ಸಭೆ ವೇಳೆ ವಿಧಾನಸೌಧದಲ್ಲಿ ದುರ್ನಾತ: ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡ ಸಿಎಂ

ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮುಖ್ಯ ಸಭೆ ನಡೆಸುವ ವೇಳೆ ದುರ್ನಾತ ಬಂದ ಪರಿಣಾಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡು ಸಭಯನ್ನು ಸ್ಥಳಾಂತರ ಮಾಡಿರುವ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮುಖ್ಯ ಸಭೆ ನಡೆಸುವ ವೇಳೆ ದುರ್ನಾತ ಬಂದ ಪರಿಣಾಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡು ಸಭಯನ್ನು ಸ್ಥಳಾಂತರ ಮಾಡಿರುವ ಘಟನೆ ನಡೆದಿದೆ. 

ವಿಧಾನಸೌಧದ ಕೆಲವು ಕಡೆಗಳಲ್ಲಿ ಮುರಿದು ಹೋದ ಕುರ್ಚಿ, ಮೇಜುಗಳು, ಕಸ ಕಡ್ಡಿಗಳ ರಾಶಿ ಸಾಮಾನ್ಯವಾಗಿರುತ್ತದೆ. ಸಚಿವರು, ಉನ್ನತಾಧಿಕಾರಿಗಳು ಇತ್ತ ಗಮಹರಿಸುವುದೂ ಕೂಡ ಕಡಿಮೆ. ಆದರೆ, ನಿತ್ಯವೂ ಮಹತ್ವದ ಸಭೆ ನಡೆಯುವ ಸಮಿತಿ ಸಭಾಂಗಣದತ್ತವೂ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವುದು ಮುಖ್ಯಮಂತ್ರಿಗಳ ಕೋಪಕ್ಕೆ ಕಾರಣವಾಗಿದೆ. 

ಸಭಾಂಗಣದಲ್ಲಿ ಸರಣಿ ಸಭೆಯನ್ನು ಆಯೋಜಿಸಲಾಗಿದ್ದು, ಯಡಿಯೂರಪ್ಪ ಅವರು ಸಭೆಯಲ್ಲಿ ಭಾಗವಹಿಸಲು ಕೊಠಡಿಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಗಬ್ಬು ವಾಸರನೆ ಮೂಗಿಗೆ ರಾಚಿದೆ. ಅದರಿಂದ ಕೆಂಡಾಮಂಡಲಗೊಂಡ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸಭೆಯನ್ನು ತಮ್ಮ ಕಚೇರಿಗೆ ಸ್ಥಳಾಂತರಿಸಿದ್ದಾರೆ. 

ಸಮತಿಯ ಸಭಾಂಗಣ 313 ರಲ್ಲಿ ಸೋಮವಾರ ಬೆಳಿಗ್ಗೆ ಸರಣಿ ಸಭೆಗಳು ನಿಗದಿಯಾಗಿದ್ದವು. ಭಾರತದ ಇರಾನ್ ರಾಯಭಾರಿಯೊಂದಿಗೆ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಚರ್ಚೆ ನಡೆಸಲು ಸಭಾಂಗಣಕ್ಕೆ ಆಗಮಿಸಿದ್ದರು. ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆಯೇ ಕೆಟ್ಟ ವಾಸನೆ ಬಂದಿದೆ. ಈ ವೇಳೆ ಸಿಎಂ ಕೆಂಡಾಮಂಡಲಗೊಂಡು ಸಭೆಯನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ, ಕೆಟ್ಟ ವಾಸನೆ ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಅಧಿಕಾರಿಗಳಿಗೆ ತಿಳಿದಿರಲಿಲ್ಲ. ಆರಂಭದಲ್ಲಿ ಇಲಿಗಳಿಂದಾಗಿ ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಸತ್ತ 6 ಪಾರಿವಾಳಗಳಿಂದ ವಾಸನೆ ಬರುತ್ತಿದೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ. 

ನಡೆದ ಘಟನೆಯಿಂದ ಮುಖ್ಯಮಂತ್ರಿಗಳು ಕೆಂಡಾಮಂಡಲಗೊಂಡಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ವಾಸನೆ ಬರುತ್ತಿದ್ದ ಸ್ಥಳ ಪತ್ತೆಗೆ ಮುಂದಾಗಿದ್ದಾರೆ. ಇಡೀ ದಿನ ವಿಧಾನಸೌಧದ ಕಚೇರಿಗಳಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸಂಜೆ ವೇಳೆಗೆ ವಾಸನೆ ಬರುತ್ತಿರುವುದು ಎಲ್ಲಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ವಾಸನೆ ಇಳಿಗಳಿಂದಲ್ಲ, ಸತ್ತಿ ಬಿದ್ದಿದ್ದ 6 ಪಾರಿವಾಳಗಳಿಂದ ಎಂಬುದು ತಿಳಿದಿದೆ. 313 ಕೊಠಡಿಯ ಸಭಾಂಗಣಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಪಿಡಬ್ಲ್ಯೂಡಿ ಮರಗಳನ್ನು ತರಿಸಿಕೊಂಡಿದೆ. ಮರಗಳನ್ನು ಇರಿಸಿದ್ದ ಸ್ಥಳದಲ್ಲಿ ಪಾರಿವಾಳಗಳು ಸತ್ತು ಬಿದ್ದಿದ್ದು, ಇದರಿಂದ ದುರ್ನಾತ ಬರುತ್ತಿತ್ತು ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ. 

ವಿಧಾನಸೌಧ ಹಾಗೂ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಇಲಿಗಳ ಕಾಟ ಕೂಡ ಹೆಚ್ಚಾಗಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಬಿಲ್ಡಿಂಗ್ ನಲ್ಲಿ ಇಲಿಗಳನ್ನು ಹಿಡಿಯಲು ರಾಜ್ಯ ಈಗಾಗಲೇ ಟೆಂಡರ್ ಕೂಡ ಕರೆದಿದೆ. ಇದಕ್ಕಾಗಿ ಸರ್ಕಾರ ರೂ.9 ಲಕ್ಷ ಖರ್ಚು ಮಾಡುತ್ತಿದೆ. ಕೆಲ ಪ್ರಮುಖ ಫೈಲ್ ಹಾಗೂ ದಾಖಲೆಗಳನ್ನು ಈ ಇಲಿಗಳು ನಾಶಪಡಿಸುತ್ತಿರುವುದರಿಂದ ಸರ್ಕಾರ ಇಂತಹ ಕಾರ್ಯಗಳನ್ನು ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com