ಮಹದಾಯಿ ಪ್ರತಿಭಟನೆ: ಶೌಚಾಲಯಕ್ಕಾಗಿ 2 ತಾಸು ಕಾದ ಮಹಿಳೆಯರು

ಮಹಾದಾಯಿ ಯೋಜನೆ ಜಾರಿ ಸಂಬಂಧ ರಾಜ್ಯಪಾಲರು ತಮ್ಮನ್ನು ಭೇಟಿ ಮಾಡುತ್ತಾರೋ, ಇಲ್ಲವೋ ಎಂಬುದನ್ನು ಖುದ್ದಾಗಿ ಸ್ಪಷ್ಟಪಡಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಲು ರೈತರು ನಿರ್ಧರಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಮಹಿಳೆಯರು ಶೌಚಾಲಯಕ್ಕೆ ತೆರಳಲು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. 
ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ಬೆಂಗಳೂರು: ಮಹಾದಾಯಿ ಯೋಜನೆ ಜಾರಿ ಸಂಬಂಧ ರಾಜ್ಯಪಾಲರು ತಮ್ಮನ್ನು ಭೇಟಿ ಮಾಡುತ್ತಾರೋ, ಇಲ್ಲವೋ ಎಂಬುದನ್ನು ಖುದ್ದಾಗಿ ಸ್ಪಷ್ಟಪಡಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಲು ರೈತರು ನಿರ್ಧರಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಮಹಿಳೆಯರು ಶೌಚಾಲಯಕ್ಕೆ ತೆರಳಲು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. 

ಮಕ್ಕಳನ್ನು ಎತ್ತಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 400ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ರೀತಿಯ ಶೌಚಾಲಯಗಳ ವ್ಯವಸ್ಥೆಗಳಿರಲಿಲ್ಲ. ಹೀಗಾಗಿ ಶೌಚಾಲಯಕ್ಕೆ ತೆರಳಲು ಸಾಲಿನಲ್ಲಿ ನಿಂತು 2 ತಾಸುಗಳಿಗೂ ಹೆಚ್ಚು ಕಾಲ ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. 

ಕಳೆದೆರಡು ದಿನಗಳಿಂದ ರೈತರು ರೈಲ್ವೇ ನಿಲ್ದಾಣದಲ್ಲಿಯೇ ಹೋರಾಟ ಮಾಡುತ್ತಿದ್ದರೂ, ರಾಜ್ಯಪಾಲರ ಭೇಟಿ ಮಾತ್ರ ಸಾಧ್ಯವಾಗಿಲ್ಲ. ಭೇಟಿ ಬಗ್ಗೆ ಖುದ್ದು ರಾಜ್ಯಪಾಲರೇ ಸ್ಪಷ್ಟಪಡಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. 

ಎರಡನೇ ದಿನವೂ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸದ ಹಿನ್ನಲೆಯಲ್ಲಿ ಹೋರಾಟ ಮುಂದುವರೆಸಲಾಗಿದೆ. ಎರಡರಿಂದ ಮೂರು ಬಾರಿ ರಾಜ್ಯಪಾಲರ ಭೇಟಿಗೆ ಮುಂದಾದರೂ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಭೇಟಿ ಬಳಿಕವೇ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. 

ಪ್ರವಾಹದ ಪರಿಣಾಮ ನಮಗೆ ನೆಲೆಯೂರಲು ಸೂರು ಕೂಡ ಇಲ್ಲ. ರೈಲ್ವೇ ನಿಲ್ದಾಣದ ಹೊರಗೆ ಮಲಗುವುದು ಸರಿಯೇ ಎಂದು ಪ್ರತಿಭಟನಾನಿರತ ಮಹಿಳೆಯೊಬ್ಬರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. 

ಗದಗ ಜಿಲ್ಲೆಯ ನಿವಾಸಿ ರತ್ನವ್ವ ಮಾತನಾಡಿ, ಮಳೆ ಬಂದ ಹಿನ್ನಲೆಯಲ್ಲಿ ನಾವು ತಂದಿದ್ದ ಬಟ್ಟೆಗಳು, ಕಂಬಳಿಗಳು ಒದ್ದೆಯಾಗಿ ಹೋಗಿವೆ. ಕಾಲು, ಕೈ ಚಾಚಿಕೊಂಡು ಮಲಗುವ ಐಷಾರಾಮಿ ವ್ಯವಸ್ಥೆಗಳಿಲ್ಲ. ಓಡಾಟದಿಂದ ನಮಗೆ ಸಾಕಾಗಿ ಹೋಗಿದೆ. ಇಂತಹ ಎಷ್ಟು ರಾತ್ರಿಗಳು ಕಳೆಯಬೇಕೆಂಬುದು ನಮಗೆ ತಿಳಿಯುತ್ತಿಲ್ಲ. ಆದರೆ, ಇಂತಹ ಸಮಯವನ್ನು ನಾವು ಕಳೆಯಲೇಬೇಕಿದೆ. ನಮಗೆ ನೀರುಬೇಕೆಂದು ಹೇಳಿದ್ದಾರೆ. 

ಶುಕ್ರವಾರ ಬೆಳಿಗ್ಗೆ ಶೌಚಾಲಯಕ್ಕೆ ತೆರಳಲು ಕ್ಯೂನಲ್ಲಿ ನಿಲ್ಲಬೇಕಾಯಿತು. ಮತ್ತೊಂದು ಸಾರ್ವಜನಿಕ ಶೌಚಾಲಯವಿದೆ. ಆದರೆ, ಅಲ್ಲಿ ರೂ.5 ನೀಡಬೇಕು. ನಮಗೆ ಅಷ್ಟು ದುಡ್ಡು ಕೊಟ್ಟು ಶೌಚಾಲಯಕ್ಕೆ ತೆರಳು ಸಾಧ್ಯವಿಲ್ಲ. ಮನೆಯಿಂದಲೇ ಆಹಾರವನ್ನು ತೆಗೆದುಕೊಂಡು ಬಂದಿದ್ದೇವೆ. ಆದರೆ, ಆ ಆಹಾರ ಎಷ್ಟು ದಿನ ಇರಲು ಸಾಧ್ಯ? ಆಹಾರ ಇಲ್ಲದಿದ್ದರೂ ಪರವಾಗಿಲ್ಲ, ನಮಗೆ ನೀರು ಬೇಕೆಂದು ಗದಗ ನಿವಾಸಿ ಮನಂದಮ್ಮ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com