ನೀರು ಬಿಡದ ನಿಷ್ಕರುಣಿ 'ಮಹಾ'ಗೆ ಕರುಣೆ ತೋರಿದ ಬಿಎಸ್‍ವೈ: ವ್ಯಾಪಕ ಅಸಮಾಧಾನ

ನದಿ ಬತ್ತಿ ಹೋಗಿದೆ. ನಮಗೊಂದಿಷ್ಟು ಕುಡಿಯಲು ನೀರನ್ನು ನಿಮ್ಮ ಜಲಾಶಯದಿಂದ ಹರಿಸಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಹನಿ ನೀರು ಬಿಡದೆ ಸತಾಯಿಸಿದ ನಿಷ್ಕರುಣಿ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರುಣೆ ತೋರಿ ನೀರು ಬಿಡಲು ಹೊರಟಿದ್ದಾರೆ. 
ನೀರು ಬಿಡದ ನಿಷ್ಕರುಣಿ 'ಮಹಾ'ಗೆ ಕರುಣೆ ತೋರಿದ ಬಿಎಸ್‍ವೈ: ವ್ಯಾಪಕ ಅಸಮಾಧಾನ

ಬಾಗಲಕೋಟೆ: ನದಿ ಬತ್ತಿ ಹೋಗಿದೆ. ನಮಗೊಂದಿಷ್ಟು ಕುಡಿಯಲು ನೀರನ್ನು ನಿಮ್ಮ ಜಲಾಶಯದಿಂದ ಹರಿಸಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಹನಿ ನೀರು ಬಿಡದೆ ಸತಾಯಿಸಿದ ನಿಷ್ಕರುಣಿ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರುಣೆ ತೋರಿ ನೀರು ಬಿಡಲು ಹೊರಟಿದ್ದಾರೆ. 

ರಾಜ್ಯದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಗ್ರಾಮಗಳಿಗೆ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನಾ ಪ್ರದೇಶದಿಂದ ನೀರು ಬಿಡುವುದಾಗಿ ಮಹಾ ಚುನಾವಣೆ ಪ್ರಚಾರದಲ್ಲಿ ಭರವಸೆ ನೀಡಿರುವುದು ಅಚ್ಚರಿ ಸಂಗತಿ. ಗಡಿ ಭಾಗದಲ್ಲಿನ ಗ್ರಾಮಗಳ ಜನತೆ ಮತಬ್ಯಾಂಕ್‍ನ್ನು ಬಿಜೆಪಿಯತ್ತ ಸೆಳೆಯುವ ರಾಜಕೀಯ ಉದ್ದೇಶದಿಂದ ಬಿಎಸ್‍ವೈ ನೀರು ಬಿಡುವ ಭರವಸೆ ನೀಡಿರುವುದು ರಾಜ್ಯದ ಗಡಿ ಭಾಗದ ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ.


ಕೃಷ್ಣಾ ನದಿ ಕಳೆದ ಬೇಸಿಗೆ ಆರಂಭದಲ್ಲೇ ಬತ್ತಿ ಬರಿದಾಗಿತ್ತು. ಇದರಿಂದಾಗಿ ನದಿ ತೀರದಲ್ಲಿ ಬರುವ ತೇರದಾಳ, ರಬಕವಿ- ಬನಹಟ್ಟಿ, ಮಹಾಲಿಂಗಪುರ, ಜಮಖಂಡಿ ಸೇರಿದಂತೆ ನೂರಾರು ಗ್ರಾಮಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಉಂಟಾಗಿತ್ತು. ಆಗ ಕರ್ನಾಟಕ ಸರ್ಕಾರ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ನಿಯೋಗದಲ್ಲಿ ಹೋಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಬಿಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಯಾರ ಮನವಿಗೂ ಮಹಾ ಸಿಎಂ ಫಢ್ನವಿಸ್ ಸ್ಪಂದಿಸದೆ ಭರವಸೆಯಲ್ಲೇ ಕಾಲ ಕಳೆದರು.

