ಹಾಜರಿ ಪುಸ್ತಕಕ್ಕೆ ಸಹಿ ಮಾಡದೆ ಬೇಜಾಬ್ದಾರಿತನ: ಅಧಿಕಾರಿಗಳ ವೇತನಕ್ಕೆ ಕತ್ತರಿ ಹಾಕಿದ ಮೇಯರ್!
ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದೆ ಬೇಜವಾಬ್ದಾರಿತನ ವರ್ತನೆ ಪ್ರದರ್ಶಿಸಿದ ಪಾಲಿಕೆಯ ಬೃಹತ್ ನೀರುಗಾಲುವೆ ಮುಖ್ಯ ಎಂಜಿನಿಯರ್ ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿಯ ಒಂದು ವಾರದ ವೇತನಕ್ಕೆ ಕಡಿತಗೊಳಿಸುವಂತೆ ಮೇಯರ್ ಗೌತಮ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Published: 17th October 2019 10:55 AM | Last Updated: 17th October 2019 10:55 AM | A+A A-

ಬಿಬಿಎಂಪಿ ಮೇಯರ್
ಬೆಂಗಳೂರು: ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದೆ ಬೇಜವಾಬ್ದಾರಿತನ ವರ್ತನೆ ಪ್ರದರ್ಶಿಸಿದ ಪಾಲಿಕೆಯ ಬೃಹತ್ ನೀರುಗಾಲುವೆ ಮುಖ್ಯ ಎಂಜಿನಿಯರ್ ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿಯ ಒಂದು ವಾರದ ವೇತನಕ್ಕೆ ಕಡಿತಗೊಳಿಸುವಂತೆ ಮೇಯರ್ ಗೌತಮ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿನ್ನೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್'ನ ಆವರಣದಲ್ಲಿರುವ ಪಾಲಿಕೆ ಬೃಹತ್ ನೀರುಗಾಲುವೆ ಕಚೇರಿ ಸೇರಿದಂತೆ ಇನ್ನಿತರ ಕಚೇರಿಗಳಿಗೆ ಮೇಯರ್ ಗೌತಮ್ ಕುಮಾರ್ ಅವರು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದರು.
ಈ ವೇಳೆ ಪಾಲಿಕೆಯ ಬೃಹತ್ ನೀರುಗಾಲುವೆಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿ ಅ.1ರಿಂದ ಈವರೆಗೆ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ ಅಧಿಕಾರಿ, ಸಿಬ್ಬಂದಿಯ ಒಂದು ವಾರದ ವೇತನ ಕಡಿತಗೊಳಿಸುವಂತೆ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಲೋಕೇಶ್ ಅವರಿಗೆ ಸೂಚನೆ ನೀಡಿದರು.
ಇನ್ನು ಅಧಿಕಾರಿ, ಸಿಬ್ಬಂದಿ ಕಚೇರಿ ಕೆಲಸದ ಮೇಲೆ ಬೇರೆಡೆಗೆ ಹೋಗುವ ವೇಳೆ ತೆರಳುವ ಮಾಹಿತಿ ದಾಖಲು ಮಾಡಬೇಕು. ಆದರೆ, ಯಾವುದೇ ಅಧಿಕಾರಿ, ಸಿಬ್ಬಂದಿಗಳೂ ಮಾಹಿತಿ ದಾಖಲು ಮಾಡದಿರುವುದಕ್ಕೆ ಮೇಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಂದಾಯ ಹಾಗೂ ಮಾರುಕಟ್ಟೆ ವಿಭಾಗ, ಆರೋಗ್ಯಾಧಿಕಾರಿ ಕಚೇರಿಯ ಅಧಿಕಾರಿ ಸಿಬ್ಬಂದಿ ಪೈಕಿ ಬಹುತೇಕರು ಸಹಿ ಮಾಡದೇ ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಗೈರು ಹಾಜರಾಗಿರುವವರಿಗೆ ಶೋಕಾಸ್ ನೋಟಿಸ್ ಜಾರಿಗೆ ಸೂಚಿಸಿದರು.
ಜಯನಗರ ಶಾಪಿಂಗ್ ಮುಂಭಾಗ ಕಸದ ರಾಶಿ ಬಿದ್ದಿರುವುದನ್ನು ಕಂಡು ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಾಂಪ್ಲೆಕ್ಸ್ ಆವರಣದ ಸುತ್ತಲು ಸ್ವಚ್ಛೆ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಿ. ಸ್ವಚ್ಛತೆ ಕಾಪಾಡದ ವ್ಯಾಪಾರಿಗಳಿಗೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಉಪ ಮೇಯರ್ ರಾಮ್ ಮೋಹನ್ ರಾಜು, ಪಾಲಿಕೆ ಸದಸ್ಯ ಎನ್.ನಾಗರಾಜು ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.