ಮಾಧ್ಯಮ ನಿರ್ಬಂಧ ಶೇ.200 ರಷ್ಟು ನನ್ನ ನಿರ್ಧಾರ, ಯಾವುದೇ ಮಾಹಿತಿ ತಿರುಚುತ್ತಿಲ್ಲ: ಸಂದರ್ಶನದಲ್ಲಿ ಸ್ಪೀಕರ್ ಸ್ಪಷ್ಟನೆ

ವಿಧಾನಸಭೆ ಅಧಿವೇಶನದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದು ಶೇ.200ರಷ್ಟು ನನ್ನದೇ ನಿರ್ಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ತಿರುಚುತ್ತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪಷ್ಟಪಡಿಸಿದ್ದಾರೆ. 
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದು ಶೇ.200ರಷ್ಟು ನನ್ನದೇ ನಿರ್ಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ತಿರುಚುತ್ತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪಷ್ಟಪಡಿಸಿದ್ದಾರೆ. 

ಅಧಿವೇಶನಕ್ಕೆ ಖಾಸಗಿ ಸುದ್ದಿ ವಾಹಿನಿಗಳ ಮೇಲೆ ಸ್ಪೀಕರ್ ಕಾಗೇರಿಯವರು ಈ ಹಿಂದೆ ನಿರ್ಬಂಧ ಹೇರಿದ್ದರು. ಈ ನಿರ್ಧಾರಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಪತ್ರಕರ್ತರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸ್ಪೀಕರ್ ನಿರ್ಧಾರಕ್ಕೆ ಪತ್ರಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದಲ್ಲದೆ, ವಿರೋಧ ಪಕ್ಷಗಳು ಸ್ಪೀಕರ್ ವಿರುದ್ಧ ತೀವ್ರವಾಗಿ ಕೆಂಡಕಾರಿದ್ದವು. ಸ್ಪೀಕರ್ ಅಂಪೈರ್ ರೀತಿ ಇರಬೇಕು, ಕ್ಲಾಸ್ ಟೀಚರ್ ಅಲ್ಲ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದ್ದರು. 

ತಮ್ಮ ನಿರ್ಧಾರ ಕುರಿತಂತೆ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿರುವ ಕಾಗೇರಿಯವರು, ಮಾಧ್ಯಮ ನಿರ್ಬಂಧ ಸ್ವತಃ ನಾನು ತೆಗೆದುಕೊಂಡ ನಿರ್ಧಾರವಾಗಿದೆ. ಈ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳ ಜೊತೆಗಾಗಲೀ, ಯಾರ ಜೊತೆಯೇ ಆಗಲೀ ಚರ್ಚಿಸಿರಲಿಲ್ಲ ಎಂದು ಹೇಳಿದ್ದಾರೆ. 

ಈ ಬಾರಿ ಚಳಿಗಾಲ ಅಧಿವೇಶನ ಕೇವಲ 3 ದಿನಗಳೇ ಇತ್ತು. ಇದಕ್ಕೆ ಕಾರಣ? 
ರಾಜ್ಯ ಸರ್ಕಾರವೇ ಮನವಿ ಮೇರೆಗೆ ಮೂರು ದಿನಗಳ ಕಾಲ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಪುಟ ಕೂಡ ಅನುಮೋದನೆ ನೀಡಿತ್ತು. ಬಳಿಕ ಅಂತಿಮ ಒಪ್ಪಿಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರ ನಿರ್ಧಾರದಂತೆ ನಾನು ಅಧಿವೇಶನವನ್ನು ನಡೆಸಬೇಕು. 

ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಸಲಹೆ ಎಲ್ಲಿಂದ ಬಂತು? 
ಹಲವು ವರ್ಷಗಳಿಂದಲೂ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲೂ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ನಾವು ಯಾವುದೇ ಮಾಹಿತಿಗಳನ್ನು ತಿರುಚುತ್ತಿಲ್ಲ. ಯಾವುದನ್ನೂ ಮುಚ್ಚಿಡುತ್ತಿಲ್ಲ. ನೇರಪ್ರಸಾರವನ್ನು ನಾವು ನಿರ್ಬಂಧಿಸಿಲ್ಲ. ಅದನ್ನು ಎಡಿಟ್ ಕೂಡ ಮಾಡುತ್ತಿಲ್ಲ. ಸದನದ ಪ್ರತೀಯೊಂದು ಚಟುವಟಿಕೆಗಳೂ ದಾಖಲಾಗಿವೆ. 

ಮಾಧ್ಯಮ ನಿರ್ಬಂಧ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಾರಣ? 
ಸಭಾಪತಿಗಳ ಸಮಾವೇಶಗಳಲ್ಲಿ, ಸದನದ ಘನತೆಯನ್ನು ಎತ್ತಿಹಿಡಿಯುವ ಮತ್ತು ಸದನದ ಚಿತ್ರಣವನ್ನು ಸುಧಾರಿಸುವ ಕುರಿತು ಚರ್ಚೆಗಳು ನಡೆಯುತ್ತವೆ. ಲೋಕಸಭೆ ಹಾಗೂ ರಾಜ್ಯಸಭಾ ಅಧಿವೇಶನಗಳ ಪ್ರಕಾರ ಸದನವನ್ನು ಮುನ್ನಡೆಸಲು ನಾನು ನಿರ್ಧರಿಸಿದ್ದೆ. 