ಏತನ್ಮಧ್ಯೆ ನದಿ ತೀರದ ಜನತೆ ಬತ್ತಿದ ನದಿಯಲ್ಲೆ ಉಪವಾಸ ಸತ್ಯಾಗ್ರಹ ನಡೆಸಿದರೂ ಮಹಾ ಸರ್ಕಾರದ ಕಠಿಣ ಮನಸ್ಸು ಕರಗಲೇ ಇಲ್ಲ. ಇದೇ ವೇಳೆ ಮಹಾ ಸಿಎಂ ಮತ್ತೊಂದು ದಾಳ ಉರುಳಿಸಿ, ನೀವು ನಮಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟಲ್ಲಿ ನಾವು ನಿಮಗೆ ನೀರು ಬಿಡುತ್ತೇವೆ ಎನ್ನುವ ಷರತ್ತು ಮುಂದಿಟ್ಟರು. ಮಹಾ ಸಿಎಂ ಷರತ್ತಿಗೆ ಕರ್ನಾಟಕ ಒಪ್ಪಿಗೆ ನೀಡಿ ಪತ್ರ ಬರೆಯಿತು. ಪರಸ್ಪರ ನೀರು ಹಂಚಿಕೆಗೆ ಸಜ್ಜಾಯಿತಾದರೂ, ಬಳಿಕ ಆ ಬಗ್ಗೆ ಮಹಾ ಸಿಎಂ ಗಮನಹರಿಸಲೇ ಇಲ್ಲ.

ಬೇಸಿಗೆ ಮುಗಿದರೂ ನೀರು ಬಿಡುಗಡೆ ವಿಷಯದಲ್ಲಿ ಮಹಾ ಸಿಎಂ ಚೆಲ್ಲಾಟ ಮುಂದುವರಿದಾಗ ಬೇಸಿಗೆ ಮುಗಿದು ಮಳೆಗಾಲ ಆರಂಭಗೊಂಡಿತಾದರೂ ಕೃಷ್ಣಾ ನದಿಗೆ ಮಹಾ ಸರ್ಕಾರ ಹನಿ ನೀರು ಹರಿಸಲಿಲ್ಲ.

ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದ ಜನತೆ ಕುಡಿವ ನೀರಿನ ದಾಹ ತೀರಿಸಿಕೊಳ್ಳಲು ಅಂಗಾಲು ನೆಕ್ಕುವ ಪರಿಸ್ಥಿತಿ ನಿರ್ಮಾಣವಾಗಿದ್ದ ಬೆನ್ನಲ್ಲೇ ಮಳೆಗಾಲದ ಆರಂಭದಲ್ಲೇ ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಸುರಿಯಲಾರಂಭಿಸಿತು. ಮಹಾರಾಷ್ಟ್ರದಲ್ಲಿನ ಸತತ ಮಳೆಯಿಂದಾಗಿ ಕೃಷ್ಣೆ ಉಕ್ಕಿ ಹರಿಯಲಾರಂಭಿಸಿದ ಪರಿಣಾಮ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ನದಿ ತೀರದ ಗ್ರಾಮ ಮತ್ತು ಪಟ್ಟಣಗಳು ಪ್ರವಾಹದಿಂದ ತತ್ತರಿಸಿ ಹೋದವು. ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿ ಜನತೆಯ ಬದುಕು ಬೀದಿಗೆ ಬಿದ್ದಿದೆ. ಇಂದಿಗೂ ಪ್ರವಾಹ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿನ ಗ್ರಾಮಗಳ ಜನತೆಯ ಮತಬ್ಯಾಂಕ್‍ನ್ನು ಸೆಳೆಯಲು ನೀರು ಬಿಡುವ ಭರವಸೆ ನೀಡಿದ್ದಾರೆ. ಪರಸ್ಪರ ನೀರು ಬಿಡುಗಡೆ ಒಪ್ಪಂದದ ಪ್ರಸ್ತಾವನೆಗೆ ಬದ್ದವಾಗಿ ಉಳಿಯದ, ಕೊಡ ಕೊಳ್ಳುವಿಕೆಯ ಅರ್ಥವೇ ಗೊತ್ತಿಲ್ಲದ ಮಹಾರಾಷ್ಟ್ರಕ್ಕೆ ಅದ್ಯಾವ ನಂಬಿಕೆಯ ಮೇಲೆ ನೀರು ಬಿಡಲು ಮುಂದಾಗಿದ್ದಾರೋ ಗೊತ್ತಾಗುತ್ತಿಲ್ಲ. ಕೃಷ್ಣಾ ನದಿ ತೀರದಲ್ಲಿನ ಜನತೆಯ ಹಿತಾಸಕ್ತಿ ಬಲಿಕೊಟ್ಟು, ಮತಬ್ಯಾಂಕ್‍ಗಾಗಿ ಮಹಾರಾಷ್ಟ್ರಕ್ಕೆ ನೀರು ಬಿಡಲು ಮುಂದಾಗಿರುವುದು ದುರದೃಷ್ಟಕರ ಎನ್ನುವ ಮಾತು ನದಿ ತೀರದ ಜನರಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

- ವಿಠ್ಠಲ ಆರ್. ಬಲಕುಂದಿ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com