ಹಿಂದಿನ ಮೈತ್ರಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಗೆ ವಿಧಾನಮಂಡಲ ಅನುಮೋದನೆ

ರಾಜ್ಯದ ಹಿಂದಿನ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ್ದ 2019 -20ನೇ ಸಾಲಿನ ಪೂರ್ಣ ಪ್ರಮಾಣದ 2.40 ಲಕ್ಷ ಕೋಟಿ ರೂಪಾಯಿಗಳ ಹಣಕಾಸು ಮಸೂದೆಗೆ ವಿಧಾನಮಂಡಲ ಶನಿವಾರ ಅಂಗೀಕಾರ ನೀಡಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಹಿಂದಿನ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ್ದ 2019 -20ನೇ ಸಾಲಿನ ಪೂರ್ಣ ಪ್ರಮಾಣದ 2.40 ಲಕ್ಷ ಕೋಟಿ ರೂಪಾಯಿಗಳ ಹಣಕಾಸು ಮಸೂದೆಗೆ ವಿಧಾನಮಂಡಲ ಶನಿವಾರ ಅಂಗೀಕಾರ ನೀಡಿದೆ.

ಹಿಂದಿನ ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಮೂರು ದಿನಗಳ ಕಿರು ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. 

ವಿಧಾನಸಭೆಯಲ್ಲಿ ಯಡಿಯೂರಪ್ಪ ಮಂಡಿಸಿದ ಧನ ವಿನಿಯೋಗ ಮಸೂದೆಗೆ ಸದನ ಧ್ವನಿ ಮತದ ಅಂಗೀಕಾರ ನೀಡಿತು. ಇದಕ್ಕೂ ಮುನ್ನ ಇಲಾಖಾವಾರು ಬೇಡಿಕೆ ಕುರಿತ ಚರ್ಚೆಗೆ ಉತ್ತರ ನೀಡಿದ ಯಡಿಯೂರಪ್ಪ, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಕಡಿತ ಮಾಡದೆ ಮುಂದುವರೆಸಿಕೊಂಡು ಹೋಗುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ಹಣಕಾಸು ಮಂಜೂರಾತಿಯಲ್ಲಿ ತಾರತಮ್ಯವಾಗಿದ್ದರೆ ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನೆರೆಪೀಡಿತ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಶಾಸಕರ ಕ್ಷೇತ್ರಗಳಿಗೆ ನೀಡಲಾಗಿರುವ ಅನುದಾನದಲ್ಲಿ ತಾರತಮ್ಯವಾಗಿದ್ದರೆ ಶಾಸಕರ ಸಭೆ ಕರೆದು ಅದನ್ನು ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಶೇಷವಾಗಿ ಬೆಂಗಳೂರು ನಗರದ ಶಾಸಕರ ಸಭೆ ಕರೆದು ಇತ್ತೀಚೆಗೆ ಸುರಿದ ಮಳೆಯಿಂದ ಕೆಲವು ಕ್ಷೇತ್ರಗಳಲ್ಲಿ ಭಾರೀ ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಲು ಹೆಚ್ಚಿನ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿ ಆ ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಬಾಕಿ ಉಳಿದುಕೊಂಡಿರುವ ಕಾಮಗಾರಿಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸಿಎಜಿ ವರದಿಯಲ್ಲಿ ಮಾಡಿರುವ ಶಿಫಾರಸ್ಸಿನಂತೆ ಹಿಂದಿನ ಸಾಲಿನಲ್ಲಿ ಉಪಯೋಗವಾಗದೆ ಇರುವ ಹಣವನ್ನು ಬಳಕೆ ಮಾಡಿಕೊಂಡು ನೆರೆ ಸಂತ್ರಸ್ತರಿಗೆ ಮತ್ತು ಇತ್ತೀಚೆಗೆ ಮಳೆ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದರು. 

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ನಗರದ ಶಾಸಕರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೆ. ೨೦೧೩-೧೪ನೇ ಸಾಲಿನಿಂದ ೨೦೧೮-೧೯ನೇ ಸಾಲಿನವರೆಗೆ ಬೆಂಗಳೂರಿನ ವಿವಿಧ ಕ್ಷೇತ್ರಗಳಾದ ಬಿಟಿಎಂ ಬಡಾವಣೆ, ಬೆಂಗಳೂರು ದಕ್ಷಿಣ, ಚಿಕ್ಕಪೇಟೆ, ಗಾಂಧಿ ನಗರ, ಶಿವಾಜಿನಗರ, ರಾಜರಾಜೇಶ್ವರಿ ನಗರ, ವಿಜಯನಗರ ಸೇರಿದಂತೆ ಅನೇಕ ಶಾಸಕರ ಕ್ಷೇತ್ರಗಳಿಗೆ ನೀಡಲಾದ ಅನುದಾನದ ಅಂಕಿ ಅಂಶಗಳನ್ನು ಅವರು ಸದನಕ್ಕೆ ವಿವರಿಸಿದರು. 

ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಧನ ವಿನಿಯೋಗ ಮಸೂದೆಯನ್ನುಮತಕ್ಕೆ ಹಾಕಿದರು. ಸದನ ಧ್ವನಿಮತದ ಅನುಮೋದನೆ ನೀಡಿತು. 

ಇನ್ನು ವಿಧಾನಸಪರಿಷತ್ತಿನಲ್ಲಿ ಯಡಿಯೂರಪ್ಪ ಅವರು ಮಂಡಿಸಿದ್ದ ಧನ ವಿನಿಯೋಗ ಪ್ರಸ್ತಾವನೆಗೆ ಸದನ ಅಂಗೀಕಾರ ನೀಡಿತು. ಬಳಿಕ ಮೇಲ್ಮನೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com