಹೋದರ ನಿಧನದ ಬಳಿಕ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ದಾಖಲಾತಿ ವಿಷಯದಲ್ಲಿ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಸಹೋದರ ಮಗ ಆನಂದ್ ಕೂಡ ಇರುತ್ತಿದ್ದರು. ದಾಖಲಾತಿ ವಿಷಯದಲ್ಲಿ ನೇರ ಹೊಣೆಗಾರಿಕೆ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. 

ಐಟಿ ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ಮುಗಿಸಲಿ. ನಂತರ ನಮ್ಮ ಬಳಿಯ ಇರುವ ಎಲ್ಲಾ ದಾಖಲಾತಿ ನೀಡುತ್ತೇವೆ. ಅದಕ್ಕೆ ಸಮಂಜಸ ಉತ್ತರ ನೀಡುತ್ತೇನೆ ಎಂದರು. ಐಟಿ ದಾಳಿ ವಿಷಯಕ್ಕೆ ರಾಜಕೀಯ ಲೇಪ ಬಳಿಯುವುದಿಲ್ಲ. ಮೊದಲು ಅಧಿಕಾರಿಗಳಿಗೆ ಉತ್ತರ ನೀಡುತ್ತೇನೆ. 

ಕೆಲ ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.  ನಾನು ಸಂಪೂರ್ಣ ರಾಜಕೀಯದಲ್ಲಿ ತೊಡಗಿದ್ದರಿಂದ ಕಾಲೇಜು ಮಂಡಳಿಗೆ ಹೆಚ್ಚು ಗಮನ ನೀಡಿರಲಿಲ್ಲ. ಮಂಗಳವಾರ ವಿಚಾರಣೆಗೆ ಕರೆದಿದ್ದು, ಅಲ್ಲಿಯೇ ಸೂಕ್ತ ಉತ್ತರ ನೀಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com