ಕಾಂಗ್ರೆಸ್ ಯೋಜನೆಗಳನ್ನು ಹಾಳು ಮಾಡಬೇಡಿ: ಸಿದ್ದರಾಮಯ್ಯ

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವೊಬ್ಬರು ಹೇಳುತ್ತಾರೆ. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ದಾವಣಗೆರೆ: ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವೊಬ್ಬರು ಹೇಳುತ್ತಾರೆ. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹರಿಹರ ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಯಾರೂ ಕೂಡ ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನನ್ನು ಮುಚ್ಚಿಸುವ ಪ್ರಯತ್ನವೂ ಆಯಿತು ಎಂದು ಕಿಡಿಕಾರಿದರು.

ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಗುಸುಗುಸು ಮಾಡಿದರು. ಆ ಕ್ಯಾಂಟೀನ್​ನಲ್ಲಿ ಇಂದಿರಮ್ಮನ ಫೋಟೋ ಹಾಕಿದ್ದಕ್ಕೆ ಸಹಿಸಿಕೊಳ್ಳದೇ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ನಿಲ್ಲಿಸಬಾರದು ಎಂದು ನಿನ್ನೆ ಅಧಿವೇಶನದಲ್ಲಿ ನಾನು ಹೇಳಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ ತಂದೆ. ಅದಕ್ಕಿಂತ ಮೊದಲು ಅನ್ನ ಭಾಗ್ಯ ಯೋಜನೆ ತಂದೆ. ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಎಲ್ಲರಿಗೂ ಅನ್ನ, ಸೂರು, ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಸೆಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಸಮುದಾಯವರಿಗೆ ಯೋಜನೆಗಳನ್ನು ತಂದೆ. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅದನ್ನೇ ನಂಬಿಬಿಟ್ರಲ್ಲ ನೀವು, ಎಂದು ಜನರ ಬಳಿ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ,  ಎಲ್ಲಾ ಯೋಜನೆಗಳನ್ನು ತಂದರೂ ನಮ್ಮನ್ನು ಕೈ ಬಿಟ್ಟುಬಿಟ್ಟರಲ್ಲ. ಎಲ್ಲರಿಗೂ ಅನ್ನ, ಸೂರು, ಶಿಕ್ಷಣ ಸಿಗಬೇಕು. ಇಂದಿರಾ ಕ್ಯಾಂಟೀನ್ ‌ನಲ್ಲಿ ಇಂದಿರಮ್ಮನ ಫೋಟೋ ಹಾಕಿದ್ದಕ್ಕೆ ಸಹಿಸಿಕೊಳ್ಳದೆ ಈ ರೀತಿ ಮಾಡುತ್ತಾ ಇದ್ದಾರೆ. 

ಇನ್ನು ನಾವು ಎಲ್ಲ ಜಯಂತಿಗಳನ್ನು ಮಾಡಿಕೊಂಡು ಬಂದೆವು. ಆದರೆ ಈಗ ಟಿಪ್ಪುವಿನ ಜಯಂತಿ‌ ನಿಲ್ಲಿಸಿದ್ದಾರೆ. ರಾಯಣ್ಣ, ಚನ್ನಮ್ಮ ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. 

ಟಿಪ್ಪು ಕೂಡ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಯಾರೂ ಸ್ವಾತಂತ್ರ್ಯ ಹೋರಾಟಗಾರ ಹೆಸರಿನಲ್ಲಿ ರಾಜಕೀಯ ‌ಮಾಡಬಾರದು ಎಂದರು.
 
ನರೇಂದ್ರ ‌ಮೋದಿ 56 ಇಂಚಿನ‌ ಎದೆ‌ ಇದೆ ಎಂದು ಹೇಳುತ್ತಾರೆ. ಆದರೆ ಎಷ್ಟೇ ದೊಡ್ಡದಾಗಿರಲಿ ಕಾಳಜಿ‌ ಇರಬೇಕು. ಬಡವರ ಜೊತೆ ಇರುವ ಕಾಳಜಿ ಇರಬೇಕು. ಪೈಲ್ವಾನ್ ಗಳಿಗೆ, ಬಾಡಿ ಬಿಲ್ಡರ್ ಗಳಿಗೆ ಕೂಡ ಎದೆ ದೊಡ್ಡದಿರುತ್ತದೆ.

ಆದರೆ ಆ ಎದೆಯಲ್ಲಿ ಕಾಳಜಿ ಇರಬೇಕು. ಇಂದಿರಾ ಕ್ಯಾಂಟಿನ್ ‌ನಿಲ್ಲಿಸಲು, ಅನ್ನಭಾಗ್ಯ ಯೋಜನೆ ‌ನಿಲ್ಲಿಸಲು ನಾನು ಬಿಡಲ್ಲ. ಅಸೆಂಬ್ಲಿಯ ಮೂರು ದಿನಕ್ಕೆ ಬಿಜೆಪಿಯವರು ಸಾಕಾಗಿ ಹೋಗಿದ್ದಾರೆ. ನಾವು 15 ದಿನ ಅಧಿವೇಶನ ನಡೆಸಲು ಒತ್ತಾಯ ಮಾಡಿದ್ದೆವು, ಆದರೆ ಬಿಜೆಪಿ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com