ಈ ನಿರ್ಧಾರ ಯಾರದ್ದು? ಸ್ಪೀಕರ್'ಗಳದ್ದೋ ಅಥವಾ ಮುಖ್ಯಮಂತ್ರಿಗಳದ್ದೋ?
ಇದು ನನ್ನ ಸ್ವಂತ ನಿರ್ಧಾರ. ಶೇ.200ರಷ್ಟು ನಾನೇ ತೆಗೆದುಕೊಂಡ ನಿರ್ಧಾರ. ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ ಮೊದಲ ಸ್ಪೀಕರ್ ನಾನಲ್ಲ. ಈ ಹಿಂದೆ ಇದ್ದ ಸ್ಪೀಕರ್ ಕೂಡ ಇಂತಹದ್ದೇ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಲೋಕಸಭೆಯಲ್ಲೂ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 

ಬೇರೆ ಯಾವುದೇ ರಾಜ್ಯ ವಿಧಾನಸಭೆಯಲ್ಲಿ ಇಂತಹ ನಿರ್ಬಂಧಗಳಿವೆಯೇ? 
ಲೋಕಸಭೆ ವ್ಯವಸ್ಥೆಯಂತೆಯೇ ಇತರೆ ರಾಜ್ಯಗಳ ವಿಧಾನಸಭೆಯಲ್ಲಿ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಸಾಕಷ್ಟು ರಾಜ್ಯಗಳು ಇದನ್ನು ಪಾಲನೆ ಮಾಡುತ್ತಿವೆ. ಕರ್ನಾಟಕ ರಾಜ್ಯ ಮೊದಲೇನಲ್ಲ. ಅಧಿವೇಶನದಲ್ಲಿ ಈ ವಿಧಾನವನ್ನು ಈ ಬಾರಿ ಅನುಸರಿಸಿದ್ದೇವೆ. ಸರ್ಕಾರ ಅಥವಾ ಸರ್ಕಾರ ಬದಲಾವಣೆಯಾದರೂ ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. 

ಅಧಿವೇಶನದಲ್ಲಿ ಸುದ್ದಿ ಮಾಧ್ಯಮಗಳು, ಕ್ಯಾಮೆರಾಗಳಿಗೆ ಅನುಮತಿ ನೀಡಿದರೆ ಎದುರಾಗುವ ಸಮಸ್ಯೆಗಳೇನು?
ಸದನದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಬಗ್ಗೆ ಚಾಚು ತಪ್ಪದೆ ನಾವೇ ಮಾಹಿತಿಗಳನ್ನು ನೀಡುತ್ತೇವೆ. ಇದರಲ್ಲಿ ಏನಾದರೂ ಸಮಸ್ಯೆ ಇದೆಯೇ? ನಮ್ಮ ಪ್ರಕಾರ ಸಂಸತ್ತು ನಮಗೆ ಮಾದರಿ. ರಾಜ್ಯಗಳು ಕೂಡ ಸಂಸತ್ತಿನ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆಗಳು ಬಂದಿವೆ. 

ಭದ್ರತೆ ಕಾರಣದಿಂದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆಯೇ? 
ಈ ಆಯಾಮದಲ್ಲಿ ನಾವೆಂದೂ ಚಿಂತನೆ ನಡೆಸಿಲ್ಲ. 

ಮಾಧ್ಯಮಗಳ ಮೇಲಿನ ನಿರ್ಬಂಧ ಶಾಶ್ವತವೇ?
ಮೂರು ದಿನಗಳ ಅಧಿವೇಶನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ನಾನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಮುಂದಿನ ಅಧಿವೇಶನದಲ್ಲಿ ನಿರ್ಧಾರ ಕುರಿತು ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. 

ಪತ್ರಕರ್ತರು ಇದೇ ಮೊದಲ ಬಾರಿಗೆ ಸ್ಪೀಕರ್ ವಿರುದ್ಧ ಪ್ರತಿಭಟಿಸಿದ್ದಾರೆಯೇ? 
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತೀಯೊಬ್ಬರಿಗೂ ಇದೆ. 

ಮಾಧ್ಯಮಗಳ ಮೇಲಿನ ನಿರ್ಬಂಧ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂದೆನಿಸುತ್ತಿದೆಯೇ? 
ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಯಾವುದನ್ನೂ ಮುಚ್ಚಿಡುತ್ತಿಲ್ಲ ಎಂಬುದು ಜನರಿಗೂ ಗೊತ್ತಿದೆ. ನನ್ನ ನಿರ್ಧಾರವನ್ನು ಶಾಸಕರು ಸ್ವಾಗತಿಸಿದ್ದಾರೆ. 

ಮೇಲ್ಮನೆಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧವಿಲ್ಲ?
ಇದು ಅವರ ವೈಯಕ್ತಿಯ ನಿರ್ಧಾರ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. 

ಅಧಿವೇಶನದಲ್ಲಿ ಪತ್ರಕರ್ತರು ಇರಲಿಲ್ಲ. ಸದನದಲ್ಲಿ ನೀವು ಗುರ್ತಿಸಿದ ಬದಲಾವಣೆ ಏನು? 
ಅಧಿವೇಶನ ನಡೆಸುತ್ತಿರುವಾಗ ಪತ್ರಕರ್ತರು ಬಂದು ಮಾಹಿತಿಗಳನ್ನು ಪಡೆದುಕೊಂಡರು. ಸದನದ ನೇರ ಪ್ರಸಾರದ ರೆಕಾರ್ಡ್ ಗಳನ್ನು ಸುದ್ದಿವಾಹಿನಿಗಳು ಪಡೆದುಕೊಂಡು ಹೋದರು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com