ಬಾಗಲಕೋಟೆ: ಶಾಲಾಮಕ್ಕಳಿಗಿನ್ನು ಸಿಗಲಿದೆ ನಿತ್ಯ ವಿಭಿನ್ನ ಆಹಾರ!

ನಿತ್ಯವೂ ಅನ್ನ, ಸಾಂಬಾರ್ ಎಂದು ಏಕತಾನತೆಯಿಂದ ಕೊರಗುತ್ತಿದ್ದ ಮಕ್ಕಳಿಗೆ ಇನ್ನು ಮುಂದೆ ನಿತ್ಯವೂ ವಿಭಿನ್ನ ರೀತಿಯ ಆಹಾರ ವ್ಯವಸ್ಥೆ ಮಾಡಲು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ವಿನೂತನ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ನಿತ್ಯವೂ ಅನ್ನ, ಸಾಂಬಾರ್ ಎಂದು ಏಕತಾನತೆಯಿಂದ ಕೊರಗುತ್ತಿದ್ದ ಮಕ್ಕಳಿಗೆ ಇನ್ನು ಮುಂದೆ ನಿತ್ಯವೂ ವಿಭಿನ್ನ ರೀತಿಯ ಆಹಾರ ವ್ಯವಸ್ಥೆ ಮಾಡಲು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ವಿನೂತನ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ಅಂಗನವಾಡಿ ಸೇರಿದಂತೆ 1ನೇ ತರಗತಿಯಿಂದ 10 ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ದಿನಕ್ಕೊಂದು ರೀತಿಯ ಆಹಾರ ನೀಡುವ ಮೂಲಕ ಅವರಿಗೆ ಪೌಷ್ಟಿಕ ಆಹಾರ ನೀಡಿ, ಅವರನ್ನು ಶಾಲೆಗಳತ್ತ ಆಕರ್ಷಿಸುವುದು ಯೋಜನೆ ಪ್ರಮುಖ ಉದ್ದೇಶವಾಗಿದೆ.

ಸದ್ಯ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಯಲ್ಲಿದ್ದು, ಕೆಲ ಶಾಲೆಗಳಲ್ಲಿ ವಿಕೆಂಡ್ ದಿನಗಳಲ್ಲಿ ಇಡ್ಲಿ, ಸಾಂಬಾರ್, ಫುಲಾವ್ ಸೇರಿದಂತೆ ಬೇರೆ ಬೇರೆ ಆಹಾರವನ್ನು ಮಕ್ಕಳಿಗೆ ಕೊಡುವ ಪದ್ಧತಿ ಇದೆ. ಆದರೆ ಎಲ್ಲ ವಿದ್ಯಾರ್ಥಿಗಳಿಗೆ ನಿತ್ಯವೂ ವಿಭಿನ್ನ ಬಗೆಯ ಆಹಾರ ನೀಡಿಕೆ ಮೂಲಕ ಅವರನ್ನು  ಕಲಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನಿತ್ಯ ವಿಭಿನ್ನ ಆಹಾರ ಯೋಜನೆಗೆ ಸಜ್ಜಾಗಿದೆ.

ನೂತನ ಯೋಜನೆ ಕುರಿತು ಜಿಪಂ. ಸಿಇಒ ಗಂಗೂಬಾಯಿ ಮಾನಕರ್ ವಿವರಣೆ ನೀಡುತ್ತ, ಮಕ್ಕಳಿಗೆ ಸಂಪೂರ್ಣ ಸಮತೋಲನ ಹಾಗೂ ಸುರಕ್ಷಿತ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಶುಚಿತ್ವ ಮತ್ತು ಮಿತವ್ಯಯ ಸೂತ್ರ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂಗವನವಾಡಿ ಮಕ್ಕಳಿಗೆ ವೈವಿದ್ಯಮಯ ಆಹಾರ ಪದ್ದತಿ ಬಳಸಲಾಗುತ್ತಿದ್ದು, ಸೋಮವಾರ ಅನ್ನ ಸಾಂಬರ, ಮಂಗಳವಾರ ಇಡ್ಲಿ, ಬುಧವಾರ ಫಲಾವು, ಬಿಸಿ ಬೇಳೆಬಾತ್, ಗುರುವಾರ ಅನ್ನ ಸಾಂಬರ, ಶುಕ್ರವಾರ ಸಿಹಿ ಪೊಂಗಲ್ ಮತ್ತು ಶನಿವಾರ ಉಪ್ಪಿಟ್ಟು, ಪುರಿ ಇಲ್ಲವೆ ಸಜ್ಜಕದಂತಹ ರುಚಿಕರವಾಗಿ ಆಹಾರವನ್ನು ವಾರದ 6 ದಿನಗಳ ಮೆನ್ಯೂ ಸಿದ್ದಗೊಂಡಿದೆ.

1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೂ ಸಹ ಮೆನ್ಯೂ ಅನುಸರಿಸಲಾಗುತ್ತಿದೆ. ಸಾಂಬಾರ ತಯಾರಿಸುವಾಗ ಹೇರಳವಾಗಿ ವಿಟಾಮಿನ್-ಎ ಹೊಂದಿರುವ ನುಗ್ಗೆ ಸೊಪ್ಪನ್ನು ಬಳಸಲು ಸಿಇಒ ಸಂಬಂಧಿಸಿದವರಿಗೆ ಸೂಚನೆ ಕೂಡ ನೀಡಿದ್ದು, ಆಹಾರದಲ್ಲಿ ಎಲ್ಲ ಹಂತದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಲಹೆ ಮಾಡಿದ್ದಾಗಿ ತಿಳಿಸಿದರು.

ಈ ನೂತನ ಯೋಜನೆ ಅನುಷ್ಠಾನದಲ್ಲಿ ಶಾಲಾ ಸಿಬ್ಬಂದಿ ಪಾತ್ರ ಬಹು ಮುಖ್ಯವಾಗಿದೆ. ವಿಭಿನ್ನ ರೀತಿಯ ಆಹಾರ ನೀಡಿಕೆಯಿಂದ ಮಕ್ಕಳಲ್ಲೂ ಸಾಕಷ್ಟು ಉತ್ಸಾಹ ಕಂಡು ಬರಲಿದ್ದು, ಕಲಿಕೆಗೆ ಹೆಚ್ಚು ಪೂರಕವಾಗಲಿದೆ ಎನ್ನುವುದು ಜಿಪಂ. ಸಿಇಒ ಗಂಗೂಬಾಯಿ ಮಾನಕರ್ ಅವರ ಅಭಿಪ್ರಾಯ. ನೂತನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಿಬ್ಬಂದಿ ಎಷ್ಟರ ಮಟ್ಟಿಗೆ ಸಾಥ್ ನೀಡಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ!

- ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com