ಸಹೋದರರ ನಡುವೆ ಇದ್ದ ವೈಷಮ್ಯವೇ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ!

ಅಲಯನ್ಸ್ ವಿಶ್ವವಿದ್ಯಾಲಯದ ಆಡಳಿತ ಚುಕ್ಕಾೇಣಿ ಹಿಡಿಯುವ ಕುರಿತು ಸಹೋದರರ ನಡುವೆ ಇದ್ದ ಹಲವು ವರ್ಷಗಳ ವೈಷ್ಯಮವೇ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.  
ಅಯ್ಯಪ್ಪ ದೊರೆ
ಅಯ್ಯಪ್ಪ ದೊರೆ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಆಡಳಿತ ಚುಕ್ಕಾೇಣಿ ಹಿಡಿಯುವ ಕುರಿತು ಸಹೋದರರ ನಡುವೆ ಇದ್ದ ಹಲವು ವರ್ಷಗಳ ವೈಷ್ಯಮವೇ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.  

ಅಯ್ಯಪ್ಪ ದೊರೆ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ಹಾಲಿ ಕುಲಪತಿ ಸುಧೀರ್ ಅಂಗೂರ್ (57) ಹಾಗೂ ನೌಕರ ಸೂರಜ್ ಸಿಂಗ್ (29) ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
 
ಅಯ್ಯಪ್ಪ ದೊರೆ ಅವರನ್ನು ಆರ್'ಟಿ ನಗರದಲ್ಲಿ ಕಳೆದ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಂತಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. 

ಸುಧೀರ್ ಅಂಗೂರ್ ಹಾಗೂ ಸಹೋದರ ಮಧುಕರ್ ಅಂಗೂರ್ ನಡುವೆ ಕಿತ್ತಾಟ ಶುರುವಾಗಿದ್ದು, ಕಿತ್ತಾಟದ ಮಧ್ಯೆ ಪ್ರವೇಶ ಮಾಡಿದ್ದಕ್ಕೆ ಅಯ್ಯಪ್ಪ ದೊರೆ ಅವರ ಹತ್ಯೆ ಮಾಡಲಾಗಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. 

ರೂ.1,500 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ವಿಶ್ವವಿದ್ಯಾಲಯದ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಆರೋಪಿ ಸುಧೀರ್ ಹಾಗೂ ಆತನ ಅಣ್ಣ ಮಧುಕರ್ ಅಂಗೂರ್ ನಡುವೆ ವ್ಯಾಜ್ಯವಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೊಲೆಯಾದ ಅಯ್ಯಪ್ಪ ಅವರು ಮಧುಕರ್ ಅವರ ಪರವಿದ್ದರು. ಎಲ್ಲಾ ಬಗೆಯ ಸಹಾಯ ಮಾಡುತ್ತಿದ್ದರು. ಇದೇ ಕಾರಣಕ್ಕೆ ಸುಧೀರ್, ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಸೂರಜ್ ಮೂಲಕ ಅಯ್ಯಪ್ಪ ಅವರ ಹತ್ಯೆ ಮಾಡಿದ್ದಾನೆ. ಬಳಿಕ ಮಧುಕರ್ ಅವರನ್ನೂ ಕೊಲ್ಲಲೂ ಸಂಚು ರೂಪಿಸಿದ್ದಾರೆ. 

ಆಯ್ಯಪ್ಪ ಹಾಗೂ ಮಧುಕರ್ ಇಬ್ಬರನ್ನೂ ಹತ್ಯೆ ಮಾಡಲು ಸುಧೀರ್ ರೂ.1 ಕೋಟಿ ಸೂಪಾರಿ ನೀಡಿದ್ದು, ಈ ಸಂಬಂಧ ರೂ.20 ಲಕ್ಷ ಮುಂಗಡವಾಗಿಯೇ ಪಾವತಿ ಮಾಡಿದ್ದಾನೆ. ಅಯ್ಯಪ್ಪ ದೊರೆ ಅವರನ್ನು ಹತ್ಯೆ ಮಾಡಲು ಹಂತಕರು ಬರೋಬ್ಬರಿ 3 ತಿಂಗಳಿನಿಂದ ಹಿಂಬಾಲಿಸಿದ್ದು, ಹತ್ಯೆ ಮಾಡಿದ ಬಳಿಕ ಅಲಯನ್ಸ್ ವಿವಿ ಹಾಲಿ ಕುಲಪತಿ, ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್ ನಿವಾಸದಲ್ಲಿ ರಾತ್ರಿ ಇಡೀ ಪಾರ್ಟಿ ಮಾಡಿ, ಸುಧೀರ್ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. 

ಮೂರು ತಿಂಗಳಿಂದ ಅಯ್ಯಪ್ಪ ದೊರೆ ಹಿಂಬಾಲಿಸಿದ್ದ ವಿವಿಯ ನೌಕರ ಸೂರಜ್ ನೈತೃತ್ವದ ಹಂತಕ ತಂಡಕ್ಕೆ, ಪ್ರತೀನಿತ್ಯ ರಾತ್ರಿ ಊಟ ಮಾಡಿದ ಬಳಿಕ ಅಯ್ಯಪ್ಪ ದೊರೆಯವರು ವಾಯು ವಿಹಾರಕ್ಕೆ ಬರುವುದು ತಿಳಿದಿತ್ತು. ಈ ವೇಳೆಯಲ್ಲೇ ಹತ್ಯೆ ನಡೆಸಲು ಹೊಂಚು ಹಾಕಿದ್ದರು. ಇದರಂತೆ ಮಂಗಳವಾರ ಬೆಳಿಗ್ಗೆಯಿಂದಲೇ ಬೆನ್ನು ಬಿದ್ದಿದ್ದರು. ಅಯ್ಯಪ್ಪ ಅವರು ಅರಣ್ಯ ಇಲಾಖೆ ವಸಹಿ ಗೃಹ, ಜಯನಗರದಲ್ಲಿ ಸ್ನೇಹಿತರನ್ನು ಭೇಟಿಯಾಗಿ ರಾತ್ರಿ 8ಗಂಟೆ ಸುಮಾರಿಗೆ ಮನೆಗೆ ಮರಳಿದ್ದರು. 

ಇತ್ತ ಅವರ ಮನೆ ಮುಂದೆಯೇ ರಾತ್ರಿ ಎರಡು ಬೈಕ್'ಗಳಲ್ಲಿ ಸೂರಜ್ ತಂಡ ಕಾಯುತ್ತಿತ್ತು. ಆದರೆ, ರಾತ್ರಿ 10.20ರವೇಳಿಗೆ ಮನೆಯಲ್ಲಿದ್ದ ಲೈಟ್'ಗಳು ಆಫ್ ಆದ ಆರೋಪಿಗಳು ಬೇಸರದಿಂದ ಹೊರಡು ಮುಂದಾಗಿದ್ದರು. ಆಷ್ಟರಲ್ಲಿ ಅಯ್ಯಪ್ಪ ಅವರು ವಾಯು ವಿಹಾರಕ್ಕೆಂದು ಹೊರಗೆ ಬಂದಿದ್ದಾರೆ. ಇದಾದ 5 ನಿಮಿಷಗಳಲ್ಲಿಯೇ ಹೆಚ್ಎಂಟಿ ಮೈದಾನದ ಬಳಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಯ್ಯಪ್ಪ ಅವರ ದೇಹದ ಮೇಲೆ 18 ಚೂರಿ ಇರಿತದ ಗಾಯಗಳು ಪತ್ತೆಯಾಗಿವೆ. 

ಹತ್ಯೆ ಬಳಿಕ ಸೂರಜ್ ನೇರವಾಗಿ ಬಿಟಿಎಂ ಲೇಔಟ್ ನಲ್ಲಿರುವ ಅಲಯನ್ಸ್ ವಿವಿಯ ಕುಲಪತಿ ಸುಧೀರ್ ಮನೆಗೆ ತೆರಳಿದ್ದಾನೆ. ಅಂದುಕೊಂಡಂತೆ ಒಂದು ಕೆಲಸವಾಯಿತು. ಮತ್ತೊಂದು ಮುಗಿಸಿ ಬಿಡಿ ಎಂದು ಸುಧೀರ್ ಅಪ್ಪಣೆ ಕೊಟ್ಟಿದ್ದಾನೆ. ಕುಲಪತಿಗಳ ಮನೆಯಲ್ಲಿಯೇ ರಾತ್ರಿ 11.30ರಿಂದ ಮುಂಜಾನೆ 4.30ರವರೆಗೆ ಸೂರಜ್ ಇದ್ದ. ಅಲ್ಲದೆ, ಹತ್ಯೆಯಿಂದ ಖುಷಿಗೊಂಡಿದ್ದ ಆತ, ಸುಧೀರ್ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಪಾರ್ಟಿ ಮಾಡಿದ್ದ. ಬಳಿಕ ಹೋಟೆಲ್ಗೆ ಬಂದು ಸೂರಜ್ ಜೊತೆ ತಂಗಿದ್ದ. ಇತ್ತ ಮಧುಕರ್ ಅಂಗೂರ್ ಮನೆ ಬಳಿ ಹತ್ಯೆಗೂ ಸಂಚು ರೂಪಿಸಲಾಗಿತ್ತು. ಅಷ್ಟರಲ್ಲಿ ಮಧುಕರ್ ಮನೆಗೆ ತೆರಳಿದ ಪೊಲೀಸರು ರಕ್ಷಣೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com