ಶಿರಸಿ: ಅರಣ್ಯ ಅಧಿಕಾರಿಗಳ ಕರ್ತವ್ಯ ಲೋಪ; ನಾಶವಾದ ಬಿದಿರು, ಸರ್ಕಾರದ ಬೊಕ್ಕಸಕ್ಕೆ ನಷ್ಟ

ಬಡವರ ಬಂಧು ಹಾಗೂ ಸರ್ಕಾರ ಆರ್ಥಿಕ ಧ್ವನಿ ಎಂದೇ ಖ್ಯಾತವಾದ ಬಿದಿರು (ಬಾಂಬು) ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿದಿರು ನಿರ್ವಹಣೆ ಪಾಲನೆ ಮತ್ತು ಸಂರಕ್ಷಣೆಯಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಕರ್ತವ್ಯ ಚ್ಯುತಿ ಲೋಪದಿಂದ ಬಿದಿರಿನ ಉತ್ಪನ್ನದಲ್ಲಿನ ಸರ್ಕಾರಕ್ಕೆ ಬರುವ ಸುಮಾರು 3೦೦ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿರಸಿ: ಬಡವರ ಬಂಧು ಹಾಗೂ ಸರ್ಕಾರ ಆರ್ಥಿಕ ಧ್ವನಿ ಎಂದೇ ಖ್ಯಾತವಾದ ಬಿದಿರು (ಬಾಂಬು) ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿದಿರು ನಿರ್ವಹಣೆ ಪಾಲನೆ ಮತ್ತು ಸಂರಕ್ಷಣೆಯಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಕರ್ತವ್ಯ ಚ್ಯುತಿ ಲೋಪದಿಂದ ಬಿದಿರಿನ ಉತ್ಪನ್ನದಲ್ಲಿನ ಸರ್ಕಾರಕ್ಕೆ ಬರುವ ಸುಮಾರು 300 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಸದರಿ ನಷ್ಟವನ್ನು ಸಂಬಂಧಿಸಿದ ಅರಣ್ಯ ಅಧಿಕಾರಿಗಳಿಂದಲೇ ಭರಿಸುವ ಕಾರ್ಯ ಜರುಗಿಸಬೇಕು ಎಂದು ಸಾರ್ವಜನಿಕವಾಗಿ ಮುಖ್ಯಮಂತ್ರಿಗಳ ಬಳಿ ಒತ್ತಾಯಿಸಲಾಗಿದೆ.

ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಸಂಪೂರ್ಣ ಬಿದಿರಿನ ನಷ್ಟಕ್ಕೆ ಉಂಟಾದ ಅರಣ್ಯಾಧಿಕಾರಿಗಳ ಕರ್ತವ್ಯ ಚ್ಯುತಿ ಅಂಶವನ್ನು ಬಿಡುಗಡೆಗೊಳಿಸಿ ಈ ಆಗ್ರಹ ಮಾಡಿದರು.

ಜಿಲ್ಲೆಯಲ್ಲಿ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯುತ್ತಿದ್ದು ೨೦೧೭-೧೮ನೇ ಸಾಲಿನಲ್ಲಿ ಬಿದಿರುಗಳಿಗೆ ರೋಗ ಅಂಟಿಕೊಂಡಿರುವ ಹಿನ್ನೆಲೆಯಲ್ಲಿ 2019ನೇ ಸಾಲಿನ ಬೇಸಿಗೆಯಲ್ಲಿ ಸಂಪೂರ್ಣವಾಗಿ ಬಿದಿರು ಒಣಗಿದ್ದವು. ಒಣಗಿರುವ ಬಿದಿರು ತೆರವು ಅರ್ಥಾತ್ ಕಟಾವು ಮಾಡದೇ ಇರುವುದರಿಂದ ಬೇಸಿಗೆಯಲ್ಲಿ ಬಿದಿರಿಗೆ ಬೆಂಕಿ ತಗುಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಪಸರಿಸಿರುವುದರಿಂದ ಕೋಟ್ಯಾಂತರ ಬೆಲೆಯ ಗಿಡ-ಮರ ಬೆಂಕಿಯಿಂದ ನಷ್ಟ ಉಂಟಾಗಿದ್ದವು. ಅಲ್ಲದೇ, ಮಳೆಗಾಲದಲ್ಲಿ ಹೊಳೆ ಅಂಚಿನಲ್ಲಿ ಬಿದ್ದಿರುವ ಬಿದಿರು ಅತಿವೃಷ್ಟಿಗೆ ಕಾರಣದಿಂದ ಹೊಳೆಯ ನೀರಿನಲ್ಲಿ ತೇಲಿಬಂದು ಅನೇಕ ಫುಟ್ ಬ್ರಿಡ್ಜ, ಚಿಕ್ಕ ಮತ್ತು ದೊಡ್ಡ ಸೇತುವೆಗೆ ಬಿದಿರು ಒತ್ತಿರುವುದರಿಂದ ಸೇತುವೆ ಅಡಿಯಲ್ಲಿ ನೀರು ಹರಿಯದಂತೆ ಅಡೆ ತಡೆ ಉಂಟಾಗಿ ಸೇತುವೆ ಮೇಲಿಂದ ಹಾಗೂ ಹೊರಮೈಯಲ್ಲಿ ನೀರು ಹರಿದು ಹೊಳೆ ಅಕ್ಕಪಕ್ಕದ ಬೇಸಾಯದ ಬೆಳೆ ಕೊಚ್ಚಿ ಹೋಗಿ ಸೇತುವೆಯು ಸಹಿತ ದುರ್ಬಲವಾಗಿದ್ದವು. ಒಣಗಿರುವ ಬಿದಿರು ಕಟಾವು ಮಾಡದೇ ಇರುವುದರಿಂದ ಅತಿವೃಷ್ಟಿಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅರಣ್ಯಾಧಿಕಾರಿಗಳು ಸಮಯ ಪ್ರಜ್ಞೆ ಮತ್ತು ಕರ್ತವ್ಯ ಚುತಿಯಿಂದ ಅತಿವೃಷ್ಟಿ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣಿಕರ್ತರಾಗಿದ್ದಾರೆ ಎಂದು ವಿಶ್ಲೇಷಿಸಿದರು.

ಬಡವರಿಗೆ ಮನೆ, ಬೇಲಿ, ಕೃಷಿ ಚಟುವಟಿಕೆಗೆ ಬಿದಿರು ಬಳಕೆ ಆಗದೇ ಹ್ಯಾಂಡಿಕ್ರಾಪ್ಟ್, ಫರ್ನಿಚರ್, ಮ್ಯೂಜಿಕಲ್ ಸಲಕರಣೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕಾಗದ ತಯಾರಿಕೆಗೆ ಜಿಲ್ಲೆಯಲ್ಲಿ ಪ್ರತಿ ಲಾರಿಗೆ ಬಿದಿರಿನ ಮೊತ್ತ ಅಂದಾಜು 60 ಸಾವಿರದಂತೆ ಪ್ರತಿ ವರ್ಷ 600-700 ತುಂಬಿದ ಲಾರಿ ಜಿಲ್ಲೆಯಿಂದ ಸಾಗಣಿಕೆ ಆಗುತ್ತಿದ್ದವು. ಇಂದು ಜಿಲ್ಲೆಯಲ್ಲಿ ಬಿದಿರು ವ್ಯವಹಾರ ಮತ್ತು ಸಾಗಾಟ ನಿಶ್ಯಬ್ದವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಹೊಸ ಬಿದಿರಿನ ಸಂತತಿಗೆ 7-8 ವರ್ಷ ಕಾಯುವ ಪ್ರಸಂಗ ಬಂದೊದಗಿದೆ.

ಪ್ರಪಂಚದಲ್ಲಿ ಚೀನಾದ ನಂತರ ಭಾರತದಲ್ಲಿ ಅತೀ ಹೆಚ್ಚು ಬಿದಿರು ಬೆಳೆಯುವ ದೇಶವಾಗಿರುವ ಹಿನ್ನೆಲೆಯಲ್ಲಿ ದೇಶದ ಉತ್ಕೃಷ್ಟ 136 ವಿವಿಧ ಜಾತಿಯ ಬಿದಿರುಗಳಲ್ಲಿ ಉ.ಕ. ಜಿಲ್ಲೆಯಲ್ಲಿ ಕಾಡು, ಸಾವೆ, ಕಿರು, ವಾಟೆ, ಅಂಡಬಂಡ ಬಣ್ಣದ ವಿವಿಧ ರೀತಿಯ ವೈಶಿಷ್ಟ್ಯಮಯವಾದ ಬಿದಿರು ರಾಜ್ಯದಲ್ಲಿಯೇ ಶ್ರೇಷ್ಠ ಮಟ್ಟದ ಬಿದಿರಾಗಿದ್ದು ರೋಗ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಉತ್ಪನ್ನದ ಹಿನ್ನೆಲೆಯಲ್ಲಿ ತಕ್ಷಣ ಕಟಾವು ಮಾಡಿದ್ದಲ್ಲಿ 300 ಕೋಟಿ ರುಪಾಯಿಗಿಂತ ಹೆಚ್ಚಿನ ಮೌಲ್ಯ ಸರ್ಕಾರಕ್ಕೆ ಜಮಾ ಆಗುತ್ತಿತ್ತು. ಅಲ್ಲದೇ ಒಣಗಿದ ಬಿದಿರಿನಿಂದ ಅತಿವೃಷ್ಟಿಯಲ್ಲಿ ಉಂಟಾಗಿರುವ ನಷ್ಟದ ಪ್ರಮಾಣದಲ್ಲಿ ಕಡಿಮೆಯಾಗುತ್ತಿತ್ತು. ಸಂಪೂರ್ಣವಾಗಿ ಬಿದಿರು ಸಂತತಿ ನಾಶವಾಗಿದ್ದು ಮುಂದಿನ ಪೀಳಿಗೆಗೆ ಬಿದಿರಿನ ಉತ್ಪನ್ನವಾಗಲು ಕನಿಷ್ಠ 7-8 ವರ್ಷ ಕಾಯಬೇಕಾಗಿರುವುದು ಅನಿವಾರ್ಯವಾಗಿದೆ ಹಾಗೂ ಮುಂದಿನ ೭-೮ ವರ್ಷ ಪ್ರತಿ ವರ್ಷಕ್ಕೆ ಬರುವ ಬಿದಿರಿನ ಉತ್ಪನ್ನಕ್ಕೆ ಕಡಿವಾಣವಾಗಿದೆ.

ಶಿರಸಿ ತಾಲೂಕಿನ ಬಚಗಾಂವ ಗ್ರಾಮದ ೨೦ ಹೆ. ಪ್ರದೇಶದ ಅರಣ್ಯದಲ್ಲಿನ ಅಕೇಶ ಗಿಡ, ಕುಳುವೆ ಗ್ರಾಮದ 10 ಹೆಕ್ಟೇರ್ ಪ್ರದೇಶದ ಅಕೇಶಿಯಾ ಪ್ಲಾಂಟೇಶನ್‌ಗೆ ಬಿದಿರಿನಿಂದ ಹತ್ತಿಕೊಂಡ ಬೆಂಕಿಯಿಂದ ನಾಶವಾಗಿದ್ದು, ಬೆಂಕಿಯಿಂದಾಗಿ ಕೋಟ್ಯಾಂತರ ಬೆಲೆಯ ಅರಣ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡ ಮರ ನಾಶವಾಗಿರುವುದು ಖೇದಕರ ಎಂದ ಹೇಳಿದ್ದಾರೆ.

ರಾಷ್ಟ್ರೀಯ ಬಿದಿರು (ಬಾಂಬು) ಮಿಷನ್-2006 ರಂತೆ ಬಿದಿರು ರಕ್ಷಣೆ, ನಿರ್ವಹಣೆ ಮತ್ತು ಪೋಷಣೆಯಲ್ಲಿ ತೋರಿಸಬೇಕಾದ ಆಸಕ್ತಿಗಿಂತ ಅರಣ್ಯ ಅತಿಕ್ರಮಣದಾರರ ಸಾಗುವಳಿಗೆ ಆತಂಕ ಮಾಡುವುದರಲ್ಲಿ ಅರಣ್ಯಾಧಿಕಾರಿ ಗಳಿಗೆ ಹೆಚ್ಚಿನ ಆಸಕ್ತಿ ಇರುವುದು ವಿಷಾದಕರ. ನಷ್ಟಕ್ಕೆ ಕಾರಣವಾಗಿರುವ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸುವುದಲ್ಲದೇ ಉಂಟಾದ ನಷ್ಟ ಭರಿಸುವ ಜವಾಬ್ದಾರಿ ಅರಣ್ಯಾಧಿಕಾರಿಗಳಿಂದ ವಸೂಲಿ ಮಾಡುವುದು ಅತೀ ಅವಶ್ಯವೆಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
 

- ಹೆಚ್.ಕೆ.ಪಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com