ಸರ್ಕಾರದಿಂದ ಸಾಮೂಹಿಕ ವಿವಾಹ: ವರ್ಷಕ್ಕೆ 10 ಸಾವಿರ ಜೋಡಿಗೆ ಮುಜರಾಯಿ ಇಲಾಖೆಯಿಂದಲೇ ಮದುವೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ಜನಪರ ಕಾಳಜಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ಜನಪರ ಕಾಳಜಿ ಪ್ರದರ್ಶಿಸಿ, ಜನರನ್ನು ಸೆಳೆಯಲು ಸಾಮೂಹಿಕ ಮದುವೆ ಯೋಜನೆಯೊಂದನ್ನು ರೂಪಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದಿಂದಲೇ :"ಮದುವೆ" ಯೋಜನೆ ಜಾರಿಗೆ ಬರಲಿದೆ.

ಆರ್ಥಿಕವಾಗಿ ಸಶಕ್ತರಲ್ಲದ ಬಡವರು, ಜನ ಸಾಮಾನ್ಯರು ಸೇರಿದಂತೆ ಜಾತಿ ಭೇದವಿಲ್ಲದೆ, ಖರ್ಚಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿ ಸಾಮೂಹಿಕ ವಿವಾಹ ಮಹೋತ್ಸವಗಳನ್ನು ಆಯೋಜಿಸಸಲು ಮುಜರಾಯಿ ಇಲಾಖೆ ಮುಂದಾಗಿದೆ. ಸರ್ಕಾರದಿಂದಲೇ  ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ವಿನೂತನ ಯೋಜನೆ ಜಾರಿಗೆ ತೀರ್ಮಾನಿಸಿದೆ.

ಆರ್ಥಿಕವಾಗಿ ಸಧೃಡವಾಗಿರುವ ಆಯ್ದ 100 ‘ಎ’ದರ್ಜೆ ದೇಗುಲಗಳಲ್ಲಿ ಸರ್ಕಾರದಿಂದ ಪ್ರತೀ ವರ್ಷ 10 ಸಾವಿರಕ್ಕೂ ಅಧಿಕ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ರಾಜ್ಯ ಧಾರ್ಮಿಕ ಪರಿಷತ್ ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಿದ್ದು ಧಾರ್ಮಿಕ ಪರಿಷತ್ ಸಮಿತಿಗಳನ್ನು ರಚಿಸಿದ ಬಳಿಕ ಈ ಯೋಜನೆ ಜಾರಿ ಮತ್ತಷ್ಟು ತೀವ್ರತೆ ಪಡೆಯಲಿದೆ. 

ಹಿಂದಿನ ಕಾಂಗ್ರೆಸ್ ಸರ್ಕಾರ ಮುಸ್ಲೀಂ ಸಮುದಾಯದ ಜನರಿಗಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಾಮೂಹಿಕ ವಿವಾಹ ಯೋಜನೆ ಜಾರಿಗಾಗಿ ಸಿದ್ಧತೆಯಲ್ಲಿ ತೊಡಗಿದೆ. 

ವಧು ಮತ್ತು ವರನಿಗೆ ವಿವಾಹ ವಸ್ತ್ರ, ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಿವಾಹವಾದ ಜೋಡಿಗಳಿಗೆ ಆರ್ಥಿಕ ಸಹಾಯಧನ ನೀಡುವ ಜೊತೆಗೆ ವಿವಾಹ ನೋಂದಣಿಯನ್ನು ಮಾಡಿಸಲು ಇಲಾಖೆ ತೀರ್ಮಾನಿಸಿದೆ. ಮುಂದಿನ ಧಾರ್ಮಿಕ ಪರಿಷತ್‌ ಸಭೆಗಳಿಗೆ ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿ ಚರ್ಚಿಸಿ ಯೋಜನೆಗೆ ಮತ್ತಷ್ಟು ಶಕ್ತಿ ತುಂಬಲು ತೀರ್ಮಾನ ಕೈಗೊಳ್ಳಲಾಗಿದೆ.

ಈ ಬಗ್ಗೆ ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಮುಜರಾಯಿ ಹಾಗೂ ಬಂದರು, ಒಳನಾಡು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಇನ್ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆ, ಮಲೆ ಮಹದೇಶ್ವರ ಬೆಟ್ಟದ ಆಡಳಿತ ಮಂಡಳಿ ಸದಸ್ಯರ ಜೊತೆ ಚೆರ್ಚಿಸಿ ಸಾಮೂಹಿಕ ವಿವಾಹದ ರೂಪು ರೇಷೆಗಳನ್ನು ಸಿದ್ದಪಡಿಸಿ ನಿಯಮಾವಳಿ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಆರ್ಥಿಕವಾಗಿ ದುರ್ಬಲ ಕುಟುಂಬ ಸದಸ್ಯರಿಗೆ ಸಾಮೂಹಿಕ ವಿವಾಹ ನೆರವೇರಿಸಿದರಷ್ಟೇ ಸಾಲದು ಅವರಿಗೆ ಬದುಕು ಕಟ್ಟಿಕೊಳ್ಳಲು, ಸಾಮಾಜಿಕವಾಗಿ ನೆಮ್ಮದಿಯ ಜೀವನ ಸಾಗಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಈ ಯೋಜನೆಯಲ್ಲಿ ಸೇರಿರುವ ಮಹತ್ವದ ಅಂಶವಾಗಿದೆ. ಹೀಗಾಗಿ ದಾನಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಪ್ರತಿಷ್ಠಾನಗಳನ್ನು ಸಾಮೂಹಿಕ ವಿವಾಹ ಕಾರ್ಯದಲ್ಲಿ ಕೈಜೋಡಿಸುವಂತೆ ಕರೆ ನೀಡಲಾಗಿದೆ. ನೂತನ ಯೋಜನೆಯನ್ನು 2020-21ರ ಆರ್ಥಿಕ ವರ್ಷದಿಂದ ಜಾರಿಗೊಳಿಸಲು ಮುಜರಾಯಿ ಇಲಾಖೆ ಸಿದ್ದತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಜೋಡಿ ವಿವಾಹಕ್ಕೆ ಅಂದಾಜು 25 ರಿಂದ 30 ಸಾವಿರ ರೂ ಖರ್ಚು ತಗಲುವ ಸಾಧ್ಯತೆ ಇದ್ದು,1000 ಜೋಡಿಗಳಿಗೆ ಅಂದಾಜು 2.5 ಕೋಟಿ ರೂ ನಿಂದ 3 ಕೋಟಿ ವೆಚ್ಚವಾಗಬಹುದು. 10 ಸಾವಿರ ಜೋಡಿಗಳಿಗೆ 25 ರಿಂದ 30 ಕೋಟಿ ರೂ ವಾರ್ಷಿಕ ವೆಚ್ಚ ತಗಲುವ ಸಾಧ್ಯತೆ ಇದೆ. ಅಲ್ಲದೆ ವಿವಾಹ ಕಾರ್ಯಕ್ರಮ, ಊಟೋಪಚಾರ, ಇತರೆ ವೆಚ್ಚಗಳು ಸೇರಿ 30-35 ಕೋಟಿ ರೂ ಖರ್ಚು ವೆಚ್ಚವಾಗುವ ನಿರೀಕ್ಷೆಯಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿವರಿಸಿದರು.

ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳು ವರ್ಷಕ್ಕೊಮ್ಮೆ 100 ಜೋಡಿಗಳಿಗೆ ವಿವಾಹ ನೆರವೇರಿಸಿದರೂ 100 ದೇಗುಲಗಳಿಂದ ವಾರ್ಷಿಕ 10,000 ಜೋಡಿ ವಿವಾಹ ನೆರವೇರಿಸಬಹುದಾಗಿದೆ. ಆ ಮೂಲಕ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವುದು, ಆರ್ಥಿಕವಾಗಿ ಬಡ ಕುಟುಂಬಗಳ ಮೇಲೆ ಬೀಳಬಹುದಾದ ಸಾಲದ ಹೊರೆ ತಪ್ಪಿಸುವುದು ಸರ್ಕಾರದ ಮಹದುದ್ದೇಶವಾಗಿದೆ ಎಂದು ಸಚಿವರು ತಮ್ಮ ಆಶಯವನ್ನು ಬಿಚ್ಚಿಟ್ಟರು.

ರಾಜ್ಯದ ಪ್ರಮುಖ ದೇವಾಲಯಗಳಾದ ಮಲೆ ಮಹದೇಶ್ವರ, ಚಾಮುಂಡೇಶ್ವರಿ, ನಂಜನಗೂಡು ನಂಜುಂಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಿ, ಮಂಗಳೂರು ಮಂಗಳಾದೇವಿ, ಕಟೀಲು ದುರ್ಗಾ ಪರಮೇಶ್ವರಿ ದೇಗುಲ ಸೇರಿದಂತೆ ಆಯ್ದ 100 ದೇಗುಲ ಗಳನ್ನು ಸಾಮೂಹಿಕ ವಿವಾಹ ಯೋಜನೆಗೆ ಗುರುತಿಸಲಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಆಯಾ ದೇವಸ್ಥಾನದ ಆದಾಯದಿಂದಲೇ ಭರಿಸಲಾಗುತ್ತದೆ. ಒಂದೊಮ್ಮೆ ಅಷ್ಟು ವೆಚ್ಚವನ್ನು ದೇಗುಲದಿಂದ ಭರಿಸಲು ಸಾಧ್ಯವಾಗದಿದ್ದಲ್ಲಿ ದಾನಿಗಳ ಸಹಕಾರದಿಂದ ಸಾಮೂಹಿಕ ವಿವಾಹ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್‌ ಸಮಿತಿಗಳನ್ನು ಕೆಲವೇ ದಿಗಳಲ್ಲಿ ರಚನೆ ಮಾಡಲಿದ್ದೇವೆ. ಎಲ್ಲ ಜಿಲ್ಲಾ ಧಾರ್ಮಿಕ ಪರಿಷತ್‌ಗೆ ಸ್ಥಳೀಯ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರಲಿದ್ದು, ಅವರ ನೇತೃತ್ವದಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮ ಸಾಧಕ ಬಾಧಕಗಳನ್ನು ಕುರಿತು ಮತ್ತಷ್ಟು ಸಮಗ್ರವಾಗಿ ಚೆರ್ಚೆ ನಡೆಸಲಾಗುತ್ತಿದೆ. ಅಧಿಕಾರಿಗಳ ತಂಡ ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆ ಅವರು ನಡೆಸಿಕೊಡುವ ಸಾಮೂಹಿಕ ವಿವಾಹ ಕಾರ್ಯಕ್ರಮದ ರೂಪು ರೇಷೆಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯ ಧಾರ್ಮಿಕ ಪರಿಷತ್ ಸಭೆ ಇಂದು ಮತ್ತೊಮ್ಮೆ ಸೇರುತ್ತಿದ್ದು, ಈ ಬಗ್ಗೆ ಅಂತಿಮ ರೂಪುರೇಷೆ ಸಿದ್ಧವಾಗಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